ಕೊಪ್ಪಳ: ಆಧುನಿಕ ತಂತ್ರಜ್ಞಾನ ಯುಗದಲ್ಲಿ ತಾಂತ್ರಿಕ ತನಿಖಾ ಕೌಶಲಗಳನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳುವುದರಿಂದ ಅಪರಾಧಿಗಳ ಪತ್ತೆ ಹಾಗೂ ಅಪರಾಧ ಸಾಬೀತುಪಡಿಸುವುದು ಸುಲಭವಾಗಲಿದೆ. ಈ ನಿಟ್ಟಿನಲ್ಲಿ ತನಿಖಾಧಿಕಾರಿಗಳು ನಿರಂತರ ಅಧ್ಯಯನ ಮತ್ತು ತಾಂತ್ರಿಕ ಜ್ಞಾನವನ್ನು ಬೆಳೆಸಿಕೊಳ್ಳುವುದು ಅಗತ್ಯ ಎಂದು ಬಳ್ಳಾರಿ ವಿಭಾಗದ ಸರ್ಕಾರಿ ಕಾನೂನು ಅಧಿಕಾರಿ ಬಿ.ಎಸ್. ಪಾಟೀಲ್ ಹೇಳಿದರು.
ಪ್ರಸ್ತುತ ತನಿಖೆಯ ಸಂದರ್ಭದಲ್ಲಿ ವಿಡಿಯೊ, ಆಡಿಯೊ ಸೇರಿದಂತೆ ಹಲವು ಬಗೆಯ ತಾಂತ್ರಿಕ ಸಾಕ್ಷ್ಯಗಳು ಲಭ್ಯವಿವೆ. ಆದರೆ, ಅವುಗಳನ್ನು ಕಾನೂನುಬದ್ಧವಾಗಿ ಸಂಗ್ರಹಿಸುವುದು, ಸಂರಕ್ಷಿಸುವುದು ಮತ್ತು ನ್ಯಾಯಾಲಯದಲ್ಲಿ ಸಮರ್ಥವಾಗಿ ಮಂಡಿಸುವ ಜ್ಞಾನ ತನಿಖಾಧಿಕಾರಿಗಳಿಗೆ ಇರಬೇಕು. ತಂತ್ರಜ್ಞಾನದ ಬಳಕೆಯಿಂದ ತನಿಖೆ ಹಾಗೂ ನ್ಯಾಯಾಲಯದ ವಿಚಾರಣೆ ಪ್ರಕ್ರಿಯೆ ತ್ವರಿತಗೊಳ್ಳುತ್ತಿದ್ದು, ಪೊಲೀಸರು ಈ ಕುರಿತು ನಿರಂತರ ಮಾಹಿತಿ ಹೊಂದಬೇಕು ಎಂದು ತಿಳಿಸಿದರು.
ಪ್ರತಿಯೊಂದು ಪ್ರಕರಣದಲ್ಲಿಯೂ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಮತ್ತು ಸಂತ್ರಸ್ತರಿಗೆ ನ್ಯಾಯ ದೊರೆಯಬೇಕು ಎಂಬ ಉದ್ದೇಶದಿಂದ ಹೊಸ ಕಾನೂನುಗಳನ್ನು ಜಾರಿಗೆ ತರಲಾಗಿದೆ. ಹೀಗಾಗಿ, ಅವುಗಳ ಸದ್ಬಳಕೆ ಮಾಡಿಕೊಂಡು ತನಿಖೆಯ ಗುಣಮಟ್ಟ ಹೆಚ್ಚಿಸಬೇಕು. ವಿಶೇಷವಾಗಿ ಗಂಭೀರ ಅಪರಾಧ ಪ್ರಕರಣಗಳಲ್ಲಿ ಆಡಿಯೊ, ವಿಡಿಯೊ ಸಾಕ್ಷ್ಯಗಳನ್ನು ಸಂಗ್ರಹಿಸಬೇಕು. ಪಂಚನಾಮೆ ಸಂದರ್ಭದಲ್ಲಿ ಕೂಡ ವಿಡಿಯೊ ಚಿತ್ರೀಕರಣ ಮಾಡುವುದರಿಂದ ತನಿಖಾ ಪ್ರಕ್ರಿಯೆಯ ಪಾರದರ್ಶಕತೆ ಹೆಚ್ಚುವ ಜತೆಗೆ ಸಾಕ್ಷ್ಯಗಳನ್ನು ಪ್ರಶ್ನಿಸುವ ಅವಕಾಶ ಕಡಿಮೆಯಾಗುತ್ತದೆ ಎಂದರು.ಕಾರ್ಯಾಗಾರದ ಅಧ್ಯಕ್ಷತೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಾಯಿಲ್ ಬಾಗ್ಲಾ ವಹಿಸಿದ್ದರು.