ಸುಂಟಿಕೊಪ್ಪ: 26ರಿಂದ ರಾಜ್ಯಮಟ್ಟದ ಹೊನಲು ಬೆಳಕಿನ ಪುಟ್ಬಾಲ್ ಪಂದ್ಯಾವಳಿ

KannadaprabhaNewsNetwork | Published : Jan 13, 2024 1:34 AM

ಸಾರಾಂಶ

ಪ್ರಥಮ ಸ್ಥಾನ ಪಡೆದ ತಂಡಕ್ಕೆ 66,666 ನಗದು ಮತ್ತು ಆಕರ್ಷಕ ರೋಸ್‌ವುಡ್‌ನಿಂದ ತಯಾರಿಸಿದ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ 33,333 ನಗದು ಮತ್ತು ಆಕರ್ಷಕ ರೋಸ್‌ವುಡ್‌ನಿಂದ ತಯಾರಿಸಿದ ಆಕರ್ಷಕ ಟ್ರೋಫಿ ನೀಡಲಾಗುವುದು.

ಕನ್ನಡಪ್ರಭ ವಾರ್ತೆ ಮಡಿಕೇರಿ ಗಣರಾಜ್ಯೋತ್ಸವ ಅಂಗವಾಗಿ ಅಮಿಟಿ ಯೂನೈಟೆಡ್ ಎಫ್‌ಸಿ ವತಿಯಿಂದ ಸುಂಟಿಕೊಪ್ಪದ ಗದ್ದೆಹಳ್ಳದಲ್ಲಿ 5+2 ಆಟಗಾರರ ರಾಜ್ಯ ಮಟ್ಟದ ಹೊನಲು ಬೆಳಕಿನ ಫುಟ್ಬಾಲ್ ಪಂದ್ಯಾವಳಿ ನಡೆಯಲಿದೆ.ಮಡಿಕೇರಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಂಘದ ಸದಸ್ಯ ಎಸ್.ಎ.ಸತ್ತಾರ್ ಇಚ್ಚ, ಜ.26 ರಿಂದ 28ರ ವರೆಗೆ ಸುಂಟಿಕೊಪ್ಪದ ಗದ್ದೆಹಳ್ಳದ ಸೈಟ್ ಮೈದಾನದಲ್ಲಿ ಪಂದ್ಯಾವಳಿ ನಡೆಯಲಿದೆ. ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಪಂದ್ಯಾವಳಿ ನಡೆಯಲಿದ್ದು, ಆಸಕ್ತ ತಂಡಗಳು ಮೈದಾನ ಶುಲ್ಕ ನೀಡಿ ನೋಂದಾಯಿಸುವಂತೆ ತಿಳಿಸಿದರು. ಪಂದ್ಯಾವಳಿಯ ಸಲುವಾಗಿ ಜ.26ರಂದು ಸುಂಟಿಕೊಪ್ಪದ ನುಜುಮಾ ನುರಿಯಾ ಮದ್ರಾಸ್ ಹಾಲ್‌ನಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ ಎಂದರು.ಕ್ರೀಡಾಕೂಟದ ಉಸ್ತುವಾರಿ ನೌಫಲ್‌ ಮಾತನಾಡಿ, ಗ್ರಾಮೀಣ ಪ್ರತಿಭೆಗಳನ್ನು ಗುರುತಿಸುವ ನಿಟ್ಟಿನಲ್ಲಿ ಕ್ರೀಡಾಕೂಟ ಆಯೋಜಿಸಲಾಗಿದ್ದು, 40 ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು. ಪ್ರಥಮ ಸ್ಥಾನ ಪಡೆದ ತಂಡಕ್ಕೆ 66,666 ನಗದು ಮತ್ತು ಆಕರ್ಷಕ ರೋಸ್‌ವುಡ್‌ನಿಂದ ತಯಾರಿಸಿದ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ 33,333 ನಗದು ಮತ್ತು ಆಕರ್ಷಕ ರೋಸ್‌ವುಡ್‌ನಿಂದ ತಯಾರಿಸಿದ ಆಕರ್ಷಕ ಟ್ರೋಫಿ ಹಾಗೂ ವಿವಿಧ ವೈಯಕ್ತಿಕ ಬಹುಮಾನವನ್ನು ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ 6366680931, 6362245190 ಸಂಪರ್ಕಿಸಬಹುದಾಗಿದೆ.

30 ಸಾಧಕರಿಗೆ ಸನ್ಮಾನ: ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ 30 ಸಾಧಕರನ್ನು ಸನ್ಮಾನಿಸಿ ಗೌರವಿಸಲಾಗುತ್ತದೆ ಎಂದ ಅವರು ಸಂಘವು ಕ್ರೀಡೆ ಜೊತೆಗೆ ಹಲವು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿದ್ದು, ಪಂದ್ಯಾವಳಿಯಿಂದ ಬಂದ ಹಣವನ್ನು ಬಡ ವಿದ್ಯಾರ್ಥಿಗಳ ಶಿಕ್ಷಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸುತ್ತಿದೆ ಎಂದರು.ಸುಂಟಿಕೊಪ್ಪದ ಗದ್ದೆಹಳ್ಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಾನ್ವಿತ ಕ್ರೀಡಾಪಟುಗಳಿದ್ದರೂ ಮೈದಾನದ ಕೊರತೆ ಇವರನ್ನು ಕಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಈಗಾಗಲೇ ಶಾಸಕರ ಗಮನ ಸೆಳೆಯಲಾಗಿದ್ದು, ಮುಂದಿನ ದಿನಗಳಲ್ಲಿ ಮೈದಾನವನ್ನು ನಿರ್ಮಿಸಿಕೊಡುವುದಾಗಿ ಕ್ಷೇತ್ರದ ಶಾಸಕರು ಭರವಸೆ ನೀಡಿದ್ದಾರೆ ಎಂದರು.ಪಂದ್ಯಾವಳಿಯ ಲಾಂಛನವನ್ನು ಚಿತ್ತಾರ ವಾಹಿನಿಯ ವ್ಯವಸ್ಥಾಪಕ ನಿರ್ದೇಶಕಿ ಸವಿತಾ ರೈ ಬಿಡುಗಡೆಗೊಳಿಸಿದರು. ಕೂರ್ಗ್ ಬ್ಲಡ್ ಫೌಂಡೇಶನ್ ಸದಸ್ಯ ಎಂ.ಇ.ಅಬ್ಬಾಸ್, ಅಮಿಟಿ ಯೂನೈಟೆಡ್ ಎಫ್‌ಸಿ ಸದಸ್ಯರಾದ ಎಂ.ಎಂ.ಶರೀಫ್, ಕೆ.ಸಾಹೀರ್ ಇದ್ದರು.

Share this article