ನಿರಂತರ ಅಭ್ಯಾಸದ ಮೂಲಕ ಕ್ರಿಯಾಶೀಲತೆ ಬೆಳೆಸಿಕೊಳ್ಳಿ: ಸಾಗರ ಖಂಡ್ರೆ

KannadaprabhaNewsNetwork | Published : Nov 11, 2024 11:45 PM

ಸಾರಾಂಶ

ಮಾಮನಕೇರಿಯ ಜ್ಞಾನಸುಧಾ ವಿದ್ಯಾಲಯದ ಜ್ಞಾನರಂಗ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ‘ಯುವಕರೊಂದಿಗೆ ಸಂವಾದ’ ಕಾರ್ಯಕ್ರಮ ಜರುಗಿತು.

ಕನ್ನಡಪ್ರಭ ವಾರ್ತೆ ಬೀದರ್

ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಸಮಯ ವ್ಯರ್ಥ ಮಾಡದೆ ನಿರಂತರ ಅಭ್ಯಾಸ ಮಾಡುವುದರ ಮೂಲಕ ಕ್ರೀಯಾಶೀಲತೆಯುನ್ನು ಬೆಳೆಸಿಕೊಂಡು ಸಮಾಜ ಅಭಿವೃದ್ಧಿಯತ್ತ ಕೊಂಡೊಯ್ಯುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕೆಂದು ಬೀದರ್ ಸಂಸದರಾದ ಸಾಗರ ಖಂಡ್ರೆ ಸಲಹೆ ನೀಡಿದರು.

ನಗರದ ಮಾಮನಕೇರಿಯ ಜ್ಞಾನಸುಧಾ ವಿದ್ಯಾಲಯದ ಜ್ಞಾನರಂಗ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ‘ಯುವಕರೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ಮಾತನಾಡಿ,‘ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ವಿ ಬದುಕು ರೂಪಿಸಿಕೊಳ್ಳಬೇಕೆಂದರೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕು. ಈ ಪರೀಕ್ಷೆಗಳಲ್ಲಿ ಯಶಸ್ಸು ಕಾಣಲು ಎಲ್ಲ ವಿಷಯಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ವ್ಯಾಸಂಗ ಮಾಡುವುದರೊಂದಿಗೆ ಪ್ರತಿದಿನ ಕನ್ನಡ ಮತ್ತು ಇಂಗ್ಲಿಷ್ ಪತ್ರಿಕೆಯನ್ನು ಓದುವ ಹವ್ಯಾಸ ಮೈಗೂಡಿಸಿಕೊಳ್ಳಬೇಕು’ ಎಂದು ತಿಳಿಸಿದರು.

ವಿದ್ಯಾರ್ಥಿಗಳು ಸಮೂಹ ಸನ್ನಿಗೆ ಒಳಗಾಗದೆ, ವೈಯಕ್ತಿಕವಾಗಿ ಮಾಡಿದ ಆಲೋಚನೆಯೊಂದಿಗೆ ಮುನ್ನುಗ್ಗಬೇಕು. ಅಂದಾಗ ಮಾತ್ರ ಏನನ್ನಾದರೂ ಹೊಸದನ್ನು ಸಾಧನೆ ಮಾಡಲು ಸಾಧ್ಯವಾಗುತ್ತದೆ’ ಎಂದರು

ವಿದ್ಯಾರ್ಥಿ ಜೀವನದಲ್ಲಿ ಇಂದು ಮಾಡಬೇಕಾದ ಕೆಲಸ ನಾಳೆ ಅಥವಾ ಇನ್ನೊಂದು ದಿನ ಮಾಡಿದರಾಯಿತು ಎನ್ನುವ ಮನಸ್ಥಿತಿ ಹೊಂದಬಾರದು. ಪ್ರತಿಯೊಂದು ಚಟುವಟಿಕೆಯಲ್ಲೂ ಪಾಲ್ಗೊಂಡು ತಮ್ಮ ಜ್ಞಾನ ಸಂಪತ್ತು ವೃದ್ಧಿಸಿ ಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಯೊಬ್ಬ ‘ರಾಜಕೀಯ ಕ್ಷೇತ್ರದಲ್ಲಿ ಶಿಕ್ಷಣ ಹೇಗೆ ಸಹಾಯಕವಾಗುತ್ತದೆ?’ ಎಂದು ಕೇಳಿದ ಪ್ರಶ್ನೆಗೆ ಸಾಗರ ಖಂಡ್ರೆ ಉತ್ತರಿಸಿ ‘ರಾಜಕಾರಣಿಗಳಿಗೆ ದಾರಿ ತಪ್ಪಿಸುವ ಅಧಿಕಾರಿಗಳೂ ಇರುತ್ತಾರೆ. ಉತ್ತಮ ಶಿಕ್ಷಣ ಪಡೆದ ರಾಜಕಾರಣಿಗೆ ಮಾತ್ರ ಅದು ಅರ್ಥವಾಗುತ್ತದೆ. ಅಲ್ಲದೇ ಶಿಕ್ಷಣ ಪಡೆದ ರಾಜಕಾರಣಿಗಳಿಗೆ ಆಡಳಿತಾತ್ಮಕ ಒಳತೊಡಕುಗಳನ್ನು ಅರ್ಥ ಮಾಡಿಕೊಂಡು ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.

ಮತ್ತೊಬ್ಬ ವಿದ್ಯಾರ್ಥಿನಿ ‘ಫೇಕ್ ಮಾಹಿತಿ ಹೇಗೆ ಗೊತ್ತು ಮಾಡಿಕೊಳ್ಳಬೇಕು’ ಎಂದು ಕೇಳಿದ ಪ್ರಶ್ನೆಗೆ ‘ಸಾಮಾಜಿಕ ಜಾಲತಾಣಗಳ ಮೇಲೆ ಪೂರ್ತಿ ನಂಬಿಕೆ ಇಡಬಾರದು. ಪುಸ್ತಕಗಳನ್ನು ಓದುವ ಮೂಲಕ ಸರಿಯಾದ ವಿಷಯ ಸಂಗ್ರಹಣೆಯನ್ನು ಹಲವಾರು ಆಯಾಮಗಳಿಂದ ಮಾಡಿಕೊಳ್ಳುವುದರ ಮೂಲಕ ಫೇಕ್ ಮಾಹಿತಿಯನ್ನು ತಿರಸ್ಕರಿಸಬಹುದು’ ಎಂದು ತಿಳಿಸಿದರು.

‘ಬೀದರ್ ಸಂಸದರಾಗಿ ನಿಮ್ಮ ಕನಸು ಏನು?’ ಎಂದು ಇನ್ನೊರ್ವ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಉತ್ತರಿಸಿ, ‘ಸಮಾಜನದಲ್ಲಿ ಹೆಣ್ಣು ಗಂಡು, ಜಾತಿ ಧರ್ಮ ಎಂಬ ಭೇದಭಾವ ಹೊಗಲಾಡಿಸಿ ಸಮಾನತೆ ಸಮಾಜ ಕಟ್ಟಿ ಅಭಿವೃದ್ಧಿಪಡಿಸುವುದಾಗಿದೆ’ ಎಂದು ಹೇಳಿದರು.

ಸಂಸ್ಥೆಯ ಅಧ್ಯಕ್ಷರಾದ ಡಾ. ಪೂರ್ಣಿಮಾ ಜಾರ್ಜ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಗರ ಖಂಡ್ರೆಯವರು ಕೋವಿಡ್ ಸಂದರ್ಭದಲ್ಲಿ ಬಡಜನರ ಕಷ್ಟಗಳಿಗೆ ಸ್ಪಂದಿಸುವ ಮೂಲಕ ಸಾಮಾಜಿಕವಾಗಿ ಸೇವೆ ಸಲ್ಲಿಸಿದ್ದನ್ನು ನೆನೆದರು.

ಸಂಸ್ಥೆಯ ನಿರ್ದೇಶಕರಾದ ಮುನೇಶ್ವರ ಲಾಖಾ ಮಾತನಾಡಿ, ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉತ್ತಮ ರಾಜಕಾರಣಿಯಾಗುವ ಗುರಿಯನ್ನೂ ಇಟ್ಟುಕೊಳ್ಳಬೇಕು ಎಂದು ಸಲಹೆ ಮಾಡಿದರು.

ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಸದಸ್ಯರಾದ ಚಂದ್ರಶೇಖರ ಪಾಟೀಲ್, ರವಿ ಮೂಲಗೆ, ಬೀದರ್ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾದ ಪೂಜಾ ಜಾರ್ಜ್ ಎಸ್., ಪ್ರತಿಷ್ಠಿತ ವ್ಯಕ್ತಿಯಾದ ಕಿರಣ ಸ್ಯಾಮುವೆಲ್, ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಚನ್ನವೀರ ಪಾಟೀಲ್, ಜ್ಞಾನಸುಧಾ ವಿದ್ಯಾಲಯದ ಪ್ರಾಚಾರ್ಯೆ ಸುನೀತಾ ಸ್ವಾಮಿ, ಉಪಪ್ರಾಚಾರ್ಯೆ ಕಲ್ಪನಾ ಮೋದಿ, ಮೇಲ್ವಿಚಾರಕರಾದ ರಜನಿ ಮೈಲೂರಕರ್ ಉಪಸ್ಥಿತರಿದ್ದರು.

Share this article