ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ತಾಲೂಕಿನಲ್ಲಿ ಹಳ್ಳಿಮೈಸೂರು ಹೋಬಳಿಯು ಆಡಳಿತಾತ್ಮಕವಾಗಿ ಹೊಳೆನರಸೀಪುರ ತಾಲೂಕಿಗೆ ಸೇರುತ್ತದೆ ಹಾಗೂ ರಾಜಕೀಯವಾಗಿ ಅರಕಲಗೂಡು ವಿಧಾನಸಭಾ ಕ್ಷೇತ್ರ ಒಳಪಡುತ್ತದೆ. ಜತೆಗೆ ಚುನಾವಣೆ ಸಂದರ್ಭಗಳಲ್ಲಿ ಮಾತ್ರ ರಾಜಕಾರಣಿಗಳಿಗೆ ಪ್ರಿಯವಾಗುವ ಕ್ಷೇತ್ರವಾಗಿದೆ. ಊಟದ ನಂತರ ಉಪ್ಪಿನಕಾಯಿ ಹೇಗೆ ಬೇಡವಾಗುತ್ತೊ ಅದೇ ರೀತಿ ಜನಪ್ರತಿನಿಧಿಗಳು ಹಳ್ಳಿಮೈಸೂರು ಹೋಬಳಿ ಕಡೆಗಣಿಸುತ್ತಿದ್ದಾರೆ ಎಂಬ ದೂರಿದೆ.
ದೇವರಮುದ್ದನಹಳ್ಳಿಯಿಂದ ಮೂಡಲಹಿಪ್ಪೆ ಗ್ರಾಮ ಸಂಪರ್ಕಿಸುವ ರಸ್ತೆಯ ದುಸ್ಥಿತಿ ರಾಜಕಾರಣಿಗಳ ಈ ಮನೋಭಾವಕ್ಕೆ ತಾಜಾ ಉದಾಹರಣೆಯಾಗಿದೆ ಹಾಗೂ ದೇವರಮುದ್ದನಹಳ್ಳಿಯಿಂದ ಮೂಡಲಹಿಪ್ಪೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಗುಂಡಿಗಳು ಬಿದ್ದಿರುವ ಜತೆಗೆ ಕಿರು ಸೇತುವೆಯೊಂದು ಕುಸಿದಿರುವ ಕಾರಣ ದೊಡ್ಡ ಕಂದಕ ಏರ್ಪಟ್ಟಿದ್ದು, ವಾಹನ ಚಾಲಕರಿಗೆ ನರಕ ದರ್ಶನ ಮಾಡಿಸುವ ಜತೆಗೆ ಜೀವಭಯದಿಂದ ಸಂಚರಿಸಬೇಕಾದ ದುಸ್ಥಿತಿ ಬಂದಿದೆ.ಸೋಮವಾರದಿಂದ ಶಾಲಾ ಕಾಲೇಜುಗಳು ಪುನರಾರಂಭವಾಗುತ್ತಿದ್ದು, ಶಾಲಾ ವಿದ್ಯಾರ್ಥಿಗಳು, ನೌಕರರು ಹಾಗೂ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಿಗೆ ನಾಲ್ಕೈದು ಕಿ.ಮಿ. ನಡೆದು ನಂತರ ಬಸ್ ಹಿಡಿದು, ಪಟ್ಟಣದ ಕಾಲೇಜಿಗೆ ಹೋಗಬೇಕಲ್ಲಾ ಎಂಬುದೇ ದೊಡ್ಡ ತಲೆಬೇನೆಯಾಗಿದೆ.
ದೇವರಮುದ್ದನಹಳ್ಳಿ ಗ್ರಾಮದ ಪುಟ್ಟಸ್ವಾಮಿಗೌಡ ಹಾಗೂ ಶಿವಕುಮಾರ್ ಎಂಬುವರು ಮಾತನಾಡಿ, ಗ್ರಾಮೀಣ ಜನರಿಗೆ ಅತ್ಯಗತ್ಯವಾದ ಮೂಲಭೂತ ಸೌಕರ್ಯ ಕಲ್ಪಿಸುವ ಜತೆಗೆ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ವಾತಾವರಣ ಒದಗಿಸುವ ನಿಟ್ಟಿನಲ್ಲಿ ಮೊದಲಿಗೆ ರಸ್ತೆ ದುರಸ್ತಿ ಕಾರ್ಯ ಮಾಡಿಸುವಂತೆ ಒತ್ತಾಯಿಸಿದ್ದಾರೆ.