.ಗ್ರಾಮ ಒನ್ ಸುಲಿಗೆ ಅಡ್ಡೆ ಮೇಲೆ ಅಧಿಕಾರಿಗಳ ದಾಳಿ

KannadaprabhaNewsNetwork |  
Published : May 19, 2026, 01:45 AM IST
ತಹಶೀಲ್ದಾರ್ ಶ್ವೇತಾ ಬಿ.ಕೆ., ಆರ್.ಐ ಈಶ್ವರ್ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಕಚೇರಿಯ ಇಬ್ಬರು ಹಿರಿಯ ಅಧಿಕಾರಿಗಳನ್ನೊಳಗೊಂಡ ಜಂಟಿ ತಂಡವು ಸೋಮವಾರ ತಾಲೂಕು ಕಚೇರಿ ಪಕ್ಕದಲ್ಲಿರುವ ಎಲ್ಲಾ ಸೈಬರ್ ಮತ್ತು ಗ್ರಾಮ ಒನ್ ಕೇಂದ್ರಗಳಿಗೆ ದಿಢೀರ್ ಭೇಟಿ ನೀಡಿ ತಪಾಸಣೆ ನಡೆಸಿತು. | Kannada Prabha

ಸಾರಾಂಶ

ಕೇಂದ್ರಗಳಿಗೆ ಖುದ್ದಾಗಿ ಭೇಟಿ ನೀಡಿದ ಅಧಿಕಾರಿಗಳ ತಂಡವು, ನಿರ್ವಾಹಕರು ಬಳಸುತ್ತಿರುವ ಲಾಗಿನ್ ಐಡಿಗಳು, ಸಾರ್ವಜನಿಕರಿಂದ ಪಡೆಯುತ್ತಿರುವ ಶುಲ್ಕ ಹಾಗೂ ರಶೀದಿ ಪುಸ್ತಕಗಳನ್ನು ಕೂಲಂಕಷವಾಗಿ ಪರಿಶೀಲಿಸಿತು.

ಕನ್ನಡಪ್ರಭ ವಾರ್ತೆ, ಚೇಳೂರು.ತಾಲೂಕು ಕಚೇರಿ ಸಂಕೀರ್ಣದ ಪಕ್ಕದಲ್ಲೇ ಗ್ರಾಮ ಒನ್ ಬೋರ್ಡ್ ಹಾಕಿಕೊಂಡು ಸಿಎಸ್‌ಸಿ (ಖಾಸಗಿ) ಲಾಗಿನ್ ನೆಪದಲ್ಲಿ ಸಾರ್ವಜನಿಕರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದ ದಂಧೆಯ ಕುರಿತು ''''ಕನ್ನಡಪ್ರಭ'''' ದಲ್ಲಿ ಪ್ರಕಟವಾದ ವರದಿಗೆ ತಾಲೂಕು ಮತ್ತು ಜಿಲ್ಲಾ ಆಡಳಿತ ಜಂಟಿಯಾಗಿ ಕಠಿಣ ಕ್ರಮಕ್ಕೆ ಮುಂದಾಗಿದೆ.ವರದಿ ಪ್ರಕಟವಾದ ಬೆನ್ನಲ್ಲೇ ಎಚ್ಚೆತ್ತ ತಹಶೀಲ್ದಾರ್ ಶ್ವೇತಾ ಬಿ.ಕೆ., ಆರ್.ಐ ಈಶ್ವರ್ ಹಾಗೂ ಜಿಲ್ಲಾ ಕಚೇರಿಯ ಇಬ್ಬರು ಹಿರಿಯ ಅಧಿಕಾರಿಗಳನ್ನೊಳಗೊಂಡ ಜಂಟಿ ತಂಡ ಸೋಮವಾರ ತಾಲೂಕು ಕಚೇರಿ ಪಕ್ಕದಲ್ಲಿರುವ ಎಲ್ಲಾ ಸೈಬರ್ ಮತ್ತು ಗ್ರಾಮ ಒನ್ ಕೇಂದ್ರಗಳಿಗೆ ದಿಢೀರ್ ಭೇಟಿ ನೀಡಿ ತಪಾಸಣೆ ನಡೆಸಿತು.ಸ್ಥಳದಲ್ಲೇ ತರಾಟೆ, ಎಚ್ಚರಿಕೆ:

ಕೇಂದ್ರಗಳಿಗೆ ಖುದ್ದಾಗಿ ಭೇಟಿ ನೀಡಿದ ಅಧಿಕಾರಿಗಳ ತಂಡವು, ನಿರ್ವಾಹಕರು ಬಳಸುತ್ತಿರುವ ಲಾಗಿನ್ ಐಡಿಗಳು, ಸಾರ್ವಜನಿಕರಿಂದ ಪಡೆಯುತ್ತಿರುವ ಶುಲ್ಕ ಹಾಗೂ ರಶೀದಿ ಪುಸ್ತಕಗಳನ್ನು ಕೂಲಂಕಷವಾಗಿ ಪರಿಶೀಲಿಸಿತು. ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ, ಸಾರ್ವಜನಿಕರಿಗೆ ಬಿಲ್ ನೀಡದೆ ಹಣ ಲೂಟಿ ಮಾಡುತ್ತಿರುವುದರ ವಿರುದ್ಧ ತಹಶೀಲ್ದಾರ್ ಶ್ವೇತಾ ಬಿ.ಕೆ. ಹಾಗೂ ಜಿಲ್ಲಾ ಅಧಿಕಾರಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇನ್ನೊಮ್ಮೆ ನಿಗದಿತ ಶುಲ್ಕಕ್ಕಿಂತ ಹೆಚ್ಚಿನ ಹಣ ಪಡೆದರೆ ಅಥವಾ ಬಿಲ್ ನೀಡದೆ ಉಡಾಫೆ ತೋರಿದರೆ ತಕ್ಷಣವೇ ಕೇಂದ್ರಗಳನ್ನು ಸೀಜ್ ಮಾಡಿ, ಪರವಾನಗಿ ರದ್ದುಗೊಳಿಸಲಾಗುವುದು ಎಂದು ಸ್ಥಳದಲ್ಲೇ ಖಡಕ್ ವಾರ್ನಿಂಗ್ ನೀಡಿದರು.ಆಪರೇಟರ್‌ಗಳ ತುರ್ತು ಸಭೆ:

ದಾಳಿಯ ಬೆನ್ನಲ್ಲೇ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ತಾಲೂಕಿನ ಎಲ್ಲಾ ಗ್ರಾಮ ಒನ್ ನಿರ್ವಾಹಕರ ತುರ್ತು ಸಭೆ ನಡೆಸಲಾಯಿತು. ಸೋಮವಾರದಿಂದಲೇ ಜಾರಿಗೆ ಬರುವಂತೆ ಎಲ್ಲಾ ಕೇಂದ್ರಗಳ ಮುಂದೆ ಸರ್ಕಾರ ನಿಗದಿಪಡಿಸಿದ ದರಪಟ್ಟಿಯ ಫಲಕವನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು ಮತ್ತು ಪ್ರತಿ ಸೇವೆಗೂ ಕಡ್ಡಾಯವಾಗಿ ಅಧಿಕೃತ ರಶೀದಿಯನ್ನು ನೀಡಬೇಕು ಎಂದು ಅಧಿಕಾರಿಗಳು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.ಪ್ರಶಂಸೆ:

ಕೂಗಳತೆ ದೂರದಲ್ಲಿದ್ದರೂ ಅಧಿಕಾರಿಗಳ ಕಣ್ಣಿಗೆ ಬೀಳದಂತೆ ನಡೆಯುತ್ತಿದ್ದ ಈ ದಂಧೆ ಬಗ್ಗೆ ಸಮಗ್ರ ವರದಿ ಪ್ರಟಿಸಿದ ಕನ್ನಡಪ್ರಭಕ್ಕೆ ಸಾರ್ವಜನಿಕರು ಮತ್ತು ರೈತ ವಲಯದಿಂದ ಭಾರಿ ಪ್ರಶಂಸೆ ವ್ಯಕ್ತವಾಗಿದೆ.ಕೋಟ್

ಕನ್ನಡಪ್ರಭ ಪತ್ರಿಕೆಯ ವರದಿ ಆಧಾರದ ಮೇಲೆ ಜಿಲ್ಲಾ ಕಚೇರಿಯ ಅಧಿಕಾರಿಗಳು ಹಾಗೂ ಆರ್.ಐ ಈಶ್ವರ್ ಅವರೊಂದಿಗೆ ಜಂಟಿಯಾಗಿ ಸೈಬರ್ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೇವೆ. ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಲೈಸೆನ್ಸ್ ರದ್ದು ಮಾಡಲಾಗುವುದು. ಸಾರ್ವಜನಿಕರು ಯಾವುದೇ ಕೇಂದ್ರದಲ್ಲಿ ವಂಚನೆಗೊಳಗಾಗಬಾರದು.

ಶ್ವೇತಾ ಬಿ.ಕೆ., ತಹಶೀಲ್ದಾರರು, ಚೇಳೂರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಂತ್ರಜ್ಞಾನ ಸರಿಯಾಗಿ ಬಳಸಿ ಕ್ರಿಯಾಶೀಲತೆ ಮೆರೆಯಿರಿ
ಸುಧಾಕರ್‌ರವರ ಕನಸು ಸಾಕಾರ ಮಾಡಲಾಗುವುದು