ಪುರಸಭೆಯ ಸಾಮಾನ್ಯ ಸಭೆಯಲ್ಲಿ ಶಾಸಕಕನ್ನಡಪ್ರಭ ವಾರ್ತೆ ಹೂವಿನಹಡಗಲಿ
ನಿಮ್ಮ ವಾರ್ಡ್‌ಗಳಲ್ಲಿ ನಾಗರಿಕರಿಗೆ ಅಗತ್ಯ ಮೂಲಭೂತ ಸೌಲಭ್ಯಗಳ ಕಲ್ಪಿಸಲು ನೀವೇ ಕ್ರಿಯಾ ಯೋಜನೆಗೆ ರೂಪಿಸಿ ಕೊಡಿ, ಅದನ್ನು ಮಂಜೂರು ಮಾಡಿಸುತ್ತೇನೆ ಎಂದು ಶಾಸಕ ಕೃಷ್ಣನಾಯ್ಕ ಭರವಸೆ ನೀಡಿದರು.ಇಲ್ಲಿನ ಪುರಸಭೆಯ ಎಂ.ಪಿ. ಪ್ರಕಾಶ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ನಿಮ್ಮ ವಾರ್ಡ್‌ಗಳಲ್ಲಿ ಚರಂಡಿ ನಿರ್ಮಾಣ, ಸ್ವಚ್ಛತೆ. ವಿದ್ಯುತ್ ದೀಪಗಳ ಅಳವಡಿಕೆ, ಸಿಸಿ ರಸ್ತೆ ನಿರ್ಮಾಣ, ಕುಡಿಯುವ ನೀರು, ಒಳ ಚರಂಡಿ ವ್ಯವಸ್ಥೆ, ವಿದ್ಯುತ್ ಕಂಬಗಳ ಸ್ಥಳಾಂತರ ಸೇರಿದಂತೆ ಇತರ ಸಮಸ್ಯೆಗಳ ಕುರಿತು ನೀವು ವಾರ್ಡ್‌ಗಳ ಸದಸ್ಯರಾಗಿದ್ದು, ನಿಮಗೆ ಸಮಸ್ಯೆಗಳ ಅರಿವು ಇರುವ ಕಾರಣ ನೀವೇ ಕ್ರಿಯಾ ಯೋಜನೆ ರೂಪಿಸಿ ಅದನ್ನು ನಾನು ಮಂಜೂರು ಮಾಡಿಸುತ್ತೇನೆಂದು ಹೇಳಿದರು.
ಈಗಾಗಲೇ ಪಟ್ಟಣ ಸೇರಿದಂತೆ ಇಡೀ ಕ್ಷೇತ್ರದಲ್ಲಿರುವ ವಿದ್ಯುತ್ ದೀಪಗಳ ವ್ಯವಸ್ಥೆ ಕಲ್ಪಿಸಕಲು ಒಂದು ಸರ್ವೇ ಮಾಡಿಸಿದ್ದೇನೆ, ಇದಕ್ಕೆ 8 ಸಾವಿರ ವಿದ್ಯುತ್ ದೀಪಗಳ ಬೇಡಿಕೆ ಇದೆ. 5 ವರ್ಷ ಬಾಳಿಕೆ ಬರುವಂತ ದೀಪಗಳನ್ನು ಅಳವಡಿಸಲಾಗುವುದು, ಜತೆಗೆ ಪಟ್ಟಣದಲ್ಲಿ 1500 ರಷ್ಟು ವಿದ್ಯುತ್ ದೀಪಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.ಪಟ್ಟಣದ ಗ್ರಾಮ ದೇವತೆ ಮಹಾದ್ವಾರದಿಂದ ಮದಲಗಟ್ಟ ರಸ್ತೆಯವರೆಗಿನ, ರಸ್ತೆ ನಡು ಮಧ್ಯೆ ಹಾಕಿರುವ ವಿದ್ಯುತ್ ಕಂಬಗಳನ್ನು ಕೂಡಲೇ ಸ್ಥಳಾಂತರ ಮಾಡಿ ರಸ್ತೆ ಪಕ್ಕದಲ್ಲೇ ಗುಣಮಟ್ಟದ ವಿದ್ಯುತ್ ಕಂಬಗಳನ್ನು ಅಳವಡಿಸಲಾಗುವುದು ಎಂದರು.
ಈಗಾಗಲೇ ಪಟ್ಟಣದ ರುದ್ರಭೂಮಿಯಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಜಿಲ್ಲಾಧಿಕಾರಿಗಳು ಕೆಲ ಕಾಮಗಾರಿಗಳಿಗೆ ಆದೇಶ ನೀಡಿದ್ದಾರೆ. ಉಳಿದಂತೆ ರುದ್ರಭೂಮಿಯನ್ನು ಉದ್ಯಾನ ವನ ರೀತಿಯಲ್ಲಿ ಅಭಿವೃದ್ಧಿ ಪಡಿಸುವಂತಹ ಚಿಂತನೆ ಇದೆ. ಈ ನಿಟ್ಟಿನಲ್ಲಿ ಎಲ್ಲ ಸದಸ್ಯರ ಸಹಕಾರ ಅಗತ್ಯವಿದೆ ಎಂದರು.ನಗರೋತ್ಥಾನ ಯೋಜನೆಯಡಿ ಪಟ್ಟಣದ ವಿವಿಧ ಕಡೆಗಳಲ್ಲಿ ಸಿಸಿ ರಸ್ತೆ ಮಂಜೂರಾಗಿತ್ತು. ಇದರಲ್ಲಿ ಕೇವಲ 1 ಕೋಟಿ ರುಗಳ ಅನುದಾನದಲ್ಲಿ ಮಾತ್ರ ಕಾಮಗಾರಿ ಆಗಿದೆ. ಉಳಿದ 4 ಕೋಟಿ ರುಗಳ ಅನುದಾನ ವಾಪಸ್ ಹೋಗಿರುವ ಅನುಮಾನವಿದೆ. ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸದಸ್ಯ ವಾರದ ಗೌಸ್ ಮೋಹಿದ್ದೀನ್ ಒತ್ತಾಯಿಸಿದರು.
ಇದಕ್ಕೆ ಸ್ಪಂದಿಸಿದ ಶಾಸಕರು ಈ ಕುರಿತು ಕಾಮಗಾರಿ ಆಗಿರುವ ಮಾಹಿತಿ ಪಡೆದು, ಅರೆಬರೆ ಕಾಮಗಾರಿ ಆಗಿದ್ದರೇ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರ್ಪಡೆ ಮಾಡಲು ಕ್ರಮಕ್ಕೆ ಮುಂದಾಗುತ್ತೇವೆಂದು ಹೇಳಿದರು.ಪಟ್ಟಣದ ಮಿನಿ ವಿಧಾನಸೌಧ ಶಾಲೆಯ ಬಳಿ ಇರುವ ಖಾಲಿ ಜಾಗದಲ್ಲಿ ಸುಂದರವಾಗಿರುವ ಹೈಟೆಕ್ ಉದ್ಯಾನವನ ನಿರ್ಮಾಣ ಮಾಡುವ ಯೋಚನೆ ಇದೆ. ಇದರಿಂದ ಆ ಭಾಗದಲ್ಲಿರುವ ಹಿರಿಯ ನಾಗರಿಕರು, ಮಹಿಳೆಯರು ಮತ್ತು ಮಕ್ಕಳಿಗೆ ಅನುಕೂಲವಾಗಲಿದೆ ಎಂದರು.
ಈ ಸಂದರ್ಭ ಪುರಸಭೆಯ ಅಧ್ಯಕ್ಷೆ ಜಮಾಲ್ ಬೀ, ಉಪಾಧ್ಯಕ್ಷ ಮಂಜುನಾಥ ಸೊಪ್ಪಿನ, ಪುರಸಭೆ ಮುಖ್ಯಾಧಿಕಾರಿ ಅಮಾಮ್ ಸಾಹೇಬ್ ಹಾಗೂ ಪುರಸಭೆಯ ಸರ್ವ ಸದಸ್ಯರು ಉಪಸ್ಥಿತರಿದ್ದರು.