ದೇವದಾಸಿ ಪದ್ಧತಿ ಬೇರು ಸಮೇತ ನಿರ್ಮೂಲನೆ ಆಗಲಿ

KannadaprabhaNewsNetwork | Published : Mar 16, 2025 1:49 AM

ಸಾರಾಂಶ

೧೯೮೨ರಲ್ಲಿ ದೇವದಾಸಿ ಸಮರ್ಪಣಾ ನಿಷೇಧ ಕಾಯ್ದೆ ಬಂದರೂ ಈ ಹಿಂದೆ ಎರಡು ಪ್ರಕರಣ ದಾಖಲೆಯಾಗಿವೆ. ದೇವದಾಸಿ ಪದ್ಧತಿ ತಡೆಗಟ್ಟಲೇಬೇಕು. ಗೃಹಲಕ್ಷ್ಮೀ ಹಣ, ಮಾಸಾಶನ ಹಣವು ಸರ್ಕಾರದಿಂದ ಮಾಜಿ ದೇವದಾಸಿಯರಿಗೆ ಬರುತ್ತಿದೆ. ಜತೆಗೆ ಸರ್ಕಾರ ಸಾಕಷ್ಟು ಯೋಜನೆ ಜಾರಿಗೊಳಿಸಿದೆ.

ಯಲಬುರ್ಗಾ:

ದೇವದಾಸಿ ಪದ್ಧತಿಯನ್ನು ಬೇರು ಸಮೇತ ನಿರ್ಮೂಲನೆ ಮಾಡಲು ಕೈಜೋಡಿಸಬೇಕು ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬೆಟದೇಶ ಮಾಳೆಕೊಪ್ಪ ಹೇಳಿದರು.

ಪಟ್ಟಣದ ಡಾ. ಬಾಬು ಜಗಜೀವನರಾಮ್ ಸಮುದಾಯ ಭವನದಲ್ಲಿ ಮಾಜಿ ದೇವದಾಸಿಯರಿಗೆ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣೆ ಮತ್ತು ಕಾನೂನು ಅರಿವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದೇವದಾಸಿ ಪದ್ಧತಿ ಪ್ರಕರಣ ಕಂಡು ಬಂದರೆ ತಕ್ಷಣ ಇಲಾಖೆಯ ಗಮನಕ್ಕೆ ತರಬೇಕು ಎಂದರು.

೧೯೮೨ರಲ್ಲಿ ದೇವದಾಸಿ ಸಮರ್ಪಣಾ ನಿಷೇಧ ಕಾಯ್ದೆ ಬಂದರೂ ಈ ಹಿಂದೆ ಎರಡು ಪ್ರಕರಣ ದಾಖಲೆಯಾಗಿವೆ. ದೇವದಾಸಿ ಪದ್ಧತಿ ತಡೆಗಟ್ಟಲೇಬೇಕು. ಗೃಹಲಕ್ಷ್ಮೀ ಹಣ, ಮಾಸಾಶನ ಹಣವು ಸರ್ಕಾರದಿಂದ ಮಾಜಿ ದೇವದಾಸಿಯರಿಗೆ ಬರುತ್ತಿದೆ. ಜತೆಗೆ ಸರ್ಕಾರ ಸಾಕಷ್ಟು ಯೋಜನೆ ಜಾರಿಗೊಳಿಸಿದೆ ಎಂದು ಹೇಳಿದರು.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಬಿ. ನಾಗೇಶ ಮಾತನಾಡಿ, ನಿವೇಶನ ಇಲ್ಲದ ಮಾಜಿ ದೇವದಾಸಿಗೆ ೧೫ ದಿನಗಳಲ್ಲಿ ನಿವೇಶನ ಕೊಡುವ ವ್ಯವಸ್ಥೆ ಮಾಡಲಾಗುವುದು ಎಂದರು.

ಅಪರ ಸರ್ಕಾರಿ ವಕೀಲ ಮಲ್ಲನಗೌಡ ಎಸ್. ಪಾಟೀಲ ಮಾತನಾಡಿ, ದೇವದಾಸಿ ಪದ್ಧತಿ ಈ ತಲೆಮಾರಿಗೆ ನಿರ್ನಾಮವಾಗಬೇಕು. ಈ ಪದ್ಧತಿ ಆಚರಿಸಿದರೆ ಶಿಕ್ಷೆ ಖಚಿತವೆಂದು ಹೇಳಿದರು.

ವಕೀಲೆ ಸಾವಿತ್ರಿ ಗೊಲ್ಲರ ಮಾತನಾಡಿ, ಬಾಲ್ಯವಿವಾಹ, ಪೋಕ್ಸೋ ಕಾಯ್ದೆ ಬಗ್ಗೆ ತಿಳಿಸಿದರು. ಸಖಿ ಒನ್ ಸ್ಟಾಫ್‌ ಸೆಂಟರ್‌ನ ಆಡಳಿತಾಧಿಕಾರಿ ಯಮುನಾ ಬೆಸ್ತರ್ ಮಹಿಳೆಯರ ಸುರಕ್ಷತೆಗೆ ಇಲಾಖೆ ಬದ್ಧವಾಗಿದೆ ಎಂದು ತಿಳಿಸಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಂದಯ್ಯ ಕಳ್ಳಿಮಠ ಕಾರ್ಯಕ್ರಮ ಉದ್ಘಾಟಿಸಿದರು. ದೇವದಾಸಿ ಪುನರ್ವಸತಿ ಯೋಜನಾಧಿಕಾರಿ ಪೂರ್ಣಿಮಾ ಯೋಳಬಾವಿ, ಮಾಜಿ ದೇವದಾಸಿ ಮಹಿಳೆಯರಿಗೆ ಸಿಗುವ ಸೌಲಭ್ಯ ಹಾಗೂ ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕ ಮಾತಾಡಿದರು. ಈ ವೇಳೆಯಲ್ಲಿ ನೊಂದ ಮಹಿಳೆಯರ ಸರ್ಕಾರಿ ಸೇವಾ ಸೌಲಭ್ಯಗಳ ಪೋಸ್ಟರ್‌ ಬಿಡುಗಡೆ ಮಾಡಲಾಯಿತು. ಅತಿಥಿಗಳಾಗಿ ಸಮಾಜ ಕಲ್ಯಾಣ ಇಲಾಖೆಯ ಅಧೀಕ್ಷಕ ವಿಜಯಕುಮಾರ, ಆರೋಗ್ಯಾಧಿಕಾರಿ ಡಾ. ಅಮರೇಶ ನಾಗರಾಳ, ಎಎಸ್‌ಐ ಪ್ರಕಾಶ, ದೇವದಾಸಿ ಪುನರ್ವಸತಿಯ ತಾಲೂಕು ಅನುಷ್ಠಾನಾಧಿಕಾರಿಗಳಾದ ದಾದೇಸಾಬ, ಸಕ್ಕುಬಾಯಿ ಹಾಗೂ ರೇಣುಕಾ ಇದ್ದರು.

Share this article