ಗುರಿ ಸಾಧನೆಗೆ ದೃಢ ನಿರ್ಧಾರ ಮುಖ್ಯ: ಶಾಸಕ ಪಿ.ರವಿಕುಮಾರ್

KannadaprabhaNewsNetwork |  
Published : Jan 13, 2024, 01:34 AM IST
೧೨ಕೆಎಂಎನ್‌ಡಿ-೪ಮಂಡ್ಯದ ಮಾಂಡವ್ಯ ಪದವಿಪೂರ್ವ ಕಾಲೇಜು ಆವರಣದಲ್ಲಿ ನಡೆದ ಸ್ವಾಮಿ ವಿವೇಕಾನಂದರ ೧೬೧ನೇಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಪಿ.ರವಿಕುಮಾರ್ ಉದ್ಘಾಟಿಸಿದರು. | Kannada Prabha

ಸಾರಾಂಶ

ಯುವಕರು ಈ ದೇಶದ ಆಸ್ತಿ. ದೇಶದ ಪ್ರಗತಿಗೆ ಯುವಶಕ್ತಿ ಸರಿಯಾದ ರೀತಿಯಲ್ಲಿ ಸದ್ಬಳಕೆ ಆಗಬೇಕು. ದುಶ್ಚಟಗಳಿಗೆ ಬಲಿಯಾಗದೆ ಮಾನವೀಯ ಮೌಲ್ಯ ಬೆಳೆಸಿಕೊಳ್ಳಬೇಕು. ವಿವೇಕಾನಂದರಂತಹ ಆದರ್ಶ ಪುರುಷರನ್ನು ಮಾದರಿಯಾಗಿಸಿಕೊಂಡಾಗ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಲು ಸಾಧ್ಯವಾಗುತ್ತದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಯುವಕರು ಗುರಿ ಸಾಧನೆ ಮಾಡುವುದಕ್ಕೆ ದೃಢ ನಿರ್ಧಾರ ಮಾಡಬೇಕು. ಆಗ ಯಶಸ್ಸು ಶತಸ್ಸಿದ್ಧ ಎಂದು ಶಾಸಕ ಪಿ. ರವಿಕುಮಾರ್ ಹೇಳಿದರು.

ಶುಕ್ರವಾರ ನಗರದ ಮಾಂಡವ್ಯ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆದ ಸ್ವಾಮಿ ವಿವೇಕಾನಂದರ ೧೬೧ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯುವಕರು ಈ ದೇಶದ ಆಸ್ತಿ. ದೇಶದ ಪ್ರಗತಿಗೆ ಯುವಶಕ್ತಿ ಸರಿಯಾದ ರೀತಿಯಲ್ಲಿ ಸದ್ಬಳಕೆ ಆಗಬೇಕು. ಆಗ ಮಾತ್ರ ರಾಷ್ಟ್ರ ಅಭಿವೃದ್ಧಿ ಪಥದಲ್ಲಿ ಮುನ್ನಡೆಯಲು ಸಾಧ್ಯ ಎಂದು ನುಡಿದರು.

ಯುವಕರು ದುಶ್ಚಟಗಳಿಗೆ ಬಲಿಯಾಗದೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ವಿವೇಕಾನಂದರಂತಹ ಆದರ್ಶಪುರುಷರನ್ನು ಮಾದರಿಯಾಗಿಸಿಕೊಂಡಾಗ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಯುವಕರು ಸಂಘಟಿತರಾದಾಗ ನವಭಾರತ ನಿರ್ಮಾಣ ಸಾಧ್ಯವಾಗಲಿದೆ. ದೇಶದಲ್ಲಿ ಏನಾದರೊಂದು ಬದಲಾವಣೆ ತರಬೇಕಾದರೆ ಅದು ಯುವಕರಿಂದ ಮಾತ್ರ ಸಾಧ್ಯ. ಯುವಜನಾಂಗ ಎಚ್ಚೆತ್ತುಕೊಂಡು ರಾಷ್ಟ್ರವನ್ನು ಸುಭದ್ರವಾಗಿ ಕಟ್ಟಿ ಬೆಳೆಸುವುದಕ್ಕೆ ಪಣ ತೊಡಬೇಕು. ವಿವೇಕಾನಂದರ ಜೀವನಾದರ್ಶಗಳನ್ನು ರೂಢಿಸಿಕೊಂಡು ಆದರ್ಶಮಯ ಜೀವನ ನಡೆಸುವಂತೆ ಸಲಹೆ ನೀಡಿದರು.

ಸ್ವಾಮಿ ವಿವೇಕಾನಂದರು ಅಮೆರಿಕಾ ದೇಶಕ್ಕೆ ಹೋದಾಗ ಕೇವಲ ೩೫ ವರ್ಷ. ಅವರು ಖಾವಿಧಾರಿಯಾಗಿ ಹೋಗಿ ಭಾಷಣ ಮಾಡುವ ವೇಳೆ ಇಡೀ ಸಭಾಂಗಣ ಎದ್ದು ಹೊರಗೆ ಹೋಗುತ್ತಿತ್ತು. ಅಂತಹ ಸಂದರ್ಭದಲ್ಲಿ ಅವರು ಪ್ರಾರಂಭಿಸಿದ ಮಾತಿನಿಂದ ಹೊರಗೆ ಹೋದವರು ಮತ್ತೆ ಸಭಾಂಗಣದೊಳಗೆ ಬಂದು ಆಸೀನರಾದರು. ಅವರು ಮಾತು ಮುಗಿಸುವಷ್ಟರಲ್ಲಿ ಭಾರತ ವಿಶ್ವದ ಗಮನ ಸೆಳೆದಿತ್ತು. ಇಂತಹ ವೀರ ಸನ್ಮಾಸಿಯ ಜಯಂತಿ ಆಚರಿಸುವ ಸಂದರ್ಭದಲ್ಲಿ ಅವರಂತೆ ಗುರಿ ಇಟ್ಟುಕೊಂಡು ಯಾವುದೇ ಕೆಲಸ ಮಾಡಿದರೂ ಅದು ಸಾಧನೆಯಾಗುವುದರಲ್ಲಿ ಅಚ್ಚರಿಪಡುವಂತಿಲ್ಲ ಎಂದರು.

ಪ್ರಸ್ತುತ ಎಲ್ಲ ಕ್ಷೇತ್ರಗಳಲ್ಲೂ ಸ್ಪರ್ಧೆ ಇದೆ. ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲೂ ಖಾಸಗೀ ಶಿಕ್ಷಣ ಸಂಸ್ಥೆಗಳು ಬರುತ್ತಿವೆ. ಹೆಚ್ಚಿನ ಪರಿಶ್ರಮದಿಂದ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆ ಮಾಡಿದರಷ್ಟೇ ಉಳಿಯಲು ಸಾಧ್ಯ ಎಂಬುದನ್ನು ಎಲ್ಲರೂ ಮನಗಾಣಬೇಕು ಎಂದು ಸಲಹೆ ನೀಡಿದರು.

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ನಾಗಣ್ಣಗೌಡ, ಭಾರತೀಯ ರೆಡ್‌ಕ್ರಾಸ್ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ಜೆಎಸ್‌ಎಸ್ ಉನ್ನತ ಶಿಕ್ಷಣ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ. ಭೀಮರಾಜ್ ಈರೇಗೌಡ ವಿಶೇಷ ಉಪನ್ಯಾಸ ನೀಡಿದರು.

ಜಿಲ್ಲಾ ಯುವ ಪರಿಷತ್ ಅಧ್ಯಕ್ಷರಾಗಿ ಮಹದೇವು ಮತ್ತು ತಂಡದವರಿಗೆ ಮಾಜಿ ಅಧ್ಯಕ್ಷ ಮಂಗಲ ಎಂ. ಯೋಗೀಶ್ ಜವಾಬ್ದಾರಿ ಹಸ್ತಾಂತರಿಸಿದರು. ಕೃಷಿಕ್ ಲಯನ್ಸ್ ಆಡಳಿತಾಕಾರಿ ಕೆ.ಟಿ. ಹನುಮಂತು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ