ಕವಿ ಸಮಯ ಕಾರ್ಯಕ್ರಮದಲ್ಲಿ ಚಲನಚಿತ್ರ ಗೀತರಚನೆಕಾರ
ಕನ್ನಡಪ್ರಭ ವಾರ್ತೆ ಹೊನ್ನಾವರಪರಿಚಿತದಿಂದ ಅಪರಿಚಿತದೆಡೆಗೆ ಸಾಗುವುದೇ ಸಾಹಿತ್ಯದ ಹುಡುಕಾಟ. ನಿಗೂಢದ ಬಗ್ಗೆ ಆಸಕ್ತಿ ಬೆಳೆಸಿಕೊಂಡಲ್ಲಿ ಹೊಸತನ ಸಿಗುತ್ತದೆ. ಕನ್ನಡಿಯನ್ನು ನಂಬಿ, ಕನ್ನಡಿ ಎಂದರೆ ಬದುಕಿನ ಸೇತುವೆಯಂತೆ, ಸೇತುವೆಯನ್ನು ನಂಬಿದರೆ ಮಾತ್ರ ನಾವು ದಡ ಮುಟ್ಟಲು ಸಾಧ್ಯ ಎಂದು ಕವಿ, ಸಾಹಿತಿ, ಚಲನಚಿತ್ರ ಗೀತರಚನೆಕಾರ ಜಯಂತ್ ಕಾಯ್ಕಿಣಿ ಹೇಳಿದರು.
ಎಸ್‌ಡಿಎಂ ಪದವಿ ಕಾಲೇಜಿನ ಆರ್ಟ್ಸ್ ಸರ್ಕಲ್, ಕನ್ನಡ ಸಂಘ, ಇಂಗ್ಲಿಷ್ ಸಂಘ, ಐಕ್ಯೂಎಸಿ ಇದರ ಸಹಯೋಗದಲ್ಲಿ ಎಂಪಿಇ ಸೊಸೈಟಿಯ ಎಸ್‌ಡಿಎಂ ಪದವಿ ಕಾಲೇಜಿನ ಆರ್.ಎಸ್. ಹೆಗಡೆ ಸಭಾಭವನದಲ್ಲಿ ಕವಿ ಸಮಯ ಕಾರ್ಯಕ್ರಮದಲ್ಲಿ ಮಾತನಾಡಿದರು.ಬೇರೆಯವರ ಕಷ್ಟವನ್ನು ನಾವು ಅರ್ಥ ಮಾಡಿಕೊಳ್ಳಬೇಕು. ನಾವು ಸಾಮಾನ್ಯವಾಗಿದ್ದರೆ ಜನರ ಜೊತೆ ಬೆರೆಯಲು ಅವಕಾಶ ಹೆಚ್ಚಿದೆ. ಜಗತ್ತು ಎಂದರೆ ದೊಡ್ಡ ಪಠ್ಯೇತರ ಆಗಿದೆ. ಎಲ್ಲರ ಜೊತೆ ಬೆರೆಯುವುದನ್ನು ಕಲಿಯಬೇಕು. ನಾವು ಮನಸ್ಸು ಮತ್ತು ಕೈಗಳ ಜೊತೆ ಇರುವ ಸಂಪರ್ಕವನ್ನು ಕಡಿಮೆ ಮಾಡಿಕೊಳ್ಳುತ್ತಿದ್ದೇವೆ. ಎಲ್ಲವೂ ಕಂಪ್ಯೂಟರ್ ಟೈಪಿಂಗ್ ಮೂಲಕ ಆಗುವುದರಿಂದ ಕೈ ಬರಹವನ್ನ ಮರೆತಿದ್ದೇವೆ. ಸ್ವಭಾಷೆ ಬಗ್ಗೆ ಅಭಿಮಾನವನ್ನು ಬೆಳೆಸಿಕೊಳ್ಳಿ. ಸ್ವಭಾಷೆಯಲ್ಲಿ ಆಪ್ತತೆ ಇರುತ್ತದೆ. ಚಿಂತನಾಶೀಲತೆ ಇದ್ದಾಗ ಸಾಹಿತ್ಯ ಹುಟ್ಟಿಕೊಳ್ಳುತ್ತದೆ ಎಂದರು.
ಕಾಲೇಜಿನ ವಿದ್ಯಾರ್ಥಿಗಳು ಬರೆದ ಕೈ ಬರಹ ಪತ್ರಿಕೆ ದೀಪಿಕಾ ಮತ್ತು ಇಂಗ್ಲಿಷ್ ವಿಭಾಗದ ಕೈ ಬರಹ ಪತ್ರಿಕೆ ಬ್ಲೂಮ್ ಬಿಡುಗಡೆಗೊಳಿಸಲಾಯಿತು. ಕಾಯ್ಕಿಣಿ ತರ್ಜುಮೆ ಮಾಡಿದ ವೈಷ್ಣವ ಜನತೋ ಹಾಡನ್ನು ಇದೇ ಸಂದರ್ಭದಲ್ಲಿ ಪ್ರಸ್ತುತ ಪಡಿಸಲಾಯಿತು.ಕಾಲೇಜಿನ ಪ್ರಾಚಾರ್ಯ ಡಾ. ಡಿ.ಎಲ್. ಹೆಬ್ಬಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆರ್ಟ್ಸ್ ಸರ್ಕಲ್ ಮುಖ್ಯಸ್ಥ ಮಂಜುನಾಥ್ ಭಂಡಾರಿ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಯೂನಿಯನ್ ಉಪಾಧ್ಯಕ್ಷ ಡಾ. ಎಂ.ಜಿ. ಹೆಗಡೆ ಸ್ವಾಗತಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ನಾಗರಾಜ್ ಹೆಗಡೆ, ಅಪಗಾಲ್ ಪರಿಚಯಿಸಿದರು. ಪ್ರಶಾಂತ್ ಹೆಗಡೆ ನಿರೂಪಿಸಿದರು. ಐಕ್ಯೂಎಸಿ ಕೋ ಆರ್ಡಿನೇಟರ್ ಡಾ. ಸುರೇಶ್ ಎಸ್. ವಂದಿಸಿದರುಧ್ವನಿ ಎತ್ತಲಿಶರಾವತಿ ಯೋಜನೆಯ ಬಗ್ಗೆ ಬೇಸರವಿದೆ. ಈ ಯೋಜನೆಯ ಕುರಿತು ಜನಪ್ರತಿನಿಧಿಗಳು ಇದರ ಬಗ್ಗೆ ಧ್ವನಿ ಎತ್ತಬೇಕು. ಎಲ್ಲಾ ಯೋಜನೆಗಳನ್ನು ಉತ್ತರ ಕನ್ನಡಕ್ಕೆ ಹೇರುತ್ತಾರೆ. ಜಿಲ್ಲೆಯಲ್ಲಿ ರಸ್ತೆಗಳು ಸರಿಯಿಲ್ಲ. ಅಂದರೆ ಇಲ್ಲಿಗೆ ಯಾರು ಬರಬಾರದು ಎಂದು ಹಾಗೆ ಇಡಲಾಗಿದೆಯಾ ಎಂದು ಪ್ರಶ್ನಿಸಿದರು.