ಕನ್ನಡಪ್ರಭವಾರ್ತೆ ಹನೂರು
ಕಾಡಾನೆಗಳು ಅರಣ್ಯದಂಚಿನ ಜಮೀನುಗಳಿಗೆ ನುಗ್ಗಿ ಬೆಳೆ ನಾಶಪಡಿಸಿರುವ ಘಟನೆ ತಾಲೂಕಿನ ಲೋಕ್ಕನಹಳ್ಳಿ ಹೋಬಳಿಯ ಗಡಿಗ್ರಾಮ ಚಿಕ್ಕ ಹುಣಸೆಪಾಳ್ಯ ಗ್ರಾಮದಲ್ಲಿ ಬುಧವಾರ ರಾತ್ರಿ ಜರುಗಿದೆ.ತಾಲೂಕಿನ ಲೋಕ್ಕನಹಳ್ಳಿ ಹೋಬಳಿಯ ಗಡಿಗ್ರಾಮ ಚಿಕ್ಕ ಹುಣಸೆಪಾಳ್ಯ ಗ್ರಾಮದ ರೈತ ಪ್ರತಾಪ್ ಜಮೀನಿನಲ್ಲಿ ಲಕ್ಷಾಂತರ ರು.ವೆಚ್ಚ ಮಾಡಿ ಹಾಕಲಾಗಿರುವ ಬೆಳ್ಳುಳಿ ಮತ್ತು ಆಲೂಗಡ್ಡೆ ಬೆಳೆಯನ್ನು ಬುಧವಾರ ರಾತ್ರಿ ಕಾಡಾನೆಗಳು ಜಮೀನಿಗೆ ನುಗ್ಗಿ ಫಸಲನ್ನು ತುಳಿದು ಹಾಳು ಮಾಡಿದೆ.ಬಿಆರ್‌ಟಿ ವಲಯ ಅರಣ್ಯ ಪ್ರದೇಶ ಹಾಗೂ ಮಲೆ ಮಹದೇಶ್ವರ ವನ್ಯ ಧಾಮ ಎರಡು ವಲಯಗಳಲ್ಲೂ ಸಹ ಕಾಡುಪ್ರಾಣಿಗಳು ಸೇರಿದಂತೆ ಕಾಡಾನೆಗಳು ರೈತರ ಜಮೀನುಗಳಿಗೆ ರಾತ್ರಿ ವೇಳೆ ಬಂದು ಫಸಲನ್ನು ತುಳಿದು ಕೃಷಿ ಚಟುವಟಿಕೆಯ ಪರಿಕರಗಳನ್ನು ಹಾಳು ಮಾಡಿ ಲಕ್ಷಾಂತರ ರು. ಬೆಲೆಬಾಳುವ ಬೆಳ್ಳುಳ್ಳಿ ತುಳಿದು ನಾಶಪಡಿಸಿದ್ದು ಅಪಾರ ನಷ್ಠ ಉಂಟಾಗಿದ್ದು ಸಂಬಂಧಪಟ್ಟ ಅರಣ್ಯ ಅಧಿಕಾರಿಗಳು ಕಾಡುಪ್ರಾಣಿಗಳ ಹಾವಳಿ ತಡೆಗಟ್ಟಲು ವಿಫಲರಾಗಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ದಿನನಿತ್ಯ ಈ ಭಾಗದಲ್ಲಿ ಕಾಡುಪ್ರಾಣಿಗಳ ಹಾವಳಿಯಿಂದ ಒಂದಲ್ಲ ಒಂದು ಗ್ರಾಮಗಳ ರೈತರ ಜಮೀನುಗಳಲ್ಲಿ ಕಾಡಾನೆಗಳು ಸೇರಿದಂತೆ ಪ್ರಾಣಿಗಳ ಹಾವಳಿ ಮಿತಿಮೀರಿದೆ. 6 ಕ್ವಿಂಟಲ್ ಬೆಳ್ಳುಳ್ಳಿಯನ್ನು ತಮಿಳುನಾಡಿನ ಮಾರ್ಕೆಟ್‌ನಲ್ಲಿ ಲಕ್ಷಾಂತರ ರು. ವೆಚ್ಚ ಮಾಡಿ ತಂದು ಜಮೀನಿನಲ್ಲಿ ನಾಟಿ ಮಾಡಿ ಫಸಲು ಬಂದಿತ್ತು. ಈ ಸಂದರ್ಭದಲ್ಲಿ ಕಾಡಾನೆಗಳು ಜಮೀನಿಗೆ ನುಗ್ಗಿ ಫಸಲು ತುಳಿದು ನಾಶಪಡಿಸಿದೆ. ಜೊತೆಗೆ ಕೃಷಿ ಚಟುವಟಿಕೆಯ ಪರಿಕರಗಳಾದ ಹನಿ ನೀರಾವರಿ ಲ್ಯಾಟರ್ ಹಾಗೂ ಪರಿಕರಗಳನ್ನು ಹಾಳು ಮಾಡಿದೆ.ಅರಣ್ಯಾಧಿಕಾರಿಗಳು ಪರಿಶೀಲಿಸಿ ಸೂಕ್ತ ಪರಿಹಾರ ನೀಡಬೇಕು. ಜೊತೆಗೆ ಜಮೀನುಗಳಿಗೆ ಕಾಡುಪ್ರಾಣಿಗಳು ಬರದಂತೆ ಅರಣ್ಯ ಅಧಿಕಾರಿಗಳು ಶಾಶ್ವತ ಪರಿಹಾರ ಸೂಚಿಸಬೇಕು. -ಪ್ರತಾಪ್, ಚಿಕ್ಕ ಹುಣಸೆಪಾಳ್ಯ ರೈತ