ಎಸ್‌ಎಸ್‌ ಕುಟುಂಬ ಟೀಕಿಸದೇ ಹರಿಹರ ಕ್ಷೇತ್ರ ಅಭಿವೃದ್ಧಿಪಡಿಸಿ

KannadaprabhaNewsNetwork |  
Published : Dec 24, 2025, 01:30 AM IST
23ಕೆಡಿವಿಜಿ2-ದಾವಣಗೆರೆಯಲ್ಲಿ ಮಂಗಳವಾರ ಕಾಂಗ್ರೆಸ್ ಮುಖಂಡ ಆಸೀಫ್ ಇಕ್ಬಾಲ್ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಕಾಂಗ್ರೆಸ್‌ ಹಿರಿಯ ನಾಯಕ, ದಾವಣಗೆರೆ ದಕ್ಷಿಣ ಕ್ಷೇತ್ರ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ನಿಧನರಾಗಿರುವ ದಿನಗಳಿವು. ಇಂಥ ಸಂದರ್ಭದಲ್ಲೇ ರಾಜಕೀಯದ ಮಾತುಗಳ ಆಡೋದು ಹರಿಹರ ಶಾಸಕ ಬಿ.ಪಿ.ಹರೀಶ್‌ ಅವರಿಗೆ ಶೋಭೆ ತರುವುದಿಲ್ಲ ಎಂದು ಕಾಂಗ್ರೆಸ್‌ ಮುಖಂಡ ಆಸಿಫ್ ಇಕ್ಬಾಲ್ ಹೇಳಿದ್ದಾರೆ.

- ಶಾಮನೂರು ಕುಟುಂಬಸ್ಥರಿಗೆ ಸಾಂತ್ವನ ಹೇಳದಿದ್ದರೂ ಪರವಾಗಿಲ್ಲ, ನೋವು ನೀಡಬೇಡಿ: ಆಸಿಫ್‌ ಸಲಹೆ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಕಾಂಗ್ರೆಸ್‌ ಹಿರಿಯ ನಾಯಕ, ದಾವಣಗೆರೆ ದಕ್ಷಿಣ ಕ್ಷೇತ್ರ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ನಿಧನರಾಗಿರುವ ದಿನಗಳಿವು. ಇಂಥ ಸಂದರ್ಭದಲ್ಲೇ ರಾಜಕೀಯದ ಮಾತುಗಳ ಆಡೋದು ಹರಿಹರ ಶಾಸಕ ಬಿ.ಪಿ.ಹರೀಶ್‌ ಅವರಿಗೆ ಶೋಭೆ ತರುವುದಿಲ್ಲ ಎಂದು ಕಾಂಗ್ರೆಸ್‌ ಮುಖಂಡ ಆಸಿಫ್ ಇಕ್ಬಾಲ್ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯದಲ್ಲಿ ಟೀಕೆ, ಆರೋಪ, ಪ್ರತ್ಯಾರೋಪಗಳು ಸಹಜವಾಗಿವೆ. ಅದಕ್ಕೆಲ್ಲಾ ಸಮಯ, ಸಂದರ್ಭಗಳಿವೆ. ಆದರೆ, ಜಿಲ್ಲೆಯಲ್ಲಿ ಶಾಸಕ, ಹಿರಿಯ ರಾಜಕೀಯ ನಾಯಕನ ಸಾವಿನ ವಿಚಾರದಲ್ಲೂ ಮಾನವೀಯತೆ ಬಿಟ್ಟು ಮಾತಾಡಬಾರದು. ಶಾಮನೂರು ಕುಟುಂಬಸ್ಥರಿಗೆ ನೀವು ಸಾಂತ್ವನ ಹೇಳದಿದ್ದರೂ ಪರವಾಗಿಲ್ಲ. ಆದರೆ, ಇಂತಹ ಸಮಯದಲ್ಲಿ ಟೀಕೆ, ಪ್ರಹಾರ ಮಾಡಿ, ನೊಂದ ಮನಸ್ಸುಗಳಿಗೆ ಮತ್ತಷ್ಟು ದುಃಖ ಕೊಡಬಾರದು ಎಂದು ತಿಳಿಸಿದರು.

ಹರಿಹರ ಕೈಗಾರಿಕಾ ನಗರಿಯಾಗಿತ್ತು. ಅಲ್ಲಿ ನುರಿತ ಕಾರ್ಮಿಕರು ಇದ್ದಂತಹ ಟೆಕ್ನಿಕಲ್ ವೇನಲ್ಲೇ ಕೆಲಸ ಮಾಡುವಂತಹ ಕಾರ್ಮಿಕರು ಇರುವಂತಹ ಊರು. ಇಂದು ಕೈಗಾರಿಕೆಗಳು ಇಲ್ಲದ್ದಕ್ಕೆ ಇಡೀ ಊರು ಬಡವಾಗಿದೆ. ಹರಿಹರ ನಗರ ಕಿರ್ಲೋಸ್ಕರ್ ಕಾರ್ಖಾನೆ ಹೋದ ಮೇಲಂತೂ ಔದ್ಯೋಗಿಕ ಆರ್ಥಿಕವಾಗಿ ಮಬ್ಬಾಗಿದೆ. ಸಾವಿರಾರು ಕಾರ್ಮಿಕರು, ಕುಟುಂಬಗಳು ಬೀದಿಗೆ ಬಂದಿವೆ. ಅಂಥವರಿಗೆ ಏನಾದರೂ ಒಳ್ಳೆಯದು ಮಾಡಲಿ. ಹರಿಹರ ಕ್ಷೇತ್ರಕ್ಕೆ ಹೊಸ ಕೈಗಾರಿಕೆಗಳ ತಂದು, ಉದ್ಯೋಗಗಳ ಕಲ್ಪಿಸಲಿ ಎಂದು ತಾಕೀತು ಮಾಡಿದರು.

ಸಾರಥಿ ಗ್ರಾಪಂ ವ್ಯಾಪ್ತಿಯಲ್ಲಿ ಭೂ ಸ್ವಾಧೀನ ಪ್ರಕ್ರಿಯೆಯಾಗಿ, ಕೆಐಎಡಿಬಿಯಿಂದ ಅಭಿವೃದ್ಧಿಪಡಿಸಲಾಗಿದೆ. ಕೈಗಾರಿಕೆಗಳು ಯಾಕೆ ಬರುತ್ತಿಲ್ಲವೆಂಬ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಿದೆ. ಈ ನಿಟ್ಟಿನಲ್ಲಿ ನಿಮ್ಮಿಂದ ಯಾಕೆ ಕೈಗಾರಿಕೆಗಳನ್ನು ತರುವುದಕ್ಕೆ ಆಗಿಲ್ಲ ಎಂಬುದಕ್ಕೂ ಹರಿಹರ ಶಾಸಕ ಬಿ.ಪಿ.ಹರೀಶ ಉತ್ತರಿಸಬೇಕು. ಸಾರಥಿ ಗ್ರಾಪಂ ವ್ಯಾಪ್ತಿಯಲ್ಲಿ ಕರ್ನಾಟಕ ಪ್ರದೇಶ ಕೈಗಾರಿಕಾ ಅಭಿವೃದ್ಧಿ ಮಂಡಳಿ ವತಿಯಿಂದ ನೂರಾರು ಎಕರೆ ಭೂ ಸ್ವಾಧೀನ ಆಗಿದೆ. ಅಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲಿ ಎಂದರು.

ಮಧ್ಯ ಕರ್ನಾಟಕದ ಜೀವನದಿ ತುಂಗಭದ್ರಾ ನದಿ ಹರಿಹರ ಕ್ಷೇತ್ರಕ್ಕೆ ಹೊಂದಿಕೊಂಡೇ ಹರಿದರೂ ಇಂದಿಗೂ ಅಲ್ಲಿನ ಗ್ರಾಮೀಣ ಭಾಗಕ್ಕೆ ಸಮರ್ಪಕ ನೀರು ಸಿಗುತ್ತಿಲ್ಲ. ಎಷ್ಟೋ ಗ್ರಾಮೀಣ ಭಾಗಗಳಿಗೆ ಕನಿಷ್ಠ ಕುಡಿಯುವ ನೀರಿನ ಸೌಲಭ್ಯವನ್ನೂ ಕಲ್ಪಿಸಿಲ್ಲ. ಪರಿಸ್ಥಿತಿ ಹೀಗಿರುವಾಗ ಶಾಮನೂರು ಕುಟುಂಬದ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದರು.

ಕೇಂದ್ರ ಸರ್ಕಾರದಿಂದ ಬಂದ ತೆರಿಗೆ ಹಣದಲ್ಲಿ ರಾಜ್ಯಕ್ಕೆ ಅನೇಕ ಅನ್ಯಾಯವಾಗಿದೆ. ಕೇಂದ್ರ ಸರ್ಕಾರದ ವಿರುದ್ಧ ಒಮ್ಮೆಯೂ ತುಟಿ ಬಿಚ್ಚದ ಹರಿಹರ ಶಾಸಕ ಬಿ.ಪಿ.ಹರೀಶರಂಥವರು ಶಾಮನೂರು ಕುಟುಂಬದ ವಿರುದ್ಧ ಮಾತನಾಡುತ್ತಾರೆ ಎಂದು ಆಸಿಫ್‌ ಇಕ್ಬಾಲ್ ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡರಾದ ಅಲ್ಲಾಭಕ್ಷಿ, ಅಮ್ಜದ್ ಖಾನ್, ನಯಾಜ್ ಅಹಮ್ಮದ್ ಇತರರು ಇದ್ದರು.

- - -

(ಬಾಕ್ಸ್‌) * ಎಷ್ಟು ಕೈಗಾರಿಕೆ ತಂದಿದ್ದೀರಿ? ಶಾಸಕ ಬಿ.ಪಿ.ಹರೀಶ್‌ ಅವರಿಂದ ಹರಿಹರಕ್ಕೆ ಎಷ್ಟು ಕೈಗಾರಿಕೆಗಳನ್ನು ತರಲು ಸಾಧ್ಯವಾಗಿದೆ? ಎಷ್ಟು ಜನ ಹೂಡಿಕೆದಾರರನ್ನು ತರಲು ನಿಮ್ಮಿಂದ ಸಾಧ್ಯವಾಗಿದೆ? ಮೊದಲು ಹರಿಹರ ಕ್ಷೇತ್ರ ಅಭಿವೃದ್ಧಿ, ಮೂಲ ಸೌಕರ್ಯ ಕಲ್ಪಿಸಲು, ಕ್ಷೇತ್ರಕ್ಕೆ ಕೈಗಾರಿಕೆಗಳನ್ನು ತರಲು ಪ್ರಾಮಾಣಿಕವಾಗಿ ಶ್ರಮಿಸಿ. ಹರಿಹರ ಕ್ಷೇತ್ರ ತುಂಗಭದ್ರಾ ನದಿಗೆ ಹೊಂದಿಕೊಂಡಿರುವ ವಿಧಾನಸಭಾ ಕ್ಷೇತ್ರವಾಗಿದೆ. ಎಷ್ಟು ಗ್ರಾಮೀಣ ಪ್ರದೇಶಕ್ಕೆ ತುಂಗಭದ್ರಾ ನೀರಿನ ಸೌಲಭ್ಯವಿದೆ ಎಂಬ ಬಗ್ಗೆಯೂ ಶಾಸಕರು ಉತ್ತರಿಸಲಿ ಎಂದು ಆಸಿಫ್‌ ಒತ್ತಾಯಿಸಿದರು.

- - -

-23ಕೆಡಿವಿಜಿ2: ದಾವಣಗೆರೆಯಲ್ಲಿ ಮಂಗಳವಾರ ಕಾಂಗ್ರೆಸ್ ಮುಖಂಡ ಆಸೀಫ್ ಇಕ್ಬಾಲ್ ಸುದ್ದಿಗೋಷ್ಠಿ ನಡೆಸಿ, ಹರಿಹರ ಕ್ಷೇತ್ರ ಶಾಸಕರ ಕಾರ್ಯವೈಖರಿ ಟೀಕಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಲವಿನ ಊಟ ಬಡಿಸಲು ಸಿದ್ಧವಾದ ಅಕ್ಕ ಕೆಫೆ
ಚನ್ನಮ್ಮ ಮೂರ್ತಿ ಉದ್ಘಾಟನಾ ಸಮಾರಂಭಕ್ಕೆ ಬಹಿಷ್ಕಾರ