ಆರೋಗ್ಯ ಶಿಕ್ಷಣ ಕಾರ್ಯಕ್ರಮ ಉದ್ಘಾಟನೆ
ಮುಂದಿನ ಯುವ ಪೀಳಿಗೆಯನ್ನು ವ್ಯಸನ ಮುಕ್ತಗೊಳಿಸಲು ಜಾಗೃತಿ ಮತ್ತು ದೃಢಸಂಕಲ್ಪ ಅವಶ್ಯ ಎಂದು ಆರೋಗ್ಯ ಭಾರತಿ ಕರ್ನಾಟಕ, ಯಲ್ಲಾಪುರ ಶಾಖೆಯ ಉಪಾಧ್ಯಕ್ಷ ಡಾ. ನಾಗರಾಜ ಭಟ್ಟಹೇಳಿದರು.
ಸೋಮವಾರ ಪಟ್ಟಣದ ಕಾಳಮ್ಮನಗರದಲ್ಲಿ ಆರೋಗ್ಯಭಾರತಿ ಯಲ್ಲಾಪುರ ಶಾಖೆ, ಆರೋಗ್ಯ ಇಲಾಖೆ ಹಾಗೂ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಯಲ್ಲಾಪುರ ಇವುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ತಂಬಾಕುರಹಿತ ದಿನಾಚರಣೆ- ೨೦೨೬ ಅಂಗವಾಗಿ ತಂಬಾಕು ಸೇವನೆಯ ದುಷ್ಪರಿಣಾಮಗಳು ಎಂಬ ಕುರಿತು ಏರ್ಪಡಿಸಿದ್ದ ಆರೋಗ್ಯ ಶಿಕ್ಷಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಾಂಶುಪಾಲ ಬಸವರಾಜ್ ಪಾಟೀಲ್ ಮಾತನಾಡಿ, ಯುವ ಜನತೆ ಯಾವುದೇ ದುಶ್ಚಟಕ್ಕೆ ಒಳಗಾಗದೆ ಸುಂದರ ಬದುಕನ್ನು ಅನುಭವಿಸುವಂತಾಗಬೇಕು ಎಂದರು. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮಹೇಶ್ ತಾಳಿಕೋಟಿ ಮಾತನಾಡಿ, ತಂಬಾಕು ತ್ಯಜಿಸಲು ತೀರಾ ಕಷ್ಟ ಎನಿಸಿದರೆ ವೈದ್ಯರ ಸೂಕ್ತ ಸಲಹೆ ಮೇರೆಗೆ ನಿಕೊಗಮ್ ಬಳಸಬಹುದು ಎಂದ ಅವರು, ಆಪ್ತ ಸಮಾಲೋಚನೆ ಸೌಲಭ್ಯ ಕೂಡ ಇರುವುದಾಗಿ ತಿಳಿಸಿದರು.
ಯಲ್ಲಾಪುರ ಆರೋಗ್ಯಭಾರತಿ ಸಹಕಾರ್ಯದರ್ಶಿ ಎಂ.ಬಿ. ಶೇಟ್ ಹಾಗೂ ಆರೋಗ್ಯ ನಿರೀಕ್ಷಣಾಧಿಕಾರಿ ಪ್ರವೀಣ್ ಇನಾಮದಾರ್ ಜಾನಪದಗೀತೆ ಪ್ರಸ್ತುತ ಪಡಿಸುವ ಮೂಲಕ ತಂಬಾಕು ಬೇಡ, ಜೀವನ ಬೇಕು ಎನ್ನುವ ಸಂದೇಶ ಸಾರಿದರು. ಉಪನ್ಯಾಸಕ ಅವಿನಾಶ್ ತಂಬಾಕುರಹಿತ ದಿನಾಚರಣೆಯ ಈ ವರ್ಷದ ಘೋಷವಾಕ್ಯ ತಿಳಿಸಿದರು.