ಕನ್ನಡಪ್ರಭ ವಾರ್ತೆ ಮಳವಳ್ಳಿ
ಸ್ಪರ್ಧಾತ್ಮಕ ಯುಗಕ್ಕೆ ತಕ್ಕಂತೆ ವಿದ್ಯಾರ್ಥಿಗಳು ತಮ್ಮ ಜ್ಞಾನ ಹೆಚ್ಚಿಸಿಕೊಂಡು ಸಮರ್ಥ ಪೈಪೋಟಿ ನೀಡುವುದು ಅಗತ್ಯ ಮತ್ತು ಅನಿವಾರ್ಯವಾಗಿದೆ ಎಂದು ರಾಮನಗರ ಡಯಟ್ ಉಪನ್ಯಾಸಕ ಕೆ.ಪಿ.ಬಾಬು ಹೇಳಿದರು.ತಾಲೂಕಿನ ಮಾರೇಹಳ್ಳಿಯ ಆದರ್ಶ ವಿದ್ಯಾಲಯದಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪ್ರೇರಣಾ ಕಾರ್ಯಾಗಾರದಲ್ಲಿ ಉಪನ್ಯಾಸ ನೀಡಿ ಮಾತನಾಡಿ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಜೀವನಕ್ಕೆ ತಿರುವು ಕೊಡುವ ಘಟ್ಟವಾದರೆ, ಪಿಯುಸಿ ಮಹತ್ವದ ಘಟ್ಟವಾಗಿರುತ್ತದೆ. ಯಾವುದೇ ಆಗಿರಲಿ ವಿದ್ಯಾರ್ಥಿಗಳ ಗುರಿ ನಿರ್ದಿಷ್ಟವಾಗಿರಬೇಕು. ಸಾಧನೆ ಮಾಡುವ ಆತ್ಮವಿಶ್ವಾಸ, ಛಲವನ್ನು ಮೈಗೂಡಿಸಿಕೊಂಡಾಗ ಯಶಸ್ಸು ನಿಶ್ಚಿತವಾಗಿರುತ್ತದೆ ಎಂದರು.
ವಿದ್ಯಾರ್ಥಿಗಳು ಕಲಿಕೆಯನ್ನು ಸುಲಭ ಮಾಡಿಕೊಳ್ಳಬೇಕು. ಶಾಲೆಯಲ್ಲಿ ಮಾಡಿದ ಪಠ್ಯ ವಿಷಯಗಳನ್ನು ಆ ದಿನವೇ ಓದಬೇಕು. ಕಠಿಣ ವಿಷಯಗಳಿದ್ದರೆ ಅರ್ಥವಾಗುವವರೆಗೂ ಅಭ್ಯಸಿಸಬೇಕು. ಗೊಂದಲ, ಸಮಸ್ಯೆಗಳಿದ್ದರೆ ಶಿಕ್ಷಕರೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವುದು ಉತ್ತಮ. ಸ್ನೇಹಿತರೊಂದಿಗೆ ಗುಂಪು ಚರ್ಚೆ ನಡೆಸುವುದರಿಂದ ಪರಸ್ಪರ ಪಠ್ಯ ವಿಷಯಗಳು ವಿನಿಮಯವಾಗುತ್ತವೆ. ಮನಸ್ಸಿನಲ್ಲಿ ದೀರ್ಘಕಾಲ ಉಳಿಯುತ್ತವೆ ಎಂದರು.ವಿದ್ಯಾರ್ಥಿಗಳು ಒತ್ತಡಗಳಿಗೆ ಒಳಗಾಗಬಾರದು. ಇದರಿಂದ ಓದಿದ್ದೆಲ್ಲವೂ ಮರೆತುಹೋಗುತ್ತದೆ. ನಿತ್ಯ ಎಷ್ಟು ಸಮಯ ಓದಿದೆವು ಎನ್ನುವುದು ಮುಖ್ಯವಲ್ಲ. ಎಷ್ಟು ವಿಷಯಗಳನ್ನು ಅರ್ಥ ಮಾಡಿಕೊಂಡೆವು ಎನ್ನುವುದು ಮುಖ್ಯವಾಗುತ್ತದೆ. ಕಷ್ಟಪಟ್ಟು ಓದುವ ಬದಲು ಇಷ್ಟಪಟ್ಟು ಓದಿದಾಗ, ಕಲಿಕೆಯತ್ತ ಆಸಕ್ತಿಯನ್ನು ತೋರಿದಾಗ ಸುಲಭವಾಗಿ ಗ್ರಹಿಸುವುದಕ್ಕೆ ಸಾಧ್ಯವಾಗುತ್ತದೆ ಎಂದು ನುಡಿದರು.
ಓದುವ ಸಮಯದಲ್ಲಿ ಮೊಬೈಲ್ ಬಳಕೆ, ಸಾಮಾಜಿಕ ಜಾಲ ತಾಣಗಳಿಂದ ದೂರ ಉಳಿಯುವುದು ಒಳ್ಳೆಯದು. ಓದುವುದಷ್ಟೇ ನಿಮ್ಮ ಗಮನ ಸೀಮಿತವಾಗಿರಬೇಕು. ಪಠ್ಯ ವಿಷಯಗಳಿಗಷ್ಟೇ ಜ್ಞಾನವನ್ನು ಸೀಮಿತಗೊಳಿಸಿಕೊಳ್ಳದೆ ಪತ್ರಿಕೆ ಓದುವುದು, ಪುಸ್ತಕಗಳನ್ನು ಓದುವುದರಿಂದ ಸಾಮಾನ್ಯ ಜ್ಞಾನವೂ ಹೆಚ್ಚುತ್ತದೆ. ಇದರಿಂದ ಸ್ಪರ್ಧಾತ್ಮಕ ಯುಗಕ್ಕೆ ಪೈಪೋಟಿ ನೀಡುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬಹುದು ಎಂದರು.ವಿದ್ಯಾರ್ಥಿ ಜೀವನದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯ. ಸೊಪ್ಪು, ತರಕಾರಿಗಳನ್ನು ತಯಾರಿಸಿದ ಉತ್ತಮ ಆಹಾರ ಸೇವನೆ ಮಾಡಬೇಕು. ನಿಯಮಿತವಾದ ವ್ಯಾಯಾಮ, ಯೋಗ, ಧ್ಯಾನದಿಂದ ಏಕಾಗ್ರತೆ ಹೆಚ್ಚುತ್ತದೆ. ಹಣ್ಣುಗಳನ್ನು ಸೇವಿಸಿ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳುವಂತೆ ಸಲಹೆ ನೀಡಿದರು.
ಓದಿನಿಂದ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ವಿದ್ಯೆಗೆ ತಕ್ಕ ವಿನಯ, ಸಂಸ್ಕಾರ, ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ತಂದೆ-ತಾಯಿಗಳಿಗೆ ಉತ್ತಮ ಹೆಸರನ್ನು ತರಬೇಕು. ಅವರ ಶ್ರಮವನ್ನು ವ್ಯರ್ಥ ಮಾಡಬಾರದು. ಉತ್ತಮವಾಗಿ ಕಲಿತು ಉನ್ನತ ಹುದ್ದೆಗಳನ್ನು ಅಲಂಕರಿಸಿ ಕೀರ್ತಿಶಾಲಿಗಳಾಗಿ ಬದುಕನ್ನು ನಡೆಸುವಂತೆ ಆಶಿಸಿದರು.ಎಸ್‌ಡಿಎಂಸಿ ಅಧ್ಯಕ್ಷ ಪ್ರಕಾಶ್ ಹಾಗೂ ಶಿಕ್ಷಕರಿದ್ದರು.