ಎಸ್‌.ಎಂ.ಕೃಷ್ಣ 2ನೇ ಬಾರಿ ಸಿಎಂ ಆಗುವುದನ್ನು ತಪ್ಪಿಸಿದ್ದು ದೇವೇಗೌಡರು: ಚಲುವರಾಯಸ್ವಾಮಿ

KannadaprabhaNewsNetwork | Published : Apr 12, 2024 1:06 AM

ಸಾರಾಂಶ

ಜಿಲ್ಲೆಯ ಒಕ್ಕಲಿಗ ನಾಯಕ ಎಸ್.ಎಂ.ಕೃಷ್ಣರಿಗೆ 2ನೇ ಬಾರಿ ಮುಖ್ಯಮಂತ್ರಿಯಾಗುವ ಅವಕಾಶವನ್ನು ತಪ್ಪಿಸಿದ್ದು ದೇವೇಗೌಡರು ಎಂದು ಸಚಿವ ಎನ್.ಚಲುವರಾಯಸ್ವಾಮಿ ಗಂಭೀರವಾಗಿ ಆರೋಪಿಸಿದರು.

ಸಚಿವ ಚಲುವರಾಯಸ್ವಾಮಿ ಗಂಭಿರ ಆರೋಪ । ಮಲ್ಲಿಕಾರ್ಜುನ್ ಖರ್ಗೆಯನ್ನು ಮುಖ್ಯಮಂತ್ರಿ ಮಾಡುವ ಅವಕಾಶವನ್ನು ತಳ್ಳಿಹಾಕಿದ ಜೆಡಿಎಸ್‌

ಕನ್ನಡಪ್ರಭ ವಾರ್ತೆ ಮಂಡ್ಯಜಿಲ್ಲೆಯ ಒಕ್ಕಲಿಗ ನಾಯಕ ಎಸ್.ಎಂ.ಕೃಷ್ಣರಿಗೆ 2ನೇ ಬಾರಿ ಮುಖ್ಯಮಂತ್ರಿಯಾಗುವ ಅವಕಾಶವನ್ನು ತಪ್ಪಿಸಿದ್ದು ದೇವೇಗೌಡರು ಎಂದು ಸಚಿವ ಎನ್.ಚಲುವರಾಯಸ್ವಾಮಿ ಗಂಭೀರವಾಗಿ ಆರೋಪಿಸಿದರು. ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಭೇಟಿ ವಿಚಾರವಾಗಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿ, ೨೦೦೪ ರಲ್ಲಿ ಯಾವ ಪಕ್ಷಕ್ಕೂ ಬಹುಮತ ಬಂದಿರಲಿಲ್ಲ. ಆಗ ಎಸ್.ಎಂ.ಕೃಷ್ಣ ಅಂದು ಜೆಡಿಎಸ್‌ಗೆ ಮತ್ತೊಂದು ಅವಕಾಶಕೊಡಿ ಎಂದಿದ್ದರು. ಅಂದು ನಾನು ಜೆಡಿಎಸ್‌ನಲ್ಲೇ ಇದ್ದೆ. ಅಂದು ಈ ಜಿಲ್ಲೆಯ ಒಕ್ಕಲಿಗ ನಾಯಕ ಎಸ್.ಎಂ.ಕೃಷ್ಣ ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿ ಮಾಡುವ ಅವಕಾಶ ದೇವೇಗೌಡರಿಗೆ ಮತ್ತು ಜೆಡಿಎಸ್‌ಗೆ ಇತ್ತು. ಆದರೆ ಮಾಡಲಿಲ್ಲ. ಈಗ ಅವರ ಮನೆಗೆ ಹೋಗ್ತಿರಲ್ಲ, ಅವರು ಏನು ಮಾಡಬೇಕು ಎಂದು ಕುಟುಕಿದರು.

ಅಂದು ಮಲ್ಲಿಕಾರ್ಜುನ್ ಖರ್ಗೆಯವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸುವುದಕ್ಕೆ 2ನೇ ಆಯ್ಕೆ ಇತ್ತು. ಆದರೆ, ಅದನ್ನು ಜೆಡಿಎಸ್‌ನವರು ತಳ್ಳಿಹಾಕಿದರು. ಅವರು ಹೇಳಿದಂತೆ ಕೇಳಬೇಕೆಂಬ ಕಾರಣಕ್ಕೆ ಧರ್ಮಸಿಂಗ್ ಅವರನ್ನು ಕರೆತಂದು ಮುಖ್ಯಮಂತ್ರಿ ಮಾಡಿದರು. ಈಗ ಚುನಾವಣೆ ಬಂತು ಅಂತಾ ಇವತ್ತು ಎಲ್ಲರ ಮನೆಗೆ ಹೋಗುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಎಚ್‌ಡಿಕೆ ಸರ್ಕಾರದಲ್ಲೇ ಚುಂಚಶ್ರೀಗಳ ಪೋನ್ ಟ್ಯಾಪಿಂಗ್!

-ಧರ್ಮ ಪೀಠಕ್ಕೆ ಅಗೌರವ ಇದ್ದಕ್ಕಿಂತ ಬೇಕಾ? ಸಚಿವ ಚುಲುವರಾಯಸ್ವಾಮಿ ಪ್ರಶ್ನೆ

ಮಂಡ್ಯ: ಆದಿ ಚುಂಚನಗಿರಿ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ಫೋನ್ ಟ್ಯಾಪಿಂಗ್ ಮಾಡಿಸಿದ್ದು ಕುಮಾರಸ್ವಾಮಿ ಅವರ ಸರ್ಕಾರವೇ. ಧರ್ಮ ಪೀಠಕ್ಕೆ ಅಗೌರವ ಇದ್ದಕ್ಕಿಂತ ಬೇಕಾ ಎಂದು ಸಚಿವ ಎನ್.ಚಲುವರಾಯಸ್ವಾಮಿ ಪ್ರಶ್ನಿಸಿದರು.ಆದಿಚುಂಚನಗಿರಿ ಮಠ, ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗೆ ಪರ್ಯಾಯವಾಗಿ 2ನೇ ಮಠ ಮತ್ತು ಎರಡನೇ ಸ್ವಾಮೀಜಿಯನ್ನು ಹುಟ್ಟು ಹಾಕಿದ್ದು ಯಾರು ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಪ್ರಶ್ನಿಸಿದರು.ಅಂದು ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್‌ನ ಒಕ್ಕಲಿಗ ನಾಯಕರು, ಮುಖಂಡರೆಲ್ಲಾ ನಮ್ಮ ಮೇಲೆ ಗಲಾಟೆ ಮಾಡಿದರು. ಜ್ವರ ಬಂದಾಗ ಡಾಕ್ಟರ್ ಬಳಿ ಹೋಗೋದು ಸಹಜ. ಚುನಾವಣೆ ಬಂದಿದೆ, ಹಾಗಾಗಿ ಎಲ್ಲರ ಹತ್ತಿರ ಹೋಗುತ್ತಿದ್ದಾರೆ ಎಂದು ಜರಿದರು.೭೭ವರ್ಷದ ನಂತರ ಜಿಲ್ಲೆಗೆ ಸವಾಲು ಎದುರಾಗಿದೆ. ಸಮರ್ಥವಾಗಿ ಸವಾಲು ಎದುರಿಸುವ ಶಕ್ತಿ ಮಂಡ್ಯದ ಜನರಿಗೆ ಇದೆ. ಇದು ಹಲವು ಬಾರಿ ನಿರೂಪಣೆಯಾಗಿದೆ. ಘಟಾನುಘಟಿಗಳನ್ನು ಸೋಲಿಸೋದು, ಗೆಲ್ಲಿಸೋದು ಜಿಲ್ಲೆಯ ಜನರಿಗೆ ಹೊಸದೇನಲ್ಲ. ಸ್ವಾಭಿಮಾನ ವಿಚಾರ ಬಂದಾಗ ದುಡ್ಡು, ದೊಡ್ಡಸ್ತಿಕೆಯನ್ನ ಮಂಡ್ಯ ಜನರು ನೋಡುವುದಿಲ್ಲ. ಮಂಡ್ಯ ಜನರು ನಿರ್ದಾಕ್ಷಿಣ್ಯವಾಗಿ ನಿರ್ಧಾರ ಮಾಡುತ್ತಾರೆ ಎಂದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿ ನಾಯಕ ಅಲ್ಲ. ಜಾತ್ಯತೀತವಾಗಿ ಎಲ್ಲಾ ಸಮುದಾಯಗಳಿಗೂ ಅನುದಾನ ನೀಡಿದ್ದಾರೆ. ಗ್ಯಾರಂಟಿ ಯೋಜನೆ ಪ್ರಪಂಚದಲ್ಲೇ ಮೊದಲು. ಗ್ಯಾರಂಟಿ ಯೋಜನೆ ವಿರೋಧಿಸುವವರು ಬಿಜೆಪಿ ಜೆಡಿಎಸ್‌ನವರು ಮಾತ್ರ. ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವಂತೆ ಮಿತ್ರಪಕ್ಷಗಳು ಸುಪ್ರೀಂಕೋರ್ಟ್ ಮುಂದೆ ಹೋಗಿದ್ದಾರೆ. ಬಡವರ ಕಾರ್ಯಕ್ರಮ ನಿಲ್ಲಿಸಿ ಎನ್ನುವ ಬಿಜೆಪಿ-ಜೆಡಿಎಸ್‌ಗೆ ಮತ ಹಾಕಬೇಕಾ ಎಂದು ಪ್ರಶ್ನಿಸಿದರು.ಕುಮಾರಸ್ವಾಮಿ ಅವರೇ ಜಿಲ್ಲೆಯ ಜನ ನಿಮ್ಮನ್ನು ಪ್ರೀತಿಸಿದ್ದಾರೆ. ನೀವು ಸಿಎಂ ಆಗಲು ಹೆಚ್ಚು ಸ್ಥಾನಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದರು. 2 ಬಾರಿ ಸಿಎಂ ಆಗಿ ಜಿಲ್ಲೆಗೆ ಏನು ಕೊಡುಗೆ ನೀಡಿದ್ದೀರಾ. ಹೊಸ ಸಕ್ಕರೆ ಕಾರ್ಖಾನೆ ತೆರೆಯಲಿಲ್ಲ, ಕೃಷಿ ವಿವಿ ಕೊಡಲಿಲ್ಲ. ಸುಮಲತಾ ಅವರನ್ನು ಕೆಆರ್‌ಎಸ್‌ಗೆ ಅಡ್ಡಡ್ಡ ಮಲಗಿಸಿ ಎಂದಿರಿ. ಸಮರ್ಥ ನಾಯಕರಿಲ್ಲ ಎಂದು ಮಂಡ್ಯಕ್ಕೆ ಬಂದಿದ್ದೇನೆ ಎನ್ನುತ್ತಿದ್ದೀರಿ. ಹಾಗಾದರೆ ಪಕ್ಷ ಕಟ್ಟುವ ಶಕ್ತಿ ಮಂಡ್ಯ ಜೆಡಿಎಸ್ ನಾಯಕರಿಗೆ ಇಲ್ಲವೇ ಎಂದು ಕುಹಕವಾಡಿದರು.

Share this article