ಭ್ರಷ್ಟಾಚಾರ ಕಂಡು ಬಂದಲ್ಲಿ ಕಠಿಣ ಕ್ರಮ

KannadaprabhaNewsNetwork |  
Published : Jan 13, 2024, 01:34 AM IST
ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಸಾರ್ವಜನಿಕ ಅಹವಾಲು ಸ್ವೀಕರಿಸಿದರು. | Kannada Prabha

ಸಾರಾಂಶ

ಜಿಲ್ಲೆಯ ಅರಣ್ಯ ಪ್ರದೇಶವನ್ನು ಇನ್ನಷ್ಟು ಬೆಳೆಸಬೇಕು. ಜಿಲ್ಲೆಯಲ್ಲಿ 2118 ಕೆರೆ ಗುರುತಿಸಿ ಸರ್ವೇ ಮಾಡಲಾಗಿದ್ದು, ಅತಿಕ್ರಮಣಗೊಂಡಿದ್ದ 274 ಕೆರೆ ತೆರೆಗೊಳಿಸಲಾಗಿದೆ. ಅರಣ್ಯದ ಒಳಗೆ ಇರುವ ಕೆರೆಗಳ ಬಗ್ಗೆ ಸರ್ವೇ ಮಾಡಿ ಅತಿಕ್ರಮಣವಾಗಿದ್ದಲ್ಲಿ ತೆರವುಗೊಳಿಸಬೇಕು.

ಅಂಕೋಲಾ:

ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಅನಗತ್ಯ ವಿಳಂಬ, ಅನರ್ಹರಿಗೆ ಸೌಲಭ್ಯಗಳ ಮಂಜೂರಾತಿ, ನಿರ್ಲಕ್ಷ್ಯತನ, ಭ್ರಷ್ಟಾಚಾರ ಕುರಿತು ದೂರುಗಳು ಬಂದಲ್ಲಿ ಪ್ರಕರಣ ದಾಖಲಿಸಿ ಕಠಿಣ ಕ್ರಮಕೈಗೊಳ್ಳಲಾಗುತ್ತದೆ ಎಂದು ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಎಚ್ಚರಿಕೆ ನೀಡಿದರು.ಇಲ್ಲಿನ ನಾಡವರ ಸಮುದಾಯ ಭವನದಲ್ಲಿ ಶುಕ್ರವಾರ ನಡೆದ ಉತ್ತರ ಕನ್ನಡ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಹಾಗೂ ಸಾರ್ವಜನಿಕ ಸಮಸ್ಯೆಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಯಾವುದೇ ಇಲಾಖೆ ವಿರುದ್ಧ ಸಲ್ಲಿಕೆಯಾಗುವ ದೂರುಗಳ ಬಗ್ಗೆ ಪರಿಶೀಲಿಸಲು ಲೋಕಾಯುಕ್ತದಲ್ಲಿ ಆಡಳಿತ, ತಾಂತ್ರಿಕ ಸೇರಿದಂತೆ ಪ್ರತ್ಯೇಕ ವಿಭಾಗಗಳಿವೆ. ಅವುಗಳ ಮೂಲಕ ಸತ್ಯಶೋಧನೆ ನಡೆಸಲಾಗುತ್ತದೆ. ಸರ್ಕಾರಿ, ಅರೆ ಸರ್ಕಾರಿ, ನಿಗಮ, ಮಂಡಳಿಗಳ ನೌಕರರು ಲೋಕಾಯುಕ್ತ ವ್ಯಾಪ್ತಿಯಲ್ಲಿ ಬರಲಿದ್ದು, ಕರ್ತವ್ಯ ದಲ್ಲಿ ಭ್ರಷ್ಟತೆ, ಸಾರ್ವಜನಿಕ ಹಣದ ದುರುಪಯೋಗ, ಕಾಮಗಾರಿಗಳಲ್ಲಿ ಭ್ರಷ್ಟತೆ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು. ಸರ್ಕಾರವು ತನ್ನ ಸಿಬ್ಬಂದಿಗೆ ಉತ್ತಮ ವೇತನ, ಸೌಲಭ್ಯ ನೀಡುತ್ತಿದ್ದು ಪ್ರಾಮಾಣಿಕವಾಗಿ ಸಾರ್ವಜನಿಕರಿಗೆ ಸೇವೆ ಒದಗಿಸಬೇಕು ಎಂದು ತಾಕೀತು ಮಾಡಿದರು.ತಾಲೂಕು ಪಂಚಾಯಿತಿ ಮೂಲಕ ಹಳ್ಳಿಗಳ ಅಭಿವೃದ್ಧಿ ಕಾಮಗಾರಿ ಪಾರದರ್ಶಕತೆಯಿಂದ ಕೂಡಿರಬೇಕು. ರಸ್ತೆಯ ಗುಣಮಟ್ಟ ಇರಬೇಕು. ಅನರ್ಹರಿಗೆ ಸೌಲಭ್ಯ ಒಡಗಿಸಬಾರದು. ಜಲ ಜೀವನ್ ಮಿಷನ್ ಯೋಜನೆಯಡಿ ಗುಣಮಟ್ಟದ ಪೈಪ್ ಬಳಸಿ ಶುದ್ಧ ಕುಡಿಯುವ ನೀರು ಒದಗಿಸಿ, ವಾಟರ್ ಟ್ಯಾಂಕ್ ಕಾಲಕಾಲಕ್ಕೆ ಸ್ವಚ್ಛಗೊಳಿಸಬೇಕು. ಕಲುಷಿತ ನೀರು ಸರಬರಾಜು ಬಗ್ಗೆ ದೂರು ಬಂದಲ್ಲಿ ಅತ್ಯಂತ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.ಜಿಲ್ಲೆಯ ಅರಣ್ಯ ಪ್ರದೇಶವನ್ನು ಇನ್ನಷ್ಟು ಬೆಳೆಸಬೇಕು. ಜಿಲ್ಲೆಯಲ್ಲಿ 2118 ಕೆರೆ ಗುರುತಿಸಿ ಸರ್ವೇ ಮಾಡಲಾಗಿದ್ದು, ಅತಿಕ್ರಮಣಗೊಂಡಿದ್ದ 274 ಕೆರೆ ತೆರೆಗೊಳಿಸಲಾಗಿದೆ. ಅರಣ್ಯದ ಒಳಗೆ ಇರುವ ಕೆರೆಗಳ ಬಗ್ಗೆ ಸರ್ವೇ ಮಾಡಿ ಅತಿಕ್ರಮಣವಾಗಿದ್ದಲ್ಲಿ ಕೂಡ ಅವುಗಳನ್ನು ತೆರವುಗೊಳಿಸುವಂತೆ ತಿಳಿಸಿದರು. ಅರಣ್ಯ ಮತ್ತು ವನ್ಯಜೀವಿಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನಿರ್ಮಿಸುವ ಹೊಣೆಗಾರಿಕೆ ಅರಣ್ಯ ಇಲಾಖೆ ಮೇಲಿದ್ದು ಇದರಲ್ಲಿ ಯಾವುದೇ ಲೋಪ ಉಂಟಾಗದಂತೆ ಕರ್ತವ್ಯ ನಿರ್ವಹಿಸಬೇಕು. ಅರಣ್ಯದಲ್ಲಿ ಬಿದ್ದಿರುವ ಮರಗಳ ಬದಲಿಗೆ ಹೊಸ ಗಿಡ ನೆಟ್ಟು ಅರಣ್ಯವನ್ನು ಮತ್ತಷ್ಟು ಅಭಿವೃದ್ಧಿಗೊಳಿಸಬೇಕು ಎಂದರು.ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಚಿಲ್ಲರೆ ಅಂಗಡಿ, ದಾಬಾಗಳಲ್ಲಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಸಲ್ಲಿಕೆಯಾಗಿದ್ದು, ಈ ಕುರಿತಂತೆ ಅಬಕಾರಿ ಇಲಾಖೆಯಿಂದ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿದ ಅವರು, ಅಬಕಾರಿ ಪರವಾನಗಿ ದುರುಪಯೋಗವಾಗದಂತೆ ತಡೆಯಬೇಕು ಹಾಗೂ ಅಬಕಾರಿ ಕಾನೂನು ಉಲ್ಲಂಘಿಸುವವರು ಪರವಾನಗಿ ರದ್ದುಗೊಳಿಸಬೇಕು ಎಂದರು.ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ, ಜಿಪಂ ಸಿಇಒ ಈಶ್ವರಕುಮಾರ ಕಾಂದು, ಎಸ್‌ಪಿ ಎನ್. ವಿಷ್ಣುವರ್ಧನ್, ಲೋಕಾಯುಕ್ತ ಎಸ್‌ಪಿ ಕುಮಾರ ಚಂದ್ರ, ಅಪರ ಜಿಲ್ಲಾಧಿಕಾರಿ ಪ್ರಕಾಶ ರಾಜಪೂತ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ