ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಕುಟುಂಬದ ಸದಸ್ಯರು, ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಹಿತೈಷಿಗಳೊಂದಿಗೆ ಸೋಮವಾರ ತಮ್ಮ 94ನೇ ಹುಟ್ಟುಹಬ್ಬ ಆಚರಿಸಿಕೊಂಡರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಕುಟುಂಬದ ಸದಸ್ಯರು, ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಹಿತೈಷಿಗಳೊಂದಿಗೆ ಸೋಮವಾರ ತಮ್ಮ 94ನೇ ಹುಟ್ಟುಹಬ್ಬ ಆಚರಿಸಿಕೊಂಡರು.
ಹುಟ್ಟುಹಬ್ಬದ ಪ್ರಯುಕ್ತ ದೇವೇಗೌಡರು, ತಮ್ಮ ಪತ್ನಿ ಚೆನ್ನಮ್ಮ ಹಾಗೂ ಕುಟುಂಬ ಸದಸ್ಯರೊಂದಿಗೆ ಜೆ.ಪಿ.ನಗರದಲ್ಲಿರುವ ವೆಂಕಟೇಶ್ವರಸ್ವಾಮಿ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.
ಪುತ್ರ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮತ್ತು ಮೊಮ್ಮಗ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಪದ್ಮನಾಭನಗರದ ನಿವಾಸಕ್ಕೆ ಭೇಟಿ ನೀಡಿ ಎಚ್.ಡಿ.ದೇವೇಗೌಡ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿ ಆಶೀರ್ವಾದ ಪಡೆದರು.
ವಯಸ್ಸು ಮುಖ್ಯ ಅಲ್ಲ:
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್.ಡಿ.ದೇವೇಗೌಡ, ನನಗೆ ಎಷ್ಟು ವಯಸ್ಸು ಆಗಿದೆ ಎನ್ನುವುದು ಮುಖ್ಯವಲ್ಲ, ಕೆಲಸ ಮಾಡುವ ಶಕ್ತಿ ಇದೆಯಾ ಎನ್ನುವುದು ಮುಖ್ಯ. ವ್ಹೀಲ್ ಚೇರ್ ಮೇಲೆ ಕುಳಿತು ದೇಶದ ಸಮಸ್ಯೆಗಳು, ರಾಜ್ಯದ ಸಮಸ್ಯೆಗಳ ಬಗ್ಗೆ ಮಾತನಾಡಲು 70 ವರ್ಷಗಳ ಅನುಭವವಿದೆ ಎಂದರು.
ಸಾಮಾನ್ಯ ರೈತನ ಮಗನ ಸ್ಥಾನದಿಂದ ಪ್ರಧಾನಿ ಸ್ಥಾನದ ವರೆಗೆ ಅಧಿಕಾರ ನೋಡಿದ್ದೇನೆ. ಇವತ್ತು ರೈತರ ಪರಿಸ್ಥಿತಿ ಏನು ಅಂತ ಗೊತ್ತಿದೆ. ನಾನು ಮುಂದೆ ರಾಜಕೀಯದಲ್ಲಿ ಇರುತ್ತೇನೋ, ಇಲ್ಲವೋ ಗೊತ್ತಿಲ್ಲ. ರಾಜ್ಯಸಭಾ ಸದಸ್ಯ ಅವಧಿ ಮುಗಿದಿದೆ. ಮತ್ತೆ ಮುಂದುವರೆಯುವುದು ಪ್ರಧಾನಿ ಅವರ ವಿವೇಚನೆ ಗೆ ಬಿಟ್ಟಿದ್ದು. ರಾಜ್ಯಸಭಾ ಸದಸ್ಯ ಆಗದಿದ್ದರೂ ನಾನು ಜನರ ಪರವಾಗಿ ಹೋರಾಟ ಮಾಡುತ್ತೇನೆ ಎಂದು ಹೇಳಿದರು.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ತಂದೆ ಎಚ್.ಡಿ.ದೇವೇಗೌಡ ಅವರು 93 ವರ್ಷ ಪೂರೈಸಿದ್ದಾರೆ. ರಾಜಕೀಯದಲ್ಲಿ ಹಲವಾರು ಏರುಪೇರು ಕಂಡಿದ್ದಾರೆ. ಪಕ್ಷ ಉಳಿಸಲು ಹೋರಾಟ ಮಾಡಿದ್ದಾರೆ. ತಮಗೆ ತೊಂದರೆಯಾದರೂ ಪಕ್ಷ ಉಳಿಸಿದ್ದಾರೆ. ಅವರನ್ನು ದೇಶದ ಪ್ರಧಾನಿ ಗೌರವಿಸುತ್ತಾರೆ. ದೇವೇಗೌಡರ ಬಗ್ಗೆ ಅಪಾರ ತಿಳಿದುಕೊಂಡಿದ್ದಾರೆ. ದೇವೇಗೌಡರು ಶತಾಯುಷಿಯಾಗಲಿ ಎಂದು ದೇವರ ಬಳಿ ಕೇಳಿಕೊಂಡಿರುವುದಾಗಿ ಹೇಳಿದರು.ದೇವೇಗೌಡಗೆ ಹುಟ್ಟುಹಬ್ಬ ಶುಭಾಶಯ ತಿಳಿಸಿದ ಮೋದಿ:
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಸೋಮವಾರ 93ನೇ ವಸಂತಕ್ಕೆ ಕಾಲಿಟ್ಟಿದ್ದು ಪ್ರಧಾನಿ ನರೇಂದ್ರ ಮೋದಿ ಶುಭ ಕೋರಿದ್ದಾರೆ. ಎಕ್ಸ್‌ನಲ್ಲಿ ಶುಭಾಶಯ ತಿಳಿಸಿರುವ ಮೋದಿ, ‘ಎಚ್.ಡಿ. ದೇವೇಗೌಡರಿಗೆ ಹುಟ್ಟುಹಬ್ಬದ ಶುಭಾಶಯಗಳು. ಅವರು ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ದೇಶಕ್ಕೆ ಅತ್ಯುನ್ನತ ಕೊಡುಗೆ ನೀಡಿದ್ದಾರೆ. ನೀತಿ ಸಂಬಂಧಿತ ವಿಷಯಗಳ ಬಗ್ಗೆ ಆಳವಾದ ತಿಳುವಳಿಕೆ ಹೊಂದಿದ್ದರು. ಅವರ ದೀರ್ಘ ಮತ್ತು ಆರೋಗ್ಯಕರ ಜೀವನಕ್ಕಾಗಿ ಪ್ರಾರ್ಥಿಸುತ್ತೇನೆ’ ಎಂದಿದ್ದಾರೆ.ರಾಜ್ಯದೆಲ್ಲೆಡೆ ಅಭಿಮಾನಿಗಳಿಂದ ದೇವೇಗೌಡರ ಬರ್ತ್‌ಡೇ ಆಚರಣೆ:
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ೯೪ನೇ ವರ್ಷದ ಹುಟ್ಟುಹಬ್ಬವನ್ನು ಜೆಡಿಎಸ್ ಕಾರ್ಯಕರ್ತರು, ಮುಖಂಡರು, ಅಭಿಮಾನಿಗಳು ತಮ್ಮ ನಾಯಕನ ಶ್ರೇಯೋಭಿವೃದ್ಧಿಗಾಗಿ ಹಾಸನ, ಅರಸೀಕೆರೆ, ಮಂಡ್ಯ, ಹೊಳೆನರಸೀಪುರ ಸೇರಿದಂತೆ ನಾಡಿನಾದ್ಯಂತ ವಿಶೇಷ ಪೂಜೆ ಸಲ್ಲಿಸಿ ಸಂಭ್ರಮದಿಂದ ಆಚರಿಸಿದರು. ಹಾಸನದಲ್ಲಿ ನೀರುಬಾಗಿಲಿನ ಶ್ರೀ ಆಂಜನೇಯ ಸ್ವಾಮಿ ದೇಗುಲದಲ್ಲಿ ಕಾರ್ಯಕರ್ತರು ವಿಶೇಷ ಪೂಜೆ ಹಾಗೂ ಅರ್ಚನೆ ನೆರವೇರಿಸಿದರು. ಬಳಿಕ ಹಜರತ್ ಗುಜರಾತಿ ಬಾದ್ ಷಾ (ರ.ಅ) ದರ್ಗಾಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ನಂತರ ಎನ್.ಆರ್.ವೃತ್ತದಲ್ಲಿ ದೇವೇಗೌಡರ 30 ಅಡಿ ಎತ್ತರದ ಭವ್ಯ ಕಟೌಟ್‌ಗೆ ಕ್ಷೀರಾಭಿಷೇಕ ಹಾಗೂ ಪುಷ್ಪಾಭಿಷೇಕ ನೆರವೇರಿಸಲಾಯಿತು. ಮಂಡ್ಯದಲ್ಲಿ ದೇವೇಗೌಡರ ಆರೋಗ್ಯ ವೃದ್ಧಿಗೆ ಶ್ರೀವಿದ್ಯಾಗಣಪತಿ ದೇವಸ್ಥಾನದಲ್ಲಿ ಜೆಡಿಎಸ್ ಕಾರ್ಯಕರ್ತರು, ಮುಖಂಡ ಬಿ.ಆರ್.ರಾಮಚಂದ್ರ ನೇತೃತ್ವದಲ್ಲಿ ಮೃತ್ಯುಂಜಯ ಹೋಮ, ನವಗ್ರಹ ಶಾಂತಿ ಹೋಮ ನಡೆಸಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.