ಕನ್ನಡಪ್ರಭ ವಾರ್ತೆ ಯಳಂದೂರು
ಬುಧವಾರ ಜಯಂತಿಯ ಆಚರಣೆಗೆ ಪಪಂ ಅಧ್ಯಕ್ಷರಾಗಲಿ, ಸದಸ್ಯರಿಗಾಗಲಿ ಆಹ್ವಾನ ನೀಡಿಲ್ಲ. ಅಲ್ಲದೆ ಯಾವುದೇ ಸಂಘ ಸಂಸ್ಥೆಗಳಿಗೂ ಮಾಹಿತಿ ನೀಡಿಲ್ಲ. ಕೇವಲ ಕಂದಾಯ ಇಲಾಖೆಯ ಕೆಲವು ಸಿಬ್ಬಂದಿಗೆ ಈ ಕಾರ್ಯಕ್ರಮ ಸೀಮಿತಗೊಂಡಿದೆ. ಯಾವುದೇ ಜಯಂತಿ ಮಾಡಬೇಕಾದರೂ ಪೂರ್ವಭಾವಿ ಸಭೆಯನ್ನು ಕರೆಯಬೇಕು. ಇದನ್ನು ಕರೆದಿಲ್ಲ, ಇತರೆ ಇಲಾಖೆ ಅಧಿಕಾರಿಗಳು, ಸಂಘಸಂಸ್ಥೆಗಳ ಪದಾಧಿಕಾರಿಗಳು, ಸ್ಥಳೀಯ ಚುನಾಯಿತ ಜನಪ್ರತಿನಿಧಿಗಳು ಸೇರಿದಂತೆ ಯಾರಿಗೂ ಆಹ್ವಾನ ನೀಡಿಲ್ಲ. ಇಲ್ಲಿ ಕೇವಲ ಕಾಟಾಚಾರಕ್ಕೆ ಜಯಂತಿ ಆಚರಿಸಿ ಇಂತಹ ಮಹಾನ್ ವ್ಯಕ್ತಿಗಳಿಗೆ ಅಗೌರವ ತೋರಲಾಗುತ್ತಿದೆ. ಕಚೇರಿಯಲ್ಲಿ ಸಭಾಂಗಣವಿದ್ದರೂ ಇದನ್ನು ಬಳಸಿಕೊಂಡಿಲ್ಲ. ಗೌಪ್ಯವಾಗಿ ಜಯಂತಿ ಆಚರಿಸುವ ಜರೂರತ್ತು ಏನಿತ್ತು. ಇದಲ್ಲದೆ ಇನ್ನೂ ಅನೇಕ ಮಹಾನ್ ನಾಯಕರ ಜಯಂತಿಯನ್ನು ಇದೇ ತರಹ ಆಚರಿಸುವ ಮೂಲಕ ಇವರಿಗೆ ಅಗೌರವ ತೋರಲಾಗುತ್ತಿದೆ. ಇಲ್ಲಿ ಕೇವಲ ಕಂದಾಯ ಇಲಾಖೆಯ ಅಧಿಕಾರಿಗಳು ಮಾತ್ರ ಭಾಗವಹಿಸುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ಸರ್ಕಾರದ ವತಿಯಿಂದ ೨೦ ಸಾವಿರ ರು.ಗಳು ಹಣ ಬರುತ್ತದೆ. ಆದರೆ ಇಲ್ಲಿ ೫೦೦ ರು.ಗಳೂ ಖರ್ಚಾಗಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿ, ಉನ್ನತ ಅಧಿಕಾರಿಗಳು ಇವರ ವಿರುದ್ಧ ಶಿಸ್ತು ಕ್ರಮ ವಹಿಸಬೇಕು ಎಂದು ಪಪಂ ಅಧ್ಯಕ್ಷೆ ಲಕ್ಷ್ಮಿಮಲ್ಲು, ನಾಮನಿರ್ದೇಶಿತ ಸದಸ್ಯ ಲಿಂಗರಾಜಮೂರ್ತಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಯರಿಯೂರು ನಾಗೇಂದ್ರ ಸೇರಿದಂತೆ ಅನೇಕರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಗುಂಬಳ್ಳಿ ಬಸವರಾಜು, ಬಸವರಾಜಪ್ಪ, ಪರಶಿವಪ್ಪ, ರಾಜಸ್ವ ನಿರೀಕ್ಷಕ ಯದುಗಿರಿ ಸೇರಿದಂತೆ ಕಂದಾಯ ಇಲಾಖೆಯ ಸಿಬ್ಬಂಧಿ ವರ್ಗದವರು ಹಾಜರಿದ್ದರು.