ಪರವಾನಗಿ ಪಡೆಯದೆ ಕ್ಲಿನಿಕ್ ನಡೆಸುವವರನ್ನು ಪತ್ತೆ ಹಚ್ಚಿ

KannadaprabhaNewsNetwork | Updated : May 23 2025, 12:06 AM IST
ಆಯುರ್ವೇದ ಕ್ಲಿನಿಕ್ ಗೆ ನೋಂದಣಿ ಪಡೆದು ಅಲೋಪತಿ ಚಿಕಿತ್ಸೆ ನೀಡುತ್ತಿರುವುದು ಕಂಡುಬರುತ್ತಿದೆ. ಇಂತಹ ವೈದ್ಯರುಗಳ ಬಗ್ಗೆ ಗಮನಹರಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸತ್ಯಭಾಮ ಅಧಿಕಾರಿಗಳಿಗೆ ಸೂಚಿಸಿದರು.
Follow Us

ಕನ್ನಡಪ್ರಭ ವಾರ್ತೆ, ಹಾಸನ

ಆಯುರ್ವೇದ ಕ್ಲಿನಿಕ್ ಗೆ ನೋಂದಣಿ ಪಡೆದು ಅಲೋಪತಿ ಚಿಕಿತ್ಸೆ ನೀಡುತ್ತಿರುವುದು ಕಂಡುಬರುತ್ತಿದೆ. ಇಂತಹ ವೈದ್ಯರುಗಳ ಬಗ್ಗೆ ಗಮನಹರಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸತ್ಯಭಾಮ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿಯ ಬಿ.ಸಿ.ರಾಯ್ ಸಭಾಂಗಣದಲ್ಲಿ ನಡೆದ ಕೆ.ಪಿ.ಎಂ.ಇ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪರವಾನಗಿ ಪಡೆಯದೆ ಕ್ಲಿನಿಕ್ ನಡೆಸುತ್ತಿರುವವರನ್ನು ಪತ್ತೆ ಹಚ್ಚಲು ನಿರ್ದೇಶನ ನೀಡಿದರು. ಅಂತವರ ವಿರುದ್ಧ ಪ್ರಕರಣ ದಾಖಲಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಖಾಸಗಿ ಕ್ಲಿನಿಕ್‌ಗಳಲ್ಲಿ ಸರ್ಕಾರದ ಮಾರ್ಗಸೂಚಿ ಅನ್ವಯ ಸಾರ್ವಜನಿಕರಿಗೆ ಸೌಲಭ್ಯಗಳನ್ನು ಒದಗಿಸಿದ್ದಾರೆಯೇ ಎಂಬುದನ್ನು ಪರೀಶಿಲಿಸಬೇಕು. ಕ್ಷಯ ರೋಗಿಗಳನ್ನು ಪರೀಕ್ಷೆ ನಡೆಸಿ ಹೆಚ್ಚಿನ ಗುರಿ ಸಾಧಿಸಲು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಬೇಕು. ಎಚ್‌.ಐ.ವಿ ರೆಡ್ ರಿಬ್ಬನ್ ಕ್ಲಬ್‌ಗಳನ್ನು ರಚನೆ ಮಾಡುವುದರ ಜೊತೆಗೆ ಶಾಲಾ, ಕಾಲೇಜು ಹಾಸ್ಟೆಲ್‌ಗಳಲ್ಲಿ ಅರಿವು ಕಾರ್ಯಕ್ರಮ ಮಾಡಬೇಕು. ಪಾಸಿಟಿವ್ ಬಂದಿರುವವರು ಡ್ರಗ್ ವ್ಯಸನಿಗಳಾಗಿದ್ದಾರೆಯೇ ಎಂದು ಗಮನಿಸಲು ಹೇಳಿದರು.

ದಡರಾ ಮತ್ತು ರುಬೆಲ್ಲಾ ಲಸಿಕೆ: ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿ ಯಾವುದೇ ಮಗುವಿಗೆ ತಪ್ಪದಂತೆ ಲಸಿಕೆ ಹಾಕಿಸಲು ಕ್ರಮ ವಹಿಸುವಂತೆ ತಿಳಿಸಿದರಲ್ಲದೆ, ಮಗು ಜನಿಸಿದ ೯ ಮತ್ತು ೧೬ನೇ ತಿಂಗಳಿನಲ್ಲಿ ದಡಾರ ಮತ್ತು ರುಬೆಲ್ಲಾ ಲಸಿಕೆ ನೀಡಲಾಗುತ್ತದೆ. ಸಾರ್ವಜನಿಕರು ತಮ್ಮ ಮಕ್ಕಳಿಗೆ ನಿಗಧಿತ ಸಮಯದಲ್ಲಿ ಲಸಿಕೆಗಳನ್ನು ಹಾಕಿಸಲು ಜಾಗೃತಿ ಮೂಡಿಸುವಂತೆ ತಿಳಿಸಿದರು.ದಡರಾ ಮತ್ತು ರುಬೆಲ್ಲಾ ಲಸಿಕೆ ನೀಡಲು ವಿಶೇ? ಅಭಿಯಾನ ಮೇ.೨೬ ರಿಂದ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರಲ್ಲದೆ, ಗ್ರಾಮೀಣ ಪ್ರದೇಶದಲ್ಲಿ ಟಾಂ ಟಾಂ ಮಾಡಿಸಿ, ರೇಡಿಯೋ ಮತ್ತು ಸ್ಥಳೀಯ ಕೇಬಲ್ ವಾಹಿನಿ ಗಳ ಮೂಲಕ ಹಾಗೂ ಪತ್ರಿಕೆಗಳಲ್ಲಿ ಜನರಿಗೆ ಮಾಹಿತಿ ತಲುಪುವಂತೆ ಕ್ರಮವಹಿಸಲು ಸೂಚಿಸಿದ ಅವರು ಪಲ್ಸ್ ಪೊಲೀಯೋ ಮಾದರಿಯಲ್ಲಿ ಎಲ್ಲಾ ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆ ಹಾಕಲು ಎಚ್ಚರವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಡೆಂಘೀ ಬಗ್ಗೆ ಎಚ್ಚರ: ಮಳೆಗಾಲ ಪ್ರಾರಂಭವಾಗಿದ್ದು, ಸೊಳ್ಳೆಗಳಿಂದ ಡೆಂಘೀ ಬರುವುದರಿಂದ ಮನೆಯ ಒಳಗೆ ಮತ್ತು ಸುತ್ತ ಮುತ್ತ, ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಕೈಗಾರಿಕೆ, ಕಟ್ಟಡ ನಿರ್ಮಾಣ ಸ್ಥಳದಲ್ಲಿ ನೀರು ನಿಲ್ಲದಂತೆ ನಿಗಾವಹಿಸಬೇಕು ಎಂದು ತಿಳಿಸಿದರು.

ಕಳೆದ ವರ್ಷ ಗುರುತಿಸಿದ್ದ ಹಾಟ್ ಸ್ಪಾಟ್‌ಗಳನ್ನು ಗಮನದಲ್ಲಿ ಇಟ್ಟುಕೊಂಡು ನಿಗಾವಹಿಸಿ ಆಗಿಂದಾಗ್ಗೆ ಭೇಟಿ ನೀಡಿ ಪರಿಶೀಲನೆ ಮಾಡುವಂತೆ ಸೂಚಿಸಿದರು.

ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಎಲ್ಲಾ ರೀತಿಯ ಔ?ಧಿಗಳ ದಾಸ್ತಾನು ಇರುವಂತೆ ನೋಡಿಕೊಳ್ಳಿ ಎಂದರಲ್ಲದೆ, ನೀರಿನಿಂದ ಉಂಟಾಗುವ ರೋಗ ರುಜಿನಗಳನ್ನು ತಡೆಯಲು ಮುನ್ನೆಚ್ಚರಿಕೆ ವಹಿಸಿ ಕುಡಿಯುವ ನೀರಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ಮಾಡಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತ, ಹೆಚ್ಚುವರಿ ಪೊಲೀಸ್ ವರಿ?ಧಿಕಾರಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕೃಷ್ಣ ಮೂರ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅನಿಲ್, ಹಿಮ್ಸ್ ನಿರ್ದೇಶಕರಾದ ಡಾ.ರಾಜಣ್ಣ, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ನಾಗಪ್ಪ, ಹಿಮ್ಸ್ ಪ್ರಸೂತಿ ವಿಭಾಗದ ತಜ್ಞರಾದ ಡಾ.ಸುಧಾ ಮತ್ತಿತರರು ಉಪಸ್ಥಿತರಿದ್ದರು.