ಭೂಸ್ವಾಧೀನ ವಿರೋಧಿಸಿ ೨೫ಕ್ಕೆ ದೇವನಹಳ್ಳಿ ಚಲೋ

KannadaprabhaNewsNetwork |  
Published : Jun 22, 2025, 11:47 PM IST
೨೨ಸಿಪಿಟಿ೨: ಫೋಟೊ: ಚನ್ನಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಬಡಗಲಪುರ ನಾಗೇಂದ್ರ ಮಾತನಾಡಿದರು. | Kannada Prabha

ಸಾರಾಂಶ

ಚನ್ನಪಟ್ಟಣ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ೧೩ ಗ್ರಾಮಗಳ ೧೭೭೭ ಎಕರೆ ರೈತರ ಜಮೀನು ಭೂಸ್ವಾಧೀನ ವಿರೋಧಿಸಿ ಜೂ.೨೫ರಂದು ಸಂಯುಕ್ತ ಹೋರಾಟ-ಕರ್ನಾಟಕದಿಂದ ದೇವನಹಳ್ಳಿ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.

ಚನ್ನಪಟ್ಟಣ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ೧೩ ಗ್ರಾಮಗಳ ೧೭೭೭ ಎಕರೆ ರೈತರ ಜಮೀನು ಭೂಸ್ವಾಧೀನ ವಿರೋಧಿಸಿ ಜೂ.೨೫ರಂದು ಸಂಯುಕ್ತ ಹೋರಾಟ-ಕರ್ನಾಟಕದಿಂದ ದೇವನಹಳ್ಳಿ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಫಲವತ್ತಾದ ಭೂಮಿಯನ್ನು ಕೆಐಎಡಿಬಿ ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆ. ಕಳೆದ ೧೧೮೨ ದಿನಗಳಿಂದ ರೈತರು ಅಧಿಸೂಚನೆ ಕೈಬಿಡುವಂತೆ ಹೋರಾಟ ನಿರಂತರ ಹೋರಾಟ ನಡೆಯುತ್ತಲೇ ಇದೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಹಂತಕ್ಕೂ ತಲುಪುತ್ತಿದ್ದರೂ ಅವರ ಒತ್ತಾಯ ಈಡೇರಿಸಲು ಸರ್ಕಾರ ಮುಂದಾಗಿಲ್ಲ ಎಂದು ಆರೋಪಿಸಿದರು.

ಬಿಜೆಪಿ ಸರ್ಕಾರವಿದ್ದಾಗ ಸ್ವಾಧೀನಪಡಿಸಿಕೊಳ್ಳಲು ಕೆಐಎಡಿಬಿ ಕಾಯ್ದೆ ಕಲಂ. ೨೮(೧)ರ ಪ್ರಕಾರ ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು, ಇದನ್ನು ವಿರೋಧಿಸಿ ಪ್ರತಿಭಟನೆ ಆರಂಭವಾದಾಗ ಈಗಿನ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಗಳೂ ಸೇರಿದಂತೆ ಸಚಿವರು ಹೋರಾಟ ಬೆಂಬಲಿಸಿ, ಮುಂದೆ ತಮ್ಮ ಸರ್ಕಾರ ಬಂದರೆ ಅಧಿಸೂಚನೆ ರದ್ದುಪಡಿಸುವುದಾಗಿ ಭರವಸೆ ನೀಡಿದ್ದರು. ಆದರೆ ಇದೀಗ ಕೊಟ್ಟ ಮಾತು ತಪ್ಪಿ, ಬಿಜೆಪಿ ತಂದಿದ್ದ ಕಾಯ್ದೆ ಕಲಂ. ೨೮(೪)ರ ರೀತ್ಯಾ ಅಂತಿಮ ಅಧಿಸೂಚನೆ ಹೊರಡಿಸಿದೆ. ಅಧಿಕಾರಕ್ಕೆ ಬಂದ ಮೇಲೆ ರೈತರಿಗೆ ಕಾಂಗ್ರೆಸ್ ದ್ರೋಹ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೊಟ್ಟ ಮಾತಿನಂತೆ ನಡೆಯದೆ ಕಾಂಗ್ರೆಸ್ ಸರ್ಕಾರದ ನೀತಿಯನ್ನು ಖಂಡಿಸಿ, ಭೂಸ್ವಾಧೀನವನ್ನು ಕೈಬಿಡಲೇಬೇಕೆಂದು ಆಗ್ರಹಿಸಿ ಜೂ.೨೫ರಂದು ದೇವನಹಳ್ಳಿ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ರೈತ, ದಲಿತ, ಕಾರ್ಮಿಕ, ಮಹಿಳಾ, ಯುವಜನ ವಿದ್ಯಾರ್ಥಿ ಚಳವಳಿಗಾರರು, ಪ್ರಗತಿಪರ ಹೋರಾಟಗಾರರು ರಾಜ್ಯದ ಎಲ್ಲ ಜಿಲ್ಲೆಗಳಿಂದ ಆಗಮಿಸಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ, ಅನಿರ್ದಿಷ್ಟ ಕಾಲ ಅಹೋರಾತ್ರಿ ಧರಣಿ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಇನ್ನು ರೈತರ ವಿರೋಧವಿದ್ದರೂ ಕೆಆರ್‌ಎಸ್‌ನಲ್ಲಿ ೯೨ ಕೋಟಿ ರು. ವೆಚ್ಚದಲ್ಲಿ ಕಾವೇರಿ ಆರತಿ ಕಾರ್ಯಕ್ರಮ ಆಯೋಜಿಸುತ್ತಿರುವುದು ಖಂಡನೀಯ, ಈ ಮೌಡ್ಯದ ಕಾರ್ಯಕ್ರಮವನ್ನು ಆಯೋಜನೆ ಮಾಡುತ್ತಿರುವ ಸರ್ಕಾರ ಕಾಲುವೆಗಳನ್ನು ಸರಿಪಡಿಸಲು ಹಣವಿಲ್ಲ ಎನ್ನುತ್ತಿದೆ, ಅಮ್ಯೂಸ್‌ಮೆಂಟ್ ಪಾರ್ಕ್ ಸ್ಥಾಪನೆ ಮಾಡುವುದಾಗಿ ಹೇಳುತ್ತಿರುವ ಸರ್ಕಾರದ ಕ್ರಮವನ್ನು ಮಂಡ್ಯದ ಜನತೆ ವಿರೋಧಿಸುತ್ತಿದ್ದಾರೆ. ಸರ್ಕಾರ ಗೌರವಯುತವಾಗಿ ಈ ಯೋಜನೆಗಳನ್ನು ಕೈಬಿಡಬೇಕು, ಇಲ್ಲವಾದಲ್ಲಿ ಉಗ್ರ ವಿರೋಧ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ರೈತ ಸಂಘದ ಉಪಾಧ್ಯಕ್ಷ ಆಣಿಗೆರೆ ಮಲ್ಲಯ್ಯ, ವಿಭಾಗೀಯ ಕಾರ್ಯದರ್ಶಿ ಚಂದ್ರಶೇಖರ್, ಜಿಲ್ಲಾಧ್ಯಕ್ಷ ತಿಮ್ಮೇಗೌಡ, ಕಾಯಂ ಆಹ್ವಾನಿತ ಕೃಷ್ಣಪ್ಪ, ಯುವ ಘಟಕದ ಸಂಚಾಲಕ ಮುನಿರಾಜು, ಮಹಿಳಾ ಘಟಕದ ಕಾರ್ಯದರ್ಶಿ ರಮ್ಯ ರಾಮಣ್ಣ, ವಿವಿಧ ಘಟಕಗಳ ಪದಾಧಿಕಾರಿಗಳಾದ ಡಾ.ಚೌಕಿಮಠ, ಪುಟ್ಟಸ್ವಾಮಿ, ಮುನಿಸಿದ್ದೇಗೌಡ, ರಾಮೇಗೌಡ, ವಿಜಯಕುಮಾರ್, ನಾಗರಾಜು, ರತ್ನಮ್ಮ ಕುಮಾರ ಇತರರಿದ್ದರು.

೨೨ಸಿಪಿಟಿ೨: ಫೋಟೊ:

ಚನ್ನಪಟ್ಟಣದಲ್ಲಿ ಬಡಗಲಪುರ ನಾಗೇಂದ್ರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

PREV

Recommended Stories

ಬಾಗಲಕೋಟೆ ತೋಟಗಾರಿಕಾ ವಿಜ್ಞಾನ ವಿವಿಗೆ ಅನುದಾನ: ಸಚಿವ
ಸಂಭ್ರಮದ ಮೌನೇಶ್ವರ ಜಾತ್ರಾ ಮಹೋತ್ಸವ