ನರಗುಂದ: ಸ್ವಾತಂತ್ರ‍್ಯದಿನ ದೇಶಭಕ್ತರ ತ್ಯಾಗ, ಬಲಿದಾನದ ಪ್ರತೀಕವಾಗಿದೆ. ಅದನ್ನು ಸದ್ಬಳಕೆ ಮಾಡಿಕೊಂಡು ಪ್ರತಿಯೊಬ್ಬರು ದೇಶಭಕ್ತಿ ಬೆಳೆಸಿಕೊಂಡು ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗಬೇಕೆಂದು ಲಯನ್ಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಹಾಗೂ ಶಾಸಕ ಸಿ.ಸಿ. ಪಾಟೀಲ ಹೇಳಿದರು.
ಅವರು ಪಟ್ಟಣದ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಸ್ವಾತಂತ್ರ‍್ಯ ದಿನಾಚರಣೆ ಸಮಾರಂಭದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿ, ರಾಷ್ಟ್ರದ ಸಂಕೇತಗಳಾದ ರಾಷ್ಟ್ರಧ್ವಜ, ರಾಷ್ಟ್ರಗೀತೆ, ರಾಷ್ಟ್ರಲಾಂಛನವನ್ನು ಗೌರವಿಸಬೇಕು. ವಿಶ್ವವೇ ಭಾರತದತ್ತ ತಿರುಗಿ ನೋಡುವಷ್ಟು ಭಾರತ ವೈಭವದಿಂದ ಬೆಳೆಯುತ್ತಿದೆ. ವಿವಿಧತೆಯಲ್ಲಿ ಏಕತೆ ಸಾಧಿಸಬೇಕು. ದೇಶಕ್ಕಾಗಿ ತನುಮನಧನ ಅರ್ಪಿಸಬೇಕು. ನಡೆನುಡಿ ಒಂದಾಗಿ ದೇಶದ ಪ್ರಗತಿಗೆ ಕೊಡುಗೆ ನೀಡಬೇಕು. ಶಿಕ್ಷಕರು ವಿದ್ಯಾರ್ಥಿಗಳಲ್ಲಿ ದೇಶಾಭಿಮಾನ ಮೂಡಿಸಬೇಕು ಎಂದರು.ನಮ್ಮ ದೇಶ ವಿಶ್ವದ 3ನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳು ಜನರ ಬದುಕನ್ನು ಅಭಿವೃದ್ಧಿ ಪಡಿಸುತ್ತಿವೆ. ಆಪರೇಷನ್ ಸಿಂಧೂರ ಮೂಲಕ ಶತ್ರು ರಾಷ್ಟ್ರ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಮಾಡಿದ ವೀರ ಯೋಧರಿಗೆ ಎಷ್ಟು ಅಭಿನಂದನೆ ಸಲ್ಲಿಸಿದರೂ ಕಡಿಮೆ ಎಂದರು. ದೇಶದ ಪ್ರತಿ ಮನೆ ಮನೆ ಮೇಲೂ ತಿರಂಗಾ ಧ್ವಜ ಹಾರಾಡುತ್ತಿರುವುದು ಪ್ರಧಾನಿ ಮೋದಿಯವರ ಹರಘರ್ ತಿರಂಗಾ ಅಭಿಯಾನದ ಪ್ರಮುಖ ಕಾರ್ಯಕ್ರಮವಾಗಿದೆ. ಅದರಲ್ಲಿ ನಾವೆಲ್ಲರೂ ಪಾಲ್ಗೊಂಡು ದೇಶಾಭಿಮಾನ ಮೂಡಿಸಿದ್ದು ಸಂತಸ ತಂದಿದೆ ಎಂದು ಹೇಳಿದರು.ಸಮಾರಂಭದಲ್ಲಿ ವಿದ್ಯಾರ್ಥಿಗಳಾದ ಹಲೀಮಾ ಖಡ್ಡೇಗಾರ, ಪ್ರಣಮ್ಯಾ ಗುಜಮಾಗಡಿಯವರ ಸ್ವಾತಂತ್ರ‍್ಯ ಕುರಿತಾದ ಭಾಷಣ ಜನಮನ ಸೆಳೆದವು.ವಿದ್ಯಾರ್ಥಿಗಳಿಂದ ನೃತ್ಯ, ರೂಪಕ ನಡೆದವು, ಸ್ಕೌಟ್ಸ, ಗೈಡ್ಸ್ ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ವೇದಿಕೆಯಲ್ಲಿ ಸಂಸ್ಥೆಯ ಕಾರ್ಯದರ್ಶಿಗ ಜಿ.ಟಿ.ಗುಡಿಸಾಗರ, ನಿರ್ದೇಶಕರಾದ ಜಿ.ಬಿ. ಕುಲಕರ್ಣಿ, ಸಿ.ಎಸ್.ಸಾಲೂಟಗಿಮಠ, ಡಾ. ಪ್ರಭು ನಂದಿ, ಉಮೇಶಗೌಡ ಪಾಟೀಲ, ವಿಜಯಕುಮಾರ ಬೇಲೇರಿ, ಮುಖ್ಯೋಪಾಧ್ಯಾಯ ಜಿ.ಬಿ. ಹಿರೇಮಠ, ಕೋಆರ್ಡಿನೇಟರ್ ಪ್ರೇರಣಾ ಪಾತ್ರಾ ಹಾಗೂ ಶಿಕ್ಷಕ/ಶಿಕ್ಷಕೇತರ ಸಿಬ್ಬಂದಿ ಇದ್ದರು.
ಅಲೇಖಾ ಮೇಟಿ ಸ್ವಾಗತಿಸಿದರು. ಅಭಿನಯ ದೊಡಮನಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.