ಪುತ್ತೂರು: ಈ ಬಾರಿ ಸುರಿದ ಭಾರೀ ಮಳೆ, ಗಾಳಿ ಮತ್ತು ಭೂ ಕುಸಿತದ ಕಾರಣದಿಂದಾಗಿ ಅಡಕೆ ಬೆಳೆಯು ನೆಲಕಚ್ಚಿದೆ. ಜೊತೆಗೆ ತೆಂಗು, ಕಾಳುಮೆಣಸು, ಬೆಳೆಗಳು ನಾಶಗೊಂಡು ರೈತರು ಆರ್ಥಿಕ ಹೊಡೆತ ಅನುಭವಿಸುತ್ತಿದ್ದಾರೆ. ರೈತರಿಗೆ ನೆಮ್ಮದಿ ಇಲ್ಲದಂತಾಗಿರುವ ಈ ಸಮಯದಲ್ಲಿ ರಾಜ್ಯ ಸರ್ಕಾರವು ರೈತರ ಪರವಾಗಿ ನಿಲ್ಲಬೇಕು. ತಕ್ಷಣವೇ ಕೃಷಿ ನಾಶಕ್ಕೆ ಪರಿಹಾರ ಒದಗಿಸಬೇಕು ಎಂದು ಪುತ್ತೂರಿನ ಮಾಜಿ ಶಾಸಕ ಹಾಗೂ ದ.ಕ.ಜಿಲ್ಲಾ ಕೃಷಿಕ ಸಮಾಜದ ನಿರ್ದೇಶಕ ಸಂಜೀವ ಮಠಂದೂರು ಆಗ್ರಹಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದ.ಕ ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ, ಗಾಳಿ, ಸಿಡಿಲು, ಭೂ ಕುಸಿತ ಇದರಿಂದಾಗಿ ಜಿಲ್ಲೆಯಲ್ಲಿ ಅಡಕೆ ಕೃಷಿಕರಿಗೆ ಅಪಾರ ಹಾನಿಯಾಗಿದೆ. ಕಾಡುಪ್ರಾಣಿಗಳಿಂದ ರೈತರು ಸಮಸ್ಯೆಯನ್ನು ಕೂಡ ಎದುರಿಸುತ್ತಿದ್ದಾರೆ. ಜಿಲ್ಲೆಯ ಪ್ರಮುಖ ಆರ್ಥಿಕ ಬೆಳೆಯಾದ ಅಡಿಕೆಗೆ ಆಗಿರುವ ಹಾನಿ ಸೇರಿದಂತೆ ಇತರ ಬೆಳೆಗಳಾದ ತೆಂಗು, ಕಾಳುಮೆಣಸು ಬೆಳೆಗಳಿಗೂ ಅಪಾರ ಹಾನಿಯಾಗಿದ್ದು ಬೆಳೆ ನಾಶವಾಗಿದೆ. ಇದರಿಂದಾಗಿ ಕೃಷಿಕರು ಅಪಾರ ನಷ್ಟಕ್ಕೆ ಒಳಗಾಗಿದ್ದಾರೆ ಎಂದರು.ಅಡಕೆಯ ಹಳದಿ ರೋಗ ಪ್ರಸ್ತುತ ಕಡಬ, ಪುತ್ತೂರು ಹಾಗೂ ಬಂಟ್ವಾಳ ತಾಲೂಕಿಗೂ ವ್ಯಾಪಿಸಿದೆ ಎಲೆಚುಕ್ಕಿರೋಗ ಪ್ರತಿವರ್ಷ ಅಡಿಕೆ ಮರಕ್ಕೆ ಬಾದಿಸುತ್ತಿದ್ದು ಅಡಕೆ ಮರ ಸತ್ತು ಹೋಗುವಂತಹದ್ದು ಹಾಗೂ ಇಳುವರಿ ಕಡಿಮೆ ಯಾಗುವಂತಹದು ನಿರಂತರವಾಗಿ ನಡೆಯುತ್ತಾ ಇದೆ. ಈ ಮಳೆಗಾಲದಲ್ಲಿ ರೈತರಿಗೆ ಅಡಿಕೆ ಮರಕ್ಕೆ ಬೋರ್ಡೋ ಸಿಂಪಡಣೆಗೂ ಮಳೆಯಿಂದಾಗಿ ಅವಕಾಶವಾಗಿಲ್ಲ. ಇವೆಲ್ಲಾ ಕಾರಣದಿಂದ ರೈತರು ತೀರಾ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದರು.
ರಾಜ್ಯ ಸರ್ಕಾರ ತಕ್ಷಣ ಜಿಲ್ಲೆಯಲ್ಲಿ ಅಡಕೆ ಬೆಳೆಯ ಹಾನಿಯ ಕುರಿತು ಸಮೀಕ್ಷೆ ನಡೆಸಬೇಕು. ೨೦೧೮ ರಲ್ಲಿ ಸರಕಾರ ಅಡಿಕೆಗೆ ಕೊಳೆರೋಗಕ್ಕೆ ಉತ್ತಮ ಪರಿಹಾರ ಒದಗಿಸಿತ್ತು. ಕೇಂದ್ರ ಸರ್ಕಾರ ಕೂಡ ಮಾಡಿದ ೩೭ ಕೋಟಿ ರು. ಅನುದಾನಕ್ಕೆ ರಾಜ್ಯವು ಅನುದಾನ ಜೋಡಿಸಿ ರೈತರಿಗೆ ಪರಿಹಾರ ಹಾಗೂ ಪರ್ಯಾಯ ಬೆಳೆಗೆ ಅನುವು ಮಾಡಿಕೊಡಬೇಕು ಎಂದರು.ದ.ಕ.ಜಿಲ್ಲಾ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ವಿಜಯ ಕುಮಾರ್ ಕೋರಂಗ, ಉಪಾಧ್ಯಕ್ಷ ಚಂದ್ರ ಕೋಲ್ಚಾರ್, ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ ಮತ್ತು ಕೋಶಾಧಿಕಾರಿ ಕುಸುಮಾಧರ ಇದ್ದರು.