ಕನ್ನಡಪ್ರಭ ವಾರ್ತೆ ನಂಜನಗೂಡು
ನಾವೆಲ್ಲ ಪರಿಸರ ಸಂರಕ್ಷಣೆ ನಮ್ಮ ಧರ್ಮ, ನಮ್ಮ ಹೊಣೆಗಾರಿಕೆ ಎಂಬುವುದನ್ನು ಮರೆತು ತಂತ್ರಜ್ಞಾನ, ಅಭಿವೃದ್ದಿ ಹೆಸರಿನಿಂದ ಪ್ರಕೃತಿಯ ನಾಶಕ್ಕೆ ಮುಂದಾಗಿರುವುದು ಕಳವಳಕಾರಿ ಸಂಗತಿ ಎಂದು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.ತಾಲೂಕಿನ ಚಿನ್ನದಗುಡಿ ಹುಂಡಿ ಬಳಿಯಲ್ಲಿ ಬಕಾರ್ಡಿ ಕೈಗಾರಿಕೆ ಅವರು ತಮ್ಮ ಸಿಎಸ್ ಆರ್ ಅನುದಾನದಲ್ಲಿ ಕೈಗೊಂಡಿರುವ ಅರಸನ ಕೆರೆ ಜೀರ್ಣೋದ್ಧಾರ ಕಾಮಗಾರಿಯನ್ನು ವೀಕ್ಷಿಸಿ ಕೆರೆಗೆ ಪೂಜೆ ಸಲ್ಲಿಸಿದ ನಂತರ ಅವರು ಮಾತನಾಡಿದರು.
ಮೈಸೂರು ಸಂಸ್ಥಾನ, ನಮ್ಮ ಪೂರ್ವಜರು ಹಿಂದಿನಿಂದಲೂ ಸಹ ಪರಿಸರ ಸಂರಕ್ಷಣೆಗೆ ವನ್ಯಜೀವಿ ಸಂರಕ್ಷಣೆಗೆ ಆದ್ಯತೆ ನೀಡಿದ್ದರು. ಯಾಕೆಂದರೆ ಮೈಸೂರಿನ ಜನತೆ ಸದಾ ಪರಿಸರ ಪ್ರೇಮಿಗಳಾಗಿದ್ದಾರೆ. ಆದ್ದರಿಂದಲೇ ನಮ್ಮ ಪೂರ್ವಜನರು ಐತಿಹಾಸಿಕ ಈ ಅರಸನ ಕೆರೆಯಲ್ಲಿ ಜೀವಕಳೆ ತುಂಬಿ ವನ್ಯ ಜೀವಿಗಳ ಸಂರಕ್ಷಣೆ ಜೊತೆಗೆ ಈ ಭಾಗದ ರೈತರ ಬದುಕಿಗೂ ಆಸರೆಯಾಗಿದ್ದರು. ಈ ಕೆರೆಗೆ ಭದ್ರತಾ ಸಿಬ್ಬಂದಿಗಳನ್ನೂ ನೇಮಿಸಿದ್ದರು. ನಾವು ಆಧುನಿಕತೆ ಹೆಸರಿನಲ್ಲಿ ನಾವು ಕರೆಗಳಿಗೆ ಪ್ಲಾಸ್ಟಿಕ್ ಎಸೆಯುವುದು, ತ್ಯಾಜ್ಯಗಳನ್ನು ಎಸೆಯುವ ಮೂಲಕ ಆಧುನಿಕತೆ ತಂತ್ರಜ್ಞಾನದ ಹೆಸರಿನಲ್ಲಿ ಕೆರೆ, ನದಿ ನಾಶಕ್ಕೆ ಮುಂದಾಗಿದ್ದೇವೆ. ಮತ್ತೆ ನಮ್ಮ ಪೂರ್ವಜರಂತೆ ನಾವು ಸಹ ಅದೇ ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ಕೆರೆ ಕಟ್ಟೆಗಳನ್ನು ಉಳಿಸಿ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ಕರೆ ನೀಡಿದರು.ಈ ಅರಸನ ಕೆರೆ ಸಂರಕ್ಷಣೆ ಗ್ರಾಮಸ್ಥರ ಜವಾಬ್ದಾರಿ:
ಬಕಾರ್ಡಿ ಕಂಪನಿ ತಮ್ಮ ಸಿಎಸ್ ಆರ್ ಅನುದಾನವನ್ನು ಬಳಸಿ ಇತಿಹಾಸವಿರುವ ಈ ಅರಸನ ಕೆರೆಯ ಜೀರ್ಣೊದ್ದಾರ ಕೆಲಸಕ್ಕೆ ಮುಂದಾಗಿರುವುದು ಶ್ಲಾಘನೀಯ ಕೆಲಸ, ಇದರಿಂದ ಅಂತರ್ಜಲ ಹೆಚ್ಚಾಗಿ ಈ ಭಾಗದ ರೈತರಿಗೆ ಅನುಕೂಲವಾಗಲಿದೆ. ಕೈಗಾರಿಕೆ ಕೆರೆ ಅಭಿವೃದ್ದಿಪಡಿಸಿ ತಮ್ಮ ಸಮಾಜಿಕ ಕಳಕಳಿ ತೋರಿದೆ. ಈ ಭಾಗದ ಗ್ರಾಮಸ್ಥರು ದಿನ ನಿತ್ಯ ಪೂಜೆ ಸಲ್ಲಿಸುವಂತೆ ಕೆರೆಯ ಸಂರಕ್ಷಣೆ ಕಾರ್ಯವನ್ನು ನಿತ್ಯ ಮಾಡುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದರು.ಹ್ಯಾಂಡ್ಸ್ ಜೋನ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಗುರುನಂದನ್ ಮಾತನಾಡಿ, ಸುಮಾರು 900 ಎಕರೆ ಪ್ರದೇಶವಿರುವ ಅರಸನ ಕೆರೆಯನ್ನು ಅಭಿವೃದ್ದಿ ಪಡಿಸುವ ಉದ್ದೇಶದಿಂದ ಈ ಕಾಮಗಾರಿಯನ್ನು ನಡೆಸಲಾಗುತ್ತಿದೆ. ಮೊದಲಿಗೆ ಬಕಾರ್ಡಿ ಕೈಗಾರಿಕೆಯ ಅನುದಾನವನ್ನು ಬಳಕೆ ಮಾಡಿಕೊಂಡು ಸುಮಾರು 11 ಎಕರೆ ಪ್ರದೇಶದಲ್ಲಿ ಕೆರೆಯ ಜೀರ್ಣೋದ್ದಾರ ಕೆಲಸಕ್ಕೆ ಮುಂದಾಗಿದ್ದೇವೆ. ಇದರಿಂದ ಸುಮಾರು 64 ಕೋಟಿ ಲೀಟರ್ ನೀರಿನ ಸಂಗ್ರಹಣೆಯಾಗಲಿದೆ. ವಿವಿಧ ಕಂಪನಿಗಳ ಸಿಎಸ್ ಆರ್ ಅನುದಾನ ಪಡೆದು ಈ ಕೆರೆಯ ಸಂಪೂರ್ಣ ಜೀರ್ಣೋದ್ದಾರಕ್ಕೆ ಮುಂದಾಗಲಿದ್ದೇವೆ ಎಂದು ಮಾಹಿತಿ ನೀಡಿದರು.
ಇಂದು ಕೆರೆಯ ಉದ್ಘಾಟನೆ:ಬಕಾರ್ಡಿ ಕಂಪನಿಯ ಸಿಎಸ್ಆರ್ ಅನುದಾನದಿಂದ ಜೀರ್ಣೋದ್ಧಾರಗೊಂಡಿರುವ ಈ ಅರಸನ ಕೆರೆಯನ್ನು ಜ. 12ರ ಶುಕ್ರವಾರ ಶಾಸಕ ದರ್ಶನ್ ಧ್ರುವನಾರಾಯಣ್ ಅವರು ಉಧ್ಘಾಟನೆಯನ್ನು ನೆರವೇರಿಸಲಿದ್ದಾರೆ. ವಿವಿಧ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಆದ್ದರಿಂದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಮನವಿ ಮಾಡಿದರು.
ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್, ಗ್ರಾಪಂ ಅಧ್ಯಕ್ಷ ದೊರೆಸ್ವಾಮಿ, ಉಪಾಧ್ಯಕ್ಷೆ ಶೋಭಾ ಪ್ರಭುಸ್ವಾಮಿ, ಮುಖಂಡರಾದ ಮಂಜುನಾಥ್, ಸುರೇಶ್, ಶಿವಸ್ವಾಮಿ, ರಂಗದಾಸ್, ವಿಜಯಕುಮಾರ್, ಹರ್ಷತೇಜ್, ಬಕಾರ್ಡಿ ಕಂಪನಿಯ ನಿರ್ದೇಶಕ ಮುತ್ತುಕುಮಾರ್, ಸಿಎಸ್ ಆರ್ ಮುಖ್ಯಸ್ಥ ಭರತ್ ಶರ್ಮ ಇದ್ದರು.