ಹುಬ್ಬಳ್ಳಿ:
ಬೈಕ್ ಮತ್ತು ಇತರೆ ವಾಹನಗಳಿಗೆ ಮಾರ್ಪಡಿಸಿದ ಸೈಲೆನ್ಸರ್ ಅಳವಡಿಸಿ ಕರ್ಕಶ ಶಬ್ದ ಮಾಡುತ್ತಾ ಸಾರ್ವಜನಿಕರಿಗೆ ತೀವ್ರ ಕಿರಿಕಿರಿ ಉಂಟು ಮಾಡುತ್ತಿದ್ದ ₹ 11 ಲಕ್ಷ ಮೌಲ್ಯದ ಒಟ್ಟು 202 ಸೈಲೆನ್ಸರ್‌ಗಳನ್ನು ನಗರದಲ್ಲಿ ನಾಶಪಡಿಸಲಾಯಿತು.ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ ನೇತೃತ್ವದಲ್ಲಿ ಶುಕ್ರವಾರ ಇಲ್ಲಿನ ಚೆನ್ನಮ್ಮ ಸರ್ಕಲ್‌ನಲ್ಲಿ ಸಾರ್ವಜನಿಕರ ಸಮ್ಮುಖದಲ್ಲೇ ಬುಲ್ಡೋಜರ್ ಹತ್ತಿಸಿ ನಾಶಪಡಿಸಲಾಯಿತು. ಈ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಯಿತು.
ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೊಲೀಸ್ ಕಮಿಷನರ್, ಕಮಿಷನರೇಟ್ ವತಿಯಿಂದ ಅವಳಿ ನಗರದಲ್ಲಿ ಟ್ರಾಫಿಕ್ ನಿಯಮಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಅದರೊಟ್ಟಿಗೆ ಜನರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದವರಿಗೆ ಪಾಠ ಕಲಿಸಲು ಡಿಸಿಪಿ ಹಾಗೂ ಎಸಿಪಿ ಮಾರ್ಗದರ್ಶನದಲ್ಲಿ ಸಂಚಾರ ಠಾಣೆ ಪೊಲೀಸರ ತಂಡ 20 ದಿನಗಳ ಅವಧಿಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ಬೈಕ್ ಹಾಗೂ ಇತರೆ ವಾಹನಗಳನ್ನು ವಶಕ್ಕೆ ಪಡೆದು ಸೈಲೆನ್ಸರ್ ಜಪ್ತಿ ಮಾಡಲಾಗಿತ್ತು. ಇದೀಗ ಅವುಗಳನ್ನು ಸಾರ್ವಜನಿಕರ ಸಮ್ಮುಖದಲ್ಲಿ ನಾಶಪಡಿಸುವ ಮೂಲಕ ಜಾಗೃತಿ ಮೂಡಿಸಲಾಗಿದೆ ಎಂದು ತಿಳಿಸಿದರು.ಕಳೆದ ತಿಂಗಳು ಧಾರವಾಡದಲ್ಲಿ ಸಂಚಾರ ಠಾಣೆ ಪೊಲೀಸರ ತಂಡ ವಿಶೇಷ ಕಾರ್ಯಾಚರಣೆ ನಡೆಸುವ ಮೂಲಕ ವಶಪಡಿಸಿಕೊಂಡಿದ್ದ 150 ಸೈಲೆನ್ಸರ್ ನಾಶಪಡಿಸಲಾಗಿತ್ತು. ಅದರಂತೆ ಹುಬ್ಬಳ್ಳಿಯ ವಿವಿಧೆಡೆ ಕರ್ಕಶ ಶಬ್ದ ಉಂಟು ಮಾಡುತ್ತಿದ್ದ ಮಾರ್ಪಡಿಸಿದ 202 ಸೈಲೆನ್ಸರ್‌ಗಳನ್ನು ಜಪ್ತಿ ಮಾಡಲಾಗಿತ್ತು. ಇವುಗಳನ್ನು ತಯಾರಿಸುತ್ತಿದ್ದ ಮೆಕ್ಯಾನಿಕ್ ಅಂಗಡಿ ಹಾಗೂ ಮೆಕ್ಯಾನಿಕ್‌ಗಳಿಗೆ ಈಗಾಗಲೇ ಎಚ್ಚರಿಕೆ ನೀಡಲಾಗಿತ್ತು ಎಂದರು.
ಈ ವೇಳೆ ಡಿಸಿಪಿ ಸಿ.ಆರ್. ರವೀಶ, ಸಂಚಾರ ವಿಭಾಗ ಎಸಿಪಿ ವಿನೋಧ ಮುಕ್ತೆದಾರ, ದಕ್ಷಿಣ ವಿಭಾಗ ಎಸಿಪಿ ಉಮೇಶ ಚಿಕ್ಕಮಠ, ಉತ್ತರ ವಿಭಾಗ ಎಸಿಪಿ ಶಿವಪ್ರಕಾಶ ನಾಯ್ಕ, ಸಂಚಾರ ಠಾಣೆ ಪಿಐಗಳಾದ ಜಾಕ್ಸನ್ ಡಿಸೋಜಾ, ರಮೇಶ ಗೋಕಾಕ, ಮರಳುಸಿದ್ದಪ್ಪ ಆರ್.ಡಿ. ಸೇರಿದಂತೆ ಇತರರು ಇದ್ದರು.