ಕನ್ನಡಪ್ರಭ ವಾರ್ತೆ ಮಂಡ್ಯ
ಇತಿಹಾಸದ ಕ್ರಾಂತಿಕಾರಕ ಹೆಜ್ಜೆಯಾದ ಉಳುವವನೇ ಭೂಮಿಯ ಒಡೆಯ ಎಂಬ ಭೂ ಸುಧಾರಣಾ ಕಾಯ್ದೆಯನ್ನು ಜಾರಿಗೆ ತಂದು ಸಾಮಾಜಿಕ ನ್ಯಾಯಕ್ಕೆ ಒತ್ತು ಕೊಟ್ಟ ಹರಿಕಾರ. ಹಿಂದುಳಿದ ವರ್ಗಕ್ಕೆ ಶಕ್ತಿ ನೀಡಿದ ಮಹಾನ್ ವ್ಯಕ್ತಿ ಡಿ.ದೇವರಾಜ ಅರಸು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಬಣ್ಣಿಸಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ನಗರಸಭೆಯಿಂದ ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆದ ಸಾಮಾಜಿಕ ಪರಿವರ್ತನೆಯ ಹರಿಕಾರ ಡಿ.ದೇವರಾಜ ಅಸರು ಅವರ ೧೧೦ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇತಿಹಾಸದ ದಾಖಲೆಗಳ ಪ್ರಕಾರ ೭ ಲಕ್ಷದ ೭೦ ಸಾವಿರಕ್ಕೂ ಹೆಚ್ಚು ಜನರಿಗೆ ಸುಮಾರು ೩೦ ಲಕ್ಷ ಹೆಕ್ಟೇರ್ ಜಾಗವನ್ನು ಕಲ್ಪಿಸಿ ಉಳುವವರ ಬದುಕಿಗೆ ಆಸೆರೆಯಾಗಿ ನಿಂತ ಏಕೈಕ ನಾಯಕ ಅರಸು. ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಈ ನಾಡಿಗೆ ಹತ್ತಾರು ಕೊಡುಗೆ ಕೊಟ್ಟಿದ್ದಾರೆ. ಅವರನ್ನು ನಾವೆಲ್ಲರೂ ನೆನೆಸಿಕೊಳ್ಳಬೇಕು. ನಾನಿಂದು ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂದರೆ ಅದಕ್ಕೆ ಅವರು ಕೊಡುಗೆಯಾಗಿ ನೀಡಿದ ಬಿಸಿಎಂ ಹಾಸ್ಟೆಲ್ ಕಾರಣ. ವಿದ್ಯಾರ್ಥಿ ನಿಲಯ ಕೇವಲ ಕಲ್ಲಿನ ಗೋಡೆಯಲ್ಲ ಜ್ಞಾನದ ದೇಗುಲ. ಎಷ್ಟೋ ಬಡ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಬಿಸಿಎಂ ವಿದ್ಯಾರ್ಥಿನಿಲಯಗಳನ್ನು ಸ್ಥಾಪನೆ ಮಾಡಿದರು ಎಂದು ವಿವರಿಸಿದರು.ಮೊಟ್ಟ ಮೊದಲ ಬಾರಿಗೆ ತಲೆಯ ಮೇಲೆ ಮಲವನ್ನು ಹೊರುವ ಅನಿಷ್ಟ ಪದ್ಧತಿ ನಿಷೇಧಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ೬೦ ವರ್ಷ ಮೇಲ್ಪಟ್ಟವರು ಯಾರಿಗೂ ಕೈ ಚಾಚದೆ ಸ್ವಾಭಿಮಾನ ಬದುಕು ಕಟ್ಟಿಕೊಳ್ಳಲು ವೃದ್ಧಾಪ್ಯ ವೇತನ ಜಾರಿಗೆ ತಂದರು. ಹಳ್ಳಿಯ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು ಸಹಾಕಾರಿಯಾಗುವಂತೆ ಭಾಗ್ಯ ಜ್ಯೋತಿ ಯೋಜನೆ ಮೂಲಕ ಅವರ ಬದುಕಿಗೆ ಬೆಳಕನ್ನು ಚೆಲ್ಲಿದರು ಎಂದರು.
ಜಿಪಂ ಸಿಇಒ ಕೆ.ಆರ್.ನಂದಿನಿ ಮಾತನಾಡಿ, ಬಡವರ ಪರವಾಗಿ ಧ್ವನಿ ಎತ್ತಿದ ವ್ಯಕ್ತಿಗಳನ್ನು ನಾವು ನೆನೆಯಬೇಕು, ಜನ್ಮ ದಿನಾಚರಣೆಗಳನ್ನು ಹೆಸರಿಗೆ ಮಾತ್ರ ಮಾಡುವಂತದ್ದಲ್ಲ. ಅ ವ್ಯಕ್ತಿಯ ಸಾಧನೆ, ವಿಚಾರ, ಚಿಂತನೆಯನ್ನು ಮುಂದಿನ ಪೀಳಿಗೆಗೆ ತಿಳಿಸುವ ದೃಷ್ಟಿಯಿಂದ ಮಾಡುವುದು. ವಿದ್ಯಾರ್ಥಿಗಳು ಸಾಧಕರ ಜೀವನ ಚರಿತ್ರೆಯನ್ನು ಕೇವಲ ಅಂಕ ಗಳಿಸಲು ತಿಳಿದುಕೊಳ್ಳಬೇಡಿ, ಅವರ ಸಾಧನೆಗಳನ್ನು ಸದಾ ಕಾಲ ನೆನಪಿಸಿಕೊಂಡು ಮುಂದಿನ ಪೀಳಿಗೆಗೆ ಅದನ್ನು ಪರಿಣಾಮಕಾರಿಯಾಗಿ ಪರಿಚಯಿಸಿ ಎಂದರು.ವಿದ್ಯಾರ್ಥಿಗಳು, ಅಧಿಕಾರಿಗಳು, ಸಾರ್ವಜನಿಕರು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸಿಕೊಳ್ಳಬೇಕು, ವಿದ್ಯಾರ್ಥಿ ನಿಲಯಗಳ ವಾರ್ಡನ್‌ಗಳು ವಿದ್ಯಾರ್ಥಿ ನಿಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿಗಳನ್ನು ಸಹ ಇನ್ನೊಬ್ಬ ದೇವರಾಜ ಅರಸ್ ಮಾಡುವ ಸಾಮರ್ಥ್ಯವಿದೆ. ಎಲ್ಲಾ ಮಕ್ಕಳ್ಳಲ್ಲೂ ಒಂದಲ್ಲ ಒಂದು ಕೌಶಲ್ಯ ಇದ್ದೆ ಇರುತ್ತದೆ ಅದನ್ನು ಗುರುತಿಸಿ ಅವರಿಗೆ ಸಾಧನೆಯ ಮಾರ್ಗ ತೋರಿಸುವ ಜವಾಬ್ದಾರಿ ವಿದ್ಯಾರ್ಥಿ ನಿಲಯದ ಮೇಲ್ವಿಚಾರಕರು ಹಾಗೂ ಶಿಕ್ಷಕರ ಮೇಲಿದೆ ಎಂದು ಹೇಳಿದರು.
ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಜಿ.ಆರ್.ಅರಸು ಮಾತನಾಡಿ, ಜನಸಂಖ್ಯೆ ಹೆಚ್ಚಾಗಿದೆ ಎಲ್ಲರಿಗೂ ವಸತಿ ವ್ಯವಸ್ಥೆಯನ್ನು ಕಲ್ಪಿಸಬೇಕಾಗಿದೆ ಎಂದೂ ಬಹುಮಹಡಿ ಪರಿಕಲ್ಪನೆಯನ್ನು ತಂದವರು ಡಿ.ದೇವರಾಜ ಅರಸು ಎಂದರು.ಬಿ.ಸಿ.ಎಂ ವಿದ್ಯಾರ್ಥಿ ನಿಲಯದಲ್ಲಿ ವ್ಯಾಸಂಗ ಮಾಡಿದ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ ಹಾಗೂ ಕ್ರೆಡಾ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಜಿಲ್ಲೆಯಲ್ಲಿ ಶೇ ೧೦೦ ರಷ್ಟು ಫಲಿತಾಂಶ ನೀಡಿದ ಬಿಸಿಎಂ ವಿದ್ಯಾರ್ಥಿ ನಿಲಯಗಳ ಮೇಲ್ವಿಚಾರಕರನ್ನು ಸನ್ಮಾನಿಸಿ ಗೌರವಿಸಲಾಯಿತು. ವಿದೇಶಿ ವಿದ್ಯಾ ವಿಕಾಸ್ ಯೋಜನೆಯಡಿ ಜಿಲ್ಲೆಯ ಬಿ.ಎಂ.ಧನರಾಜ್ ಎಂಬ ವಿದ್ಯಾರ್ಥಿಗೆ ೧೦ ಲಕ್ಷ ರು. ಚೆಕ್ ನೀಡಲಾಯಿತು.ಆಹಾರ ಆಯೋಗದ ಅಧ್ಯಕ್ಷ ಡಾ.ಕೃಷ್ಣ, ನಗರಸಭೆ ಅಧ್ಯಕ್ಷ ನಾಗೇಶ್, ಅಪರ ಪೊಲೀಸ್ ಅಧೀಕ್ಷಕ ಗಂಗಾಧರಸ್ವಾಮಿ, ನಗರಸಭೆ ಅಧ್ಯಕ್ಷ ಎಂ ವಿ ಪ್ರಕಾಶ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಮಂಜುಳಾ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್, ಅಮ್ಜದ್ ಪಾಷಾ ಇತರರಿದ್ದರು.