ಕನ್ನಡಪ್ರಭ ವಾರ್ತೆ ಮೈಸೂರು
2024- 25ನೇ ಸಾಲಿನ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ರೈತರಿಂದ ಎಫ್‌ಎಕ್ಯೂ ಗುಣಮಟ್ಟದ ರಾಗಿ, ಭತ್ತ, ಖರೀದಿಸಲು ಬೆಂಬಲ ಬೆಲೆ ನಿಗದಿಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ತಿಳಿಸಿದರು.ತಮ್ಮ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ 2024- 25ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾಮಾನ್ಯ ಭತ್ತ ಕ್ವಿಂಟಲ್ ಗೆ 2300 ರು., ರಾಗಿ ಕ್ವಿಂಟಾಲ್ ಗೆ 4290 ರು. ಇದ್ದು, ನೋಂದಣಿ ಪ್ರಕ್ರಿಯೆಯಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಗೆ ಭತ್ತ ಮತ್ತು ರಾಗಿ ಖರೀದಿಸಲು ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯನ್ನು ಖರೀದಿ ಏಜೆನ್ಸಿಯನ್ನಾಗಿ ಸರ್ಕಾರ ನೇಮಿಸಿದ್ದು, ಖರೀದಿ ಪ್ರಕ್ರಿಯೆಯು ಇವರ ಮುಖಾಂತರ ನಡೆಯುತ್ತದೆ. ಸರ್ಕಾರದ ಮಾನದಂಡಗಳ ಅನ್ವಯ ಎಫ್‌ಎಕ್ಯೂ ಗುಣಮಟ್ಟವನ್ನು ದೃಢೀಕರಿಸಲು ಕ್ರಮ ವಹಿಸಬೇಕು. ಖರೀದಿ ಏಜೆನ್ಸಿಯ ಹಿರಿಯ ಅಧಿಕಾರಿಗಳು ಮೇಲುಸ್ತುವಾರಿ ತಪಾಸಣೆ ಕೈಗೊಳ್ಳಬೇಕು ಎಂದರು.ಸೂಕ್ತ ದಾಸ್ತಾನಿಗಾಗಿ ಭತ್ತ, ರಾಗಿ ಖರೀದಿ ಕೇಂದ್ರಗಳಲ್ಲಿ ಭತ್ತದ ಗುಣಮಟ್ಟವನ್ನು ಪರೀಕ್ಷಿಸಲು ಗ್ರೇಡರ್ ಗಳನ್ನು ನಿಯೋಜಿಸುವಂತೆ ಹಾಗೂ ಖರೀದಿಸಿದ ಭತ್ತ, ರಾಗಿಯನ್ನು ಸೂಕ್ತ ರೀತಿಯಲ್ಲಿ ದಾಸ್ತಾನು ಮಾಡಲು ಅಗತ್ಯವಿರುವ ದಾಸ್ತಾನು ಕೇಂದ್ರಗಳನ್ನು ಗುರುತಿಸುವಂತೆ ಅವರು ಸೂಚಿಸಿದರು.
ರೈತರು ಪ್ರೂಟ್ಸ್ ತಂತ್ರಾಂಶದಲ್ಲಿ ನೋಂದಾಯಿಸಿಭತ್ತ, ರಾಗಿ ಮಾರಾಟ ಮಾಡಬೇಕಾದ ರೈತರು ಈಗಾಗಲೇ ಪ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿಯಾಗಿರಬೇಕು. ಒಂದು ವೇಳೆ ರೈತರು ನೋಂದಣಿ ಮಾಡದಿದ್ದಲ್ಲಿ ಪ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಮಾಡಿಕೊಂಡು ತಾವು ಬೆಳೆದ ಭತ್ತ, ರಾಗಿಯನ್ನು ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಬಹುದಾಗಿದೆ. ಖರೀದಿ ಕೇಂದ್ರಗಳಲ್ಲಿ ರೈತರಿಂದ ಖರೀದಿ ಮಾಡಿದ ಭತ್ತ, ರಾಗಿ ಮೊತ್ತವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ. ನೊಂದಣಿ ಕೇಂದ್ರದಲ್ಲಿ ರೈತರು ಪ್ರೂಟ್ ಐಡಿ, ಆಧಾರ್ ಸಂಖ್ಯೆಗೆ ಜೋಡಣೆಯಾದ ತಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ನೀಡಬೇಕಿದೆ ಎಂದು ಅವರು ತಿಳಿಸಿದರು.
ಭತ್ತ, ರಾಗಿ ಖರೀದಿ ನೋಂದಣಿ ಪ್ರಾರಂಭವಾಗುವ ದಿನಾಂಕ ಕುರಿತು ಗ್ರಾಮೀಣ ಭಾಗದಲ್ಲಿ ರೈತರಿಗೆ ಹಾಗೂ ರೈತ ಮುಖಂಡರಿಗೆ ರೈತ ಸಂಪರ್ಕ ಕೇಂದ್ರಗಳ ಮೂಲಕ ಹೆಚ್ಚಿನ ಮಾಹಿತಿ ನೀಡುವಂತೆ ಹಾಗೂ ರೈತರ ನೋಂದಣಿ ಕೇಂದ್ರಗಳು ಹಾಗೂ ಭತ್ತ, ರಾಗಿ ಖರೀದಿ ಕೇಂದ್ರಗಳ ಕುರಿತು ವಿವರಗಳನ್ನು ನೀಡುವಂತೆ ಅವರು ಹೇಳಿದರು.ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕಿ ಕುಮುದಾ ಶರತ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರವಿ, ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಕೆ. ಹರೀಶ್, ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯ ಅಧಿಕಾರಿಗಳು ಮೊದಲಾದವರು ಇದ್ದರು.