ಸ್ಥಳೀಯರಿಗೆ ನಿವೇಶನಕ್ಕಾಗಿ ದೇವಲಾಪುರ ಗ್ರಾಮಸ್ಥರ ಪಟ್ಟು

KannadaprabhaNewsNetwork |  
Published : Nov 26, 2026, 01:30 AM IST
3: ದೇವಲಾಪುರ ಗ್ರಾಮಸ್ಥರು ಹಾಗೂ ಪಿಡಿಓ ಹರೀಶ್ ನಡುವೆ ಮಾತಿನ ಚಕಮಕಿ ನಡೆಯಿತು. | Kannada Prabha

ಸಾರಾಂಶ

ಹೊಸಕೋಟೆ: ತಾಲೂಕಿನ ದೇವನಗೊಂದಿ ಗ್ರಾಪಂ ವ್ಯಾಪ್ತಿಯ ದೇವಲಾಪುರ ಗ್ರಾಮದ ಸರ್ವೆ ನಂ. 67ರಲ್ಲಿ 19.5 ಗುಂಟೆ ಜಮೀನಿನಲ್ಲಿ ನಿವೇಶನ ಹಂಚುವ ವಿಚಾರದಲ್ಲಿ ಸ್ಥಳೀಯ ಗ್ರಾಮಸ್ಥರಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ದೇವನಗೊಂದಿ ಗ್ರಾಪಂ ವಿಶೇಷ ಗ್ರಾಮಸಭೆಯಲ್ಲಿ ದೇವಲಾಪುರ ಗ್ರಾಮಸ್ಥರು ಕಪ್ಪುಪಟ್ಟಿ ಧರಿಸಿ ಪ್ರತಿಭಟಿಸಿದರು

ಹೊಸಕೋಟೆ: ತಾಲೂಕಿನ ದೇವನಗೊಂದಿ ಗ್ರಾಪಂ ವ್ಯಾಪ್ತಿಯ ದೇವಲಾಪುರ ಗ್ರಾಮದ ಸರ್ವೆ ನಂ. 67ರಲ್ಲಿ 19.5 ಗುಂಟೆ ಜಮೀನಿನಲ್ಲಿ ನಿವೇಶನ ಹಂಚುವ ವಿಚಾರದಲ್ಲಿ ಸ್ಥಳೀಯ ಗ್ರಾಮಸ್ಥರಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ದೇವನಗೊಂದಿ ಗ್ರಾಪಂ ವಿಶೇಷ ಗ್ರಾಮಸಭೆಯಲ್ಲಿ ದೇವಲಾಪುರ ಗ್ರಾಮಸ್ಥರು ಕಪ್ಪುಪಟ್ಟಿ ಧರಿಸಿ ಪ್ರತಿಭಟಿಸಿದರು.

ಸರ್ಕಾರದಿಂದ ನಿವೇಶನ ಹಂಚಿಕೆ ಸಂಬಂಧ ಪ್ರಸ್ತಾವನೆ ಸಲ್ಲಿಸಿದ್ದು, ಎರಡು ವರ್ಷಗಳ ಹಿಂದೆ 63 ನಿವೇಶನಗಳಿಗೆ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಲಾಗಿತ್ತು. ಆದರೆ ಪಟ್ಟಿಯಲ್ಲಿದ್ದ ಕೆಲವರು ಗ್ರಾಮದಲ್ಲಿ ವಾಸವಿಲ್ಲದಿರುವುದು ಹಾಗೂ ಸ್ಥಳಾಂತರಗೊಂಡಿರುವ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಎಲ್ಲಾ ಫಲಾನುಭವಿಗಳ ಮನೆಗಳಿಗೆ ತೆರಳಿ ಪರಿಶೀಲಿಸಿ, ಕಾಯಂ ನಿವಾಸಿಗಳನ್ನು ಖಚಿತಪಡಿಸಿಕೊಂಡು ಹೊಸ ಪಟ್ಟಿ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಲಾಗಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ನಿವೇಶನ ಹಂಚಿಕೆ ವಿಚಾರದಲ್ಲಿ ಯಾವುದೇ ಪ್ರಗತಿ ಕಂಡುಬಂದಿಲ್ಲ. ಇದೀಗ ಏಕಾಏಕಿ ಗ್ರಾಪಂನಲ್ಲಿ ವಿಶೇಷ ಗ್ರಾಮಸಭೆ ಆಯೋಜಿಸಿ ಫಲಾನುಭವಿಗಳ ಆಯ್ಕೆ ಹಾಗೂ ನಿವೇಶನ ಹಂಚಿಕೆ ಪ್ರಕ್ರಿಯೆ ಕೈಗೊಳ್ಳಲಾಗಿದೆ. ಈ ಸಭೆಗೂ ಮುನ್ನ ನಿಯಮಾನುಸಾರ ವಾರ್ಡ್ ಸಭೆಯಲ್ಲಿ ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸಬೇಕಿತ್ತು. ಆದರೆ ವಾರ್ಡ್ ಸಭೆ ನಡೆಸದೆ, ಗ್ರಾಮಸ್ಥರಿಗೆ ಮಾಹಿತಿ ನೀಡದೆ ಸಭೆ ನಡೆಸಲಾಗಿದೆ ಎಂದು ದೂರಿದರು.

ಸಭೆಯಲ್ಲಿ ಗ್ರಾಮಸ್ಥರು ತಮ್ಮ ಆಕ್ಷೇಪಗಳನ್ನು ವ್ಯಕ್ತಪಡಿಸಿ, ಸ್ಥಳೀಯವಾಗಿ ಹಲವು ವರ್ಷಗಳಿಂದ ವಾಸವಿರುವ ನಿವೇಶನ ರಹಿತರಿಗೆ ಅವಕಾಶ ನೀಡುವಂತೆ ಒತ್ತಾಯಿಸಿದಾಗ ಪಿಡಿಒ ಸಮರ್ಪಕವಾಗಿ ಉತ್ತರಿಸದೆ ಸಭೆಯಿಂದ ಹೊರನಡೆದಿದ್ದಾರೆ. ಗ್ರಾಮಸ್ಥರು ಮಾತನಾಡುತ್ತಿದ್ದ ಮೈಕನ್ನೂ ಸ್ಥಗಿತಗೊಳಿಸಿದ್ದಲ್ಲದೆ, ಆನ್‌ಲೈನ್‌ನಲ್ಲಿ 29 ಫಲಾನುಭವಿಗಳ ಪಟ್ಟಿ ಸಿದ್ಧವಾಗಿದೆ ಎಂಬ ಮಾಹಿತಿ ಇದ್ದರೂ ಅದನ್ನು ಸಾರ್ವಜನಿಕವಾಗಿ ಪ್ರದರ್ಶಿಸದೆ, ಗ್ರಾಮಸ್ಥರಿಗೆ ಪಟ್ಟಿ ನೀಡದೆ ಸಭೆ ಮುಕ್ತಾಯಗೊಳಿಸಲಾಗಿದೆ ಎಂದು ಆರೋಪಿಸಿದರು.

ನಿವೇಶನಕ್ಕಾಗಿ ಹಣ ಪಡೆದ ಆರೋಪ:ನಿವೇಶನ ಹಂಚಿಕೆ ಸಂಬಂಧ ಕೆಲವರಿಂದ ಲಕ್ಷಾಂತರ ರುಪಾಯಿ ಹಣ ಪಡೆಯಲಾಗಿದೆ ಎಂಬ ಆರೋಪಗಳು ಗ್ರಾಮದಲ್ಲಿ ಕೇಳಿ ಬರುತ್ತಿವೆ. ಹೊರಗಿನವರಿಗೆ ಹಣ ಪಡೆದು ನಿವೇಶನ ನೀಡಲಾಗುತ್ತಿದೆ ಎಂಬ ಅನುಮಾನ ಗ್ರಾಮಸ್ಥರಲ್ಲಿ ಮೂಡಿದ್ದು, ಈ ಕುರಿತು ಅಧಿಕಾರಿಗಳು ಸ್ಪಷ್ಟನೆ ನೀಡಬೇಕು. ಸೂಕ್ತ ತನಿಖೆ ನಡೆಸಿ ಸತ್ಯಾಸತ್ಯತೆ ಬಹಿರಂಗಪಡಿಸಬೇಕು. ಸಭೆಯ ನಡಾವಳಿ ಹಾಗೂ ಫಲಾನುಭವಿಗಳ ಪಟ್ಟಿಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು.

ಸ್ಥಳೀಯರಿಗೆ ನಿವೇಶನ ಹಂಚಿಕೆ ಮಾಡಿದ ನಂತರ ಉಳಿದಿದ್ದರೆ ಹೊರಗಿನವರಿಗೆ ಪರಿಗಣಿಸಲಿ. ಅರ್ಹ ಬಡ ಕುಟುಂಬಗಳಿಗೆ ನ್ಯಾಯ ದೊರಕಿಸಿಕೊಡಬೇಕೆಂಬುದೇ ನಮ್ಮ ಬೇಡಿಕೆ ಎಂದು ಗ್ರಾಪಂ ಮಾಜಿ ಸದಸ್ಯ ಡಿ.ಪಿ.ಮಂಜುನಾಥ್ ಒತ್ತಾಯಿಸಿದರು.

ಫೋಟೋ: 25 ಹೆಚ್‌ಎಸ್‌ಕೆ 1, 2 ಮತ್ತು3

ಹೊಸಕೋಟೆ ತಾಲೂಕಿನ ದೇವಲಾಪುರದಲ್ಲಿ ನಡೆದ ವಿಶೇಷ ಗ್ರಾಮಸಭೆಯಲ್ಲಿ ಪಿಡಿಒ ಹರೀಶ್ ಮತ್ತು ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಸವೇಶ್ವರರ ಬಗ್ಗೆ ಅವಹೇಳನಕಾರಿ ಪದಬಳಕೆ ನಾಡಿಗೆ ಕಪ್ಪುಚುಕ್ಕೆ: ಡಾ.ಶ್ರೀ.ಗುರುಬಸವ ಮಹಾಸ್ವಾಮಿ
ಸರ್ಕಾರಿ ಕೆಲಸವಿದ್ರೂ ರೈತನ ವರಿಸಲಿದ್ದಾಳೆ ಲಕ್ಷ್ಮೀ