ಸೋಮರಡ್ಡಿ ಅಳವಂಡಿ
ಇನ್ನು ಮುಂದೆ ರೈತರು ಆ್ಯಪ್ ಮೂಲಕ ಅರ್ಜಿ ಸಲ್ಲಿಸಿ ರಸಗೊಬ್ಬರ ಖರೀದಿಸಬಹುದು. ರಾಜ್ಯ ಸರ್ಕಾರ ಡಿಸೆಂಬರ್ ತಿಂಗಳಲ್ಲಿ ರಾಜ್ಯಾದ್ಯಂತ ಜಾರಿ ಮಾಡಲಿದೆ. ರೈತರು ತಮ್ಮ ಹತ್ತಿರದ ಅಂಗಡಿಯ ದಾಸ್ತಾನು ಪರಿಶೀಲಿಸಿ, ತಮಗೆ ಬೇಕಾದ ರಸಗೊಬ್ಬರವನ್ನು ಮೊಬೈಲ್ ಮೂಲಕವೇ ಕಾಯ್ದಿರಿಸಬಹುದು. ಮೂರು ದಿನದೊಳಗೆ ಖರೀದಿಸದಿದ್ದರೆ ಸ್ವಯಂಚಾಲಿತವಾಗಿ ರದ್ದಾಗಲಿದೆ.
ಹೀಗೆ ರಸಗೊಬ್ಬರ ಪಡೆಯಲು ಒಂದಷ್ಟು ಷರತ್ತುಗಳಿವೆ. ಎಫ್ಐಡಿ ಮೂಲಕ ತಿಂಗಳಿಗೆ ಒಂದು ಬಾರಿ ಮಾತ್ರ ಬುಕ್ಕಿಂಗ್ ಮಾಡಬಹುದು. ಎಫ್ಐಡಿಯಲ್ಲಿ ನೋಂದಣಿಯಾಗಿರುವ ಭೂಮಿಯ (ಪ್ರಮಾಣದ) ಲೆಕ್ಕಾಚಾರದಲ್ಲಿ ಮಾತ್ರ ರಸಗೊಬ್ಬರ ಪಡೆಯಲು ಅವಕಾಶವಿದೆ.ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ರಾಷ್ಟ್ರೀಯ ರಸಗೊಬ್ಬರ ಮಾರಾಟ ಚೌಕಟ್ಟು (National Fertilizer Sales Framework - NFSF) ಅಡಿಯಲ್ಲಿ ಈ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ. ರಸಗೊಬ್ಬರ ಮಾರಾಟ ಮತ್ತು ವಿತರಣೆಯನ್ನು ಸಮಗ್ರ ಡಿಜಿಟಲ್ ವೇದಿಕೆಯಡಿ ಮಾರಾಟ ವ್ಯವಸ್ಥೆ ಮಾಡಲಾಗಿದೆ.
ಈ ವ್ಯವಸ್ಥೆಯಡಿ ರಸಗೊಬ್ಬರ ಮಾರಾಟ ಅರ್ಜಿ ವ್ಯವಸ್ಥೆ (Fertilizer Sales Application System - FSAS) ಮತ್ತು ಸಮಗ್ರ ರಸಗೊಬ್ಬರ ನಿರ್ವಹಣಾ ವ್ಯವಸ್ಥೆ (Integrated Fertilizer Management System - iFMS) ಪರಸ್ಪರ ಸಂಪರ್ಕ ಹೊಂದಲಿವೆ. ಇದರಿಂದ ರಸಗೊಬ್ಬರದ ದಾಸ್ತಾನು, ಮಾರಾಟ, ಮಾರಾಟಗಾರರ ವಿವರ ಹಾಗೂ ವಿತರಣೆಯ ಮಾಹಿತಿ ರೈತರಿಗೂ ಸಿಗಲಿದೆ.
ಸರ್ಕಾರದ ನೇರ ನಿಗಾ: ರಸಗೊಬ್ಬರ ವಿತರಣೆಯಲ್ಲಿ ಪಾರದರ್ಶಕತೆ ತರುವುದು ಈ ಯೋಜನೆಯ ಮತ್ತೊಂದು ಪ್ರಮುಖ ಉದ್ದೇಶ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಡ್ಯಾಶ್ಬೋರ್ಡ್ ಮೂಲಕ ರಸಗೊಬ್ಬರದ ದಾಸ್ತಾನು, ಮಾರಾಟ, ಅಸಹಜ ವಹಿವಾಟು ಹಾಗೂ ರೈತರ ದೂರುಗಳ ಮೇಲೆ ನಿಗಾ ಇಡಬಹುದಾಗಿದೆ. ಅರ್ಹ ರೈತರಿಗೆ ರಸಗೊಬ್ಬರ ತಲುಪಿಸುವುದು ಮತ್ತು ಕೃತಕ ಅಭಾವ ಸೃಷ್ಟಿಸುವುದು, ಅಕ್ರಮ ದಾಸ್ತಾನು ಹಾಗೂ ದುರುಪಯೋಗಕ್ಕೆ ಕಡಿವಾಣ ಬೀಳಲಿದೆ.
ಡಿಸೆಂಬರ್ನಿಂದ ಜಾರಿ: ರೈತರು ಇನ್ಮುಂದೆ ರಸಗೊಬ್ಬರವನ್ನು ಆ್ಯಪ್ ಮೂಲಕವೇ ಪಡೆಯಬಹುದಾಗಿದೆ. ಡಿಸೆಂಬರ್ ತಿಂಗಳಲ್ಲಿ ಇದು ಜಾರಿಯಾಗಲಿದ್ದು, ರೈತರು ತಮ್ಮ ಹತ್ತಿರದ ಅಂಗಡಿಯಲ್ಲಿ ರಸಗೊಬ್ಬರವನ್ನು ಆ್ಯಪ್ ಮೂಲಕ ಬುಕ್ ಮಾಡಿಕೊಂಡು, ಖರೀದಿ ಮಾಡಬಹುದಾಗಿದೆ ಎಂದು ಕೃಷಿ ಇಲಾಖೆ ಕೊಪ್ಪಳ ಜೆಡಿ ಕೃಷ್ಣಮೂರ್ತಿ ಹೇಳಿದರು.