ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು
ರಾಷ್ಟ್ರೀಯ ಹೆದ್ದಾರಿ-13 ರಸ್ತೆ ಹಾಗೂ ಸೇತುವೆ ನಿರ್ಮಾಣ ನೆಪದಲ್ಲಿ ರೈತರ ಅಡಕೆ ತೋಟ ಹಾಗೂ ವಿದ್ಯುತ್ ಕಂಬ ಹಾಳು ಮಾಡಿರುವುದನ್ನು ವಿರೋಧಿಸಿ ಸ್ಥಳೀಯ ರೈತರು ಹೊಳೆಬೆಳಗಲು ಕ್ರಾಸ್ ಹತ್ತಿರದ ಹೊಸ ಸೇತುವೆ ಕಾಮಗಾರಿ ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು.ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಪ್ರಮುಖವಾಗಿ ಬೆಳಗಲು ಗ್ರಾಮ ಸರ್ವೆ ನಂ.73/5 ಜಮೀನು ರಸ್ತೆಯ ಭದ್ರಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಮಾಡಲು 9.08 ಗುಂಟೆ ಭೂ ಸ್ವಾಧೀನ ಮಾಡಿಕೊಳ್ಳಲಾಗಿದೆ. ಈ ನಡುವೆ ತಮ್ಮ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ವೇಳೆ ನದಿ ದಡದಲ್ಲಿರುವ ಉಳಿಕೆ ಅಡಕೆ ತೋಟ ಕುಸಿದು ನದಿ ಪಾಲಾಗುತ್ತಿದೆ. ಜತೆಗೆ ಅಂಚಿನಲ್ಲಿದ್ದ ವಿದ್ಯುತ್ ಕಂಬ ಕೂಡ ಬಿದ್ದು ಹೋಗಿದ್ದು ಸಂಪರ್ಕ ಕಡಿತಗೊಂಡಿದೆ. ಇತ್ತೀಚೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ವಿದ್ಯುತ್ ಕಂಬ ಹಾಕಿಸಿದ್ದು ಮತ್ತೆ ಬಿದ್ದು ಹೋಗಿದೆ. ಇದರಿಂದ ಮುಂದಿನ ರೈತರ ಜಮೀನುಗಳಿಗೆ ಹೊಳೆ ನೀರು ಹಾಯಿಸಿಕೊಳ್ಳಲು ಸಾಧ್ಯವಾಗದೆ ಬೆಳೆ ಒಣಗುತ್ತಿದೆ. ಇದರಿಂದ ರೈತರಿಗೆ ಲಕ್ಷಾಂತರ ರುಪಾಯಿ ನಷ್ಟ ಆಗುತ್ತಿದೆ. ಈ ಬಗ್ಗೆ ಹೆದ್ದಾರಿ ಪ್ರಾಧೀಕಾರ ಎಂಜಿನಿಯರ್ ಅವರಿಗೆ ಹಲವು ಬಾರಿ ಮನವಿ ಮಾಡಲಾಗಿದೆ. ಆದರೆ ಅವರು ರೈತರ ವಿಷಯದಲ್ಲಿ ನಿರ್ಲಕ್ಷ ಧೋರಣೆ ತೋರುತ್ತಿದ್ದಾರೆ. ಇದರ ಸಂಬಂಧ ಘನ ನ್ಯಾಯಾಲಯದಲ್ಲಿ ದಾವಾ ಪ್ರಕರಣ ಸಂಖ್ಯೆ 74/2023 ರಂತೆ ಕೇಸು ದಾಖಲಿಸಲಾಗಿದೆ. ಆದರೂ ಕೂಡ ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಯಾವುದೇ ರೀತಿಯ ಸ್ಪಂದನೆ ಹಾಗೂ ಮುಂಜಾಗ್ರತಾ ಅಗತ್ಯ ಕ್ರಮ ಕೈಗೊಂಡಿರುವುದಿಲ್ಲ. ಈ ಬಗ್ಗೆ ಸಂಬಂಧಪಟ್ಟ ಇಂಜಿನಿಯರ್‌ಗಳು ತಕ್ಷಣ ಸ್ಥಳ ಪರಿಶೀಲಿಸಿ ರೈತರ ಸಮಸ್ಯೆ ಬಗೆ ಹರಿಸಿಕೊಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಈ ಸಂದರ್ಭ ಸ್ಥಳದಲ್ಲಿದ್ದ ಇಂಜಿನಿಯರ್ ನಾಗೇಂದ್ರ ಮಾತನಾಡಿ, ರೈತರಿಗೆ ಯಾವುದೇ ರೀತಿಯಲ್ಲೂ ತೊಂದರೆ ಆಗದಂತೆ ಎಚ್ಚರಿಕೆಯಿಂದ ಕಾಮಗಾರಿ ಮಾಡಲಾಗುತ್ತಿದೆ. ಆದರೆ ಇತ್ತೀಚೆಗೆ ಮಳೆ ಹೆಚ್ಚಾಗಿದ್ದು ನದಿ ಅಂಚಿನಲ್ಲಿ ಮಣ್ಣು ಕೊಚ್ಚಿ ಹೋಗಿದೆ. ಇದರಿಂದ ತೋಟ ಕುಸಿದು ಅಡಕೆ ಮರ ಹಾಗೂ ವಿದ್ಯುತ್ ಕಂಬ ಬಿದ್ದಿರುತ್ತವೆ. ಇದಕ್ಕೆ ಪರಿಹಾರ ವಾಗಿ ತಕ್ಷಣ ಮೆಸ್ಕಾಂ ಎಂಜಿನಿಯರ್ ಅವರನ್ನು ಸ್ಥಳಕ್ಕೆ ಕರೆಸಿ ವಿದ್ಯುತ್ ಲೈನ್ ಸರಿಪಡಿಸಿಕೊಡಲಾಗುತ್ತದೆ. ಮುಂದಿನ ದಿನಗಳಲ್ಲಿ ತಡೆಗೋಡೆ ನಿರ್ಮಿಸಿ ಜಮೀನು ಹಾಳಾಗ ದಂತೆ ಮಾಡಿಕೊಡಲಾಗುತ್ತದೆ ಎಂದು ಭರವಸೆ ನೀಡಿದರು.ಹಿರಿಯ ರೈತ ಗೋಪಾಲಕೃಷ್ಣ ಪಂಡಿತ್, ರೈತರ ಮುಖಂಡರ ಚಿಕ್ಕೂಡ್ಲಿ ಪ್ರಭಾಕರ, ಕೂಡ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವಿಜಯ್ ಕುಮಾರ್, ವಸಂತ ಕುಮಾರ್, ಸ್ಥಳೀಯ ರೈತರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.