ದೇವೇಗೌಡರ 92ನೇ ಹುಟ್ಟುಹಬ್ಬ: ಹಾಸನದಲ್ಲಿ ವಿಶೇಷ ಪೂಜೆ

KannadaprabhaNewsNetwork |  
Published : May 19, 2024, 01:51 AM IST
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಹುಟ್ಟು ಹಬ್ಬದ ಅಂಗವಾಗಿ ನಗರದ ಶ್ರೀ ಆದಿಚುಂಚನಗಿರಿ ಮಠದ ಆವರಣದಲ್ಲಿರುವ ಶ್ರೀ ಗಣಪತಿ ದೇವಾಲಯದಲ್ಲಿ ಕಾರ್ಯಕರ್ತರು ಹಾಗೂ ಅಬಿಮಾನಿಗಳು ಪೂಜೆ ಸಲ್ಲಿಸಿದರು. | Kannada Prabha

ಸಾರಾಂಶ

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ 92ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಹಾಸನದ ಶ್ರೀ ಆದಿಚುಂಚನಗಿರಿ ಮಠದ ಆವರಣದಲ್ಲಿರುವ ಶ್ರೀ ಗಣಪತಿ ದೇವಾಲಯದಲ್ಲಿ ಜೆಡಿಎಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.

ಜೆಡಿಎಸ್‌ ಕಾರ್ಯಕರ್ತರು, ಅಭಿಮಾನಿಗಳು ಸಂಭ್ರಮ । ಆದಿಚುಂಚನಗಿರಿ ಮಠದ ದೇಗುಲದಲ್ಲಿ ಅರ್ಚನೆ । ಸರಳ ಆಚರಣೆ

ಕನ್ನಡಪ್ರಭ ವಾರ್ತೆ ಹಾಸನ

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ 92ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ನಗರದ ಶ್ರೀ ಆದಿಚುಂಚನಗಿರಿ ಮಠದ ಆವರಣದಲ್ಲಿರುವ ಶ್ರೀ ಗಣಪತಿ ದೇವಾಲಯದಲ್ಲಿ ಜೆಡಿಎಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.

ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್ ಮಾಧ್ಯಮದೊಂದಿಗೆ ಮಾತನಾಡಿ, ‘ಶ್ರೀ ಆದಿಚುಂಚನಗಿರಿ ಮಠದ ಸ್ವಾಮೀಜಿ ಆಶೀರ್ವಾದ ಕೇಳುವ ಮೂಲಕ, ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ದೇವೇಗೌಡರ ಅಭಿಮಾನಿಗಳು ಸೇರಿ ಮಾಜಿ ಪ್ರಧಾನಿಗಳ 92ನೇ ವರ್ಷದ ಜನ್ಮದಿನವನ್ನು ಸರಳವಾಗಿ ಆಚರಣೆ ಮಾಡಲಾಗುತ್ತಿದೆ. ಕಾವೇರಿ, ಗಡಿ ವಿಚಾರ, ಕನ್ನಡ ಪರ ಹೋರಾಟ ಇರಬಹುದು, ದೇವೇಗೌಡರು ನಮ್ಮ ರಾಜ್ಯಕ್ಕೆ ಮತ್ತು ರಾಷ್ಟ್ರದಲ್ಲಿ ಸರ್ವ ಪಕ್ಷಗಳಿಗೆ ಸಲಹೆಗಳನ್ನು ಕೊಡುತ್ತಿದ್ದರು. ಭೂಪಟದಲ್ಲಿ ಹಾಸನ ಜಿಲ್ಲೆಯನ್ನು ಗುರುತಿಸುವಂತೆ ಮಾಡಿದವರು ಎಚ್.ಡಿ.ದೇವೇಗೌಡರು. ಭಗವಂತನು ದೇವೇಗೌಡರಿಗೆ ಆರೋಗ್ಯ, ಆಯಸ್ಸು ಕರುಣಿಸಿ. ಇನ್ನು ಹಲವಾರು ವರ್ಷಗಳ ಕಾಲ ಇದ್ದು, ನಮಗೆ ಸಲಹೆ ಸೂಚನೆಯನ್ನು ಕೊಡಬೇಕು’ ಎಂದು ಹೇಳಿದರು.

‘ಜೆಡಿಎಸ್ ಪಕ್ಷ ಇನ್ನೂ ಇದೆ ಎಂದರೆ ದೇವೇಗೌಡರೇ ಕಾರಣ. ಮುಖ್ಯಮಂತ್ರಿ, ಪ್ರಧಾನ ಮಂತ್ರಿ ಹುದ್ದೆಯನ್ನು ಏರಿ ಅಧಿಕಾರ ಪಡೆದಿದ್ದಾರೆ. ಅವರಿಗೆ ಎಲ್ಲರ ಪರವಾಗಿ ಹುಟ್ಟುಹಬ್ಬದ ಶುಭಾಶಯವನ್ನು ಕೋರುತ್ತೇವೆ’ ಎಂದು ಹೇಳಿದರು.

ಬೇಲೂರು ಮಾಜಿ ಶಾಸಕ ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಸ್.ಲಿಂಗೇಶ್ ಮಾತನಾಡಿ, ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರು 92ನೇ ವರ್ಷದ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಸಾಮಾನ್ಯ ರೈತ ಕುಟುಂಬದಲ್ಲಿ ಹುಟ್ಟಿ ತಾಲೂಕು ಪಂಚಾಯಿತಿ ಸದಸ್ಯರಾಗುವ ಮೂಲಕ ರಾಜಕಾರಣಕ್ಕೆ ಕಾಲಿಟ್ಟು, ಶಾಸಕ, ಸಚಿವ, ಮುಖ್ಯಮಂತ್ರಿ, ಪ್ರಧಾನ ಮಂತ್ರಿ ಹುದ್ದೆವರೆಗೂ ಜನರು ಅವಕಾಶ ಕೊಟ್ಟಿದ್ದಾರೆ ಎಂದು ಹೇಳಿದರು.

ಪ್ರಧಾನಿಯಾಗಿ ಕೆಂಪುಕೋಟೆಯಲ್ಲಿ ಕನ್ನಡಿಗನಾಗಿ ಮೊದಲ ಬಾರಿಗೆ ರಾಷ್ಟ್ರ ಧ್ವಜವನ್ನು ಹಾರಿಸಿದ್ದಾರೆ. ಪ್ರಧಾನ ಮಂತ್ರಿ ಆದ ವೇಳೆ ಅನೇಕ ಉತ್ತಮ ಜನಪರ ಕಾರ್ಯಕ್ರಮ ಕೈಗೊಂಡಿದ್ದರು. ಕೃಷ್ಣ, ಕಾವೇರಿಯನ್ನದೇ ನೀರಾವರಿಗೆ ತೊಡಿಸಿಗಿಕೊಂಡು ಕೇಂದ್ರದ ಅನುದಾನ ನೀಡಿದ್ದನ್ನು ನೆನಪಿಸಿಕೊಳ್ಳಬೇಕಾಗುತ್ತದೆ. ಯಾವುದೇ ಕಪ್ಪುಚುಕ್ಕಿ ಇಲ್ಲದೇ 11 ತಿಂಗಳ ಆಡಳಿವನ್ನು ಯಶಸ್ವಿಯಾಗಿ ಕೊಟ್ಟಿದ್ದಾರೆ. ಬುಲೆಟ್ ಪ್ರೂಫ್‌ ಹಾಕಿಕೊಳ್ಳದೇ ಕಾಶ್ಮೀರಕ್ಕೆ ಭೇಟಿ ಕೊಟ್ಟಿದ್ದಾರೆ. ಕರ್ನಾಟಕದಲ್ಲಿ ಇದ್ದಂತಹ ಪಡಿತರ ಪದ್ಧತಿಯನ್ನು ಇಡೀ ಭಾರತ ದೇಶಕ್ಕೆ ವಿಸ್ತರಿಸಿದಂತಹ ಕೀರ್ತಿ ಅವರಿಗೆ ಸಲುತ್ತದೆ. ದೇವೇಗೌಡರ ಮಾರ್ಗದರ್ಶನ ಅತ್ಯವಶ್ಯಕವಾಗಿದ್ದು, ಭಗವಂತ ಹೆಚ್ಚಿನ ಶಕ್ತಿ ನೀಡಿ ಆರೋಗ್ಯ ವೃದ್ಧಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ ಎಂದರು.

ಇದೇ ವೇಳೆ ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್.ದ್ಯಾವೇಗೌಡ, ಒಕ್ಕಲಿಗರ ಸಂಘದ ರಾಜ್ಯ ನಿರ್ದೇಶಕ ಸುಮುಖ ರಘು, ಮಾಧ್ಯಮ ವಕ್ತಾರ ಹೊಂಗೆರೆ ರಘು, ಮುಖಂಡರಾದ ಬಿದರಿಕೆರೆ ಜಯರಾಮ್, ಆಲೂರು ತಾಲೂಕು ಅಧ್ಯಕ್ಷ ಮಂಜೇಗೌಡ, ನಗರಸಭೆ ಮಾಜಿ ಅಧ್ಯಕ್ಷ ಎಚ್.ಎಸ್.ಅನಿಲ್ ಕುಮಾರ್, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಬಿ.ಆರ್.ಸತ್ಯನಾರಾಯಣ್, ಪ್ರೇಮಮ್ಮ, ದಸ್ತಾಗೀರ್, ಭಾನುಪ್ರಕಾಶ್, ಎಚ್.ಬಿ.ಗೋಪಾಲ್ ಇದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌