ಹುಡುಗಿ ಮದುವೆಗೆ ಹುಡುಗಿ ಕುಟುಂಬಸ್ಥರು ಸರ್ಕಾರಿ ನೌಕರ ಬೇಕು, ಸಿಟಿ ಲೈಫ್ ಬೇಕು, ದೊಡ್ಡ ಸಂಬಳ ಕೇಳೋ ಕಾಲದಲ್ಲಿ ತಾಲೂಕಿನ ಹಳ್ಳಿಯೊಂದರ ಮಧುಮಗಳೊಬ್ಬಳು ರೈತನೋರ್ವನ ಕೈ ಹಿಡಿಯಲು ಮನಸ್ಸು ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾಳೆ.
ರಂಗೂಪುರ ಶಿವಕುಮಾರ್
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಹುಡುಗಿ ಮದುವೆಗೆ ಹುಡುಗಿ ಕುಟುಂಬಸ್ಥರು ಸರ್ಕಾರಿ ನೌಕರ ಬೇಕು, ಸಿಟಿ ಲೈಫ್ ಬೇಕು, ದೊಡ್ಡ ಸಂಬಳ ಕೇಳೋ ಕಾಲದಲ್ಲಿ ತಾಲೂಕಿನ ಹಳ್ಳಿಯೊಂದರ ಮಧುಮಗಳೊಬ್ಬಳು ರೈತನೋರ್ವನ ಕೈ ಹಿಡಿಯಲು ಮನಸ್ಸು ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾಳೆ.
ಡಿ.3ರಂದು ರೈತನ ವಿವಾಹವಾಗುವ ಮಧುಮಗಳೇ ತಾಲೂಕಿನ ಬೇಗೂರು ಗ್ರಾಮದ ಎಂ.ಲಕ್ಷ್ಮೀ. ಇವರು ನರ್ಸಿಂಗ್ ಪದವೀಧರೆಯಾಗಿದ್ದು, ಪ್ರಸ್ತುತ ಜಯದೇವ ಆಸ್ಪತ್ರೆಯ ಐಸಿಯು ವಿಭಾಗದಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.ಸರ್ಕಾರಿ ಕೆಲಸ, ಸಮಾಜದಲ್ಲಿ ಗೌರವ, ಕೈತುಂಬಾ ಸಂಬಳ. ಇಂತಹ ಹುಡುಗಿಗೆ ಸರ್ಕಾರಿ ನೌಕರನೇ ಬೇಕಾದರೂ ಸಿಗುತ್ತಿದ್ದ. ಆದರೆ ಲಕ್ಷ್ಮೀ ಆಯ್ಕೆ ಮಾಡಿದ್ದು ಕೊಳ್ಳೇಗಾಲದ ರೈತ ರಾಜು ಕೆ. ಅವರನ್ನು. ನನಗೆ ಬೇಕಾಗಿರೋದು ಸರ್ಕಾರಿ ಕೆಲಸದ ಗಂಡ ಅಲ್ಲ, ಮಣ್ಣನ್ನು ನಂಬಿ ಬದುಕುವ ರೈತ ಗಂಡ ಎನ್ನುವುದು ಲಕ್ಷ್ಮೀಯ ನಿಲುವು. ಅದಕ್ಕಾಗಿ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ತಮ್ಮ ಮುಂದಿನ ಗಂಡನ ಹೆಸರನ್ನು ಹೀಗೆ ಹಾಕಿಸಿದ್ದಾರೆ:
ರಾಜು ಕೆ (ರೈತ) ರೈತ ಎಂಬ ಪದವನ್ನು ಮುಚ್ಚಿಡದೆ, ಹೆಮ್ಮೆಯಿಂದ ಆವರಣದಲ್ಲಿ ಹಾಕಿಸಿದ್ದಾರೆ. ಇದೇ ಈಗ ಸಾಮಾಜಿಕ ಜಾಲತಾಣದಲ್ಲಿ ಲಕ್ಷ್ಮೀಯನ್ನು ಹೈಲೈಟ್ ಮಾಡಿದೆ.ಲಕ್ಷ್ಮೀಯಿಂದ ಯುವಕರಿಗೆ ಭರವಸೆ:
ಪ್ರಸ್ತುತ ರೈತ ಯುವಕರು, ಯುವಕರು ಹುಡುಗಿಗಾಗಿ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಮಾಡುತ್ತಿದ್ದಾರೆ. ಮನೆ, ಜಮೀನು, ಖಾಸಗಿ ಕೆಲಸ, ದುಡ್ಡು ಇದ್ದರೂ ರೈತ ಎಂಬ ಕಾರಣಕ್ಕೆ ಹುಡುಗಿ ಸಿಗ್ತಿಲ್ಲ. ಜತೆಗೆ ಹುಡುಗಿ ಕೊಡೋದಕ್ಕೂ ಹುಡುಗಿಯ ಕುಟುಂಬಸ್ಥರು ಕೂಡ ಬಹುತೇಕರು ಒಪ್ಪುತ್ತಿಲ್ಲ!ಕಳೆದ ವಾರ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾಗವಹಿಸಿದ್ದ ಸರ್ಕಾರಿ ಸಭೆಯಲ್ಲಿ ಸಿಎಂ ಮುಂದೆಯೇ ನನಗೆ ಮದುವೆ ಮಾಡಿಸಿ ಎಂದು ರೈತ ಕುಟುಂಬದ ಯುವಕನೋರ್ವ ಅರ್ಜಿ ಕೊಟ್ಟಿದ್ದ.
ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಯುವಕರು ಮಾದಪ್ಪ ಮದುವೆ ಮಾಡಿಸಪ್ಪ ಎಂದು ಹರಕೆ ಹೊತ್ತಿದ್ದರು. ಅಂತಹ ಹೊತ್ತಲ್ಲಿ ಬೇಗೂರು ಗ್ರಾಮದ ಲಕ್ಷ್ಮೀಯ ಈ ನಿರ್ಧಾರ ರೈತ ಯುವಕರಿಗೆಲ್ಲ ದೊಡ್ಡ ಧೈರ್ಯ ತುಂಬಿದೆ.ರೈತನನ್ನು ಮದುವೆಯಾಗುವುದು ಕೀಳಲ್ಲ, ಹೆಮ್ಮೆ ಎಂಬುದನ್ನು ಲಕ್ಷ್ಮೀ ಸಂದೇಶ ತೋರಿಸಿಕೊಟ್ಟಿದೆ.