ಕನ್ನಡಪ್ರಭ ವಾರ್ತೆ ವಿಜಯಪುರ
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿವಿಧ ಅನಿಷ್ಠ ಪದ್ಧತಿಗಳ ನಿರ್ಮೂಲನೆಗಳಾಗಿ ಜಾರಿಗೊಳಿಸಿರುವ ಕಾನೂನಿನ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಗ್ರಾಮ ಮಟ್ಟದಲ್ಲಿ ಸಭೆ ನಡೆಸುವುದು ಅತ್ಯಂತ ಮಹತ್ವದ್ದಾಗಿದ್ದು, ಇಂತಹ ಸಭೆಗಳಲ್ಲಿ ಗ್ರಾಮಸ್ಥರ ಪಾಲ್ಗೊಳ್ಳುವಿಕೆಯಿಂದ ಕಾನೂನು ಅರಿವು ಹೊಂದಿ ಪ್ರಕರಣ ಇಳಿಮುಖವಾಗಲು ಸಾಧ್ಯವಾಗುತ್ತದೆ ಹಾಗೂ ಕಾವಲು ಸಮಿತಿ ಉದ್ದೇಶ ಸಾಫಲ್ಯತೆ ಕಾಣಲು ಸಾಧ್ಯವಾಗುತ್ತದೆ ಎಂದರು.
ಪ್ರತಿ ತಿಂಗಳಿಗೊಮ್ಮೆ ಸಂಬಂಧಿಸಿದ ಸ್ಥಳೀಯ ಮಟ್ಟದಲ್ಲಿ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಶಾಲಾ ಮುಖ್ಯೊಪಾಧ್ಯಾಯರು, ಪೊಲೀಸ್ ಇಲಾಖೆ ಬೀಟ್ ಸಿಬ್ಬಂದಿ, ಗ್ರಾಮ ಪಂಚಾಯತಿ ಸದಸ್ಯರನ್ನೊಳಗೊಂಡು ಸಭೆ ನಡೆಸಿ ಕಾನೂನಿನ್ವಯ ನಿಷೇಧಕ್ಕೊಳಗಾಗಿರುವ ಕಾಯ್ದೆಗಳ ಕುರಿತು ಅರಿವು ಮೂಡಿಸುವುದಲ್ಲದೇ, ಸಭೆ ಜರುಗಿಸಿರುವ ಕುರಿತು ಮಾಹಿತಿ ಒದಗಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಹಿಂದೆಯೂ ಹಲವಾರು ಬಾರಿ ಸಭೆ ನಡೆಸಲು ಸೂಚಿಸಲಾಗಿತ್ತಾದ್ದರೂ ಸಭೆ ನಡೆಸದೇ ಇರುವುದರಿಂದ ಆಕ್ರೋಶ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಸರ್ಕಾರಿ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿ ಅನುಷ್ಠಾನಗೊಳಿಸುತ್ತಿದೆ. ಈ ಯೋಜನೆ ಲಾಭ ಮಕ್ಕಳಿಗೆ ದೊರಕಿಸಲು ಅಧಿಕಾರಿಗಳು ಕ್ರಮ ವಹಿಸಬೇಕು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಗ್ರಾಮ ಪಂಚಾಯತ್ ಮಟ್ಟದಲ್ಲಿ ಸಭೆ ನಡೆಸದಿದ್ದಲ್ಲಿ ಸಂಬಂಧಿಸಿದವರ ಮೇಲೆ ಸೂಕ್ತಕ್ರಮ ವಹಿಸಲಾಗುವುದು ಎಂದು ಎಚ್ಚರಿಕೆ ನೀಡಿ ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಸಭೆ ಜರುಗಿಸಿರುವ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಾಹಿತಿ ಕ್ರೋಢಿಕರಿಸಬೇಕು ಎಂದು ಸೂಚಿಸಿದರು.ಅದರಂತೆ ಜಿಲ್ಲೆಯ ವಿವಿಧ ಸಾರ್ವಜನಿಕ ಸ್ಥಳಗಳು, ಗ್ರಾಮ ಪಂಚಾಯತ್, ಸ್ಥಳೀಯ ಸಂಸ್ಥೆ ಹಾಗೂ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಜಿಂಗಲ್ಸ್ ಮೂಲಕ ಬಾಲ್ಯ ವಿವಾಹ ನಿಷೇಧ ಕುರಿತು ಜಾಗೃತಿ ಮೂಡಿಸಲು ಕ್ರಮ ವಹಿಸಬೇಕು. ಸಾಮಾಜಿಕ ಪಿಡುಗು ತೊಡೆದು ಹಾಕಲು ಸಂಬಂಧಿಸಿದ ಇಲಾಖೆಗಳು ಹೆಚ್ಚೆಚ್ಚು ಅರಿವು ಮೂಡಿಸಲು ಕ್ರಮ ವಹಿಸಬೇಕು. ಅತ್ಯಂತ ಕಾಳಜಿಪೂರ್ವಕವಾಗಿ ಜವಾಬ್ದಾರಿಯುತವಾಗಿ ಈ ಅನಿಷ್ಠ ಪದ್ಧತಿಗಳ ವಿರುದ್ಧ ಜನ ಜಾಗೃತಿ ಮೂಡಿಸುವಲ್ಲಿ ಎಲ್ಲ ಇಲಾಖೆಗಳ ಸಹಯೋಗದೊಂದಿಗೆ ಸಮನ್ವಯ ಸಾಧಿಸಿಕೊಂಡು ಇಂತಹ ಅನಿಷ್ಠ ಪದ್ಧತಿಗಳು ಜರುಗದಂತೆ ಎಚ್ಚರಿಕೆ ವಹಿಸುವಂತೆ ಅವರು ಸೂಚನೆ ನೀಡಿದರು. ಬಾಣಂತಿ ಮತ್ತು ಗರ್ಭೀಣಿ ಮಹಿಳೆಯರಿಗಾಗಿರುವ ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯನ್ನು ಜಿಲ್ಲೆಯಲ್ಲಿ ಅನುಷ್ಠಾನಗೊಂಡಿದ್ದು, ಈ ಯೋಜನೆಯಡಿ ಮೊದಲನೆ ಹರಿಗೆಗೆ ₹5 ಸಾವಿರ ನೇರ ನಗದು ವರ್ಗಾವಣೆ ಮೂಲಕ ಎರಡು ಕಂತುಗಳಲ್ಲಿ ಪಾವತಿಸಲಾಗುತ್ತದೆ. 01-04-2022ರಂದು ಅಥವಾ ನಂತರ ಜನನವಾದ 2ನೇ ಮಗು ಹೆಣ್ಣು ಮಗು ಫಲಾನುಭವಿಗೆ ಒಂದೇ ಕಂತಿನಲ್ಲಿ ₹6 ಸಾವಿರಗಳನ್ನು ನೇರ ನಗದು ವರ್ಗಾವಣೆ ಮೂಲಕ ಪಾವತಿಸಲಾಗುತ್ತದೆ. ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯನ್ನು ಗುರಿ ನಿಗದಿಪಡಿಸಿಕೊಂಡು ನೂರರಕ್ಕೆ ನೂರು ಪ್ರಗತಿ ಸಾಧಿಸಬೇಕು. ಎಲ್ಲ ಇಲಾಖೆಗಳು ಮಕ್ಕಳ ಕ್ಷೇತ್ರದದಲ್ಲಿ ಸರ್ಕಾರ ಜಾರಿಗೊಳಿಸಿರುವ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ ಸೌಲಭ್ಯ ಒದಗಿಸಲು ಶ್ರಮಿಸಬೇಕು ಎಂದು ತಿಳಿಸಿದರು.ಶಕ್ತಿ ಸದನಕ್ಕೆ ನಿರಂತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಶಕ್ತಿ ಸದನದಲ್ಲಿ ಪುನಶ್ಚೇತನ ಹೊಂದಿದ ಮಹಿಳೆಯರಿಗೆ ಕೌಶಲ್ಯಾಧಾರಿತ ತರಬೇತಿ ಒದಗಿಸುವ ಮೂಲಕ ಅವರ ಜೀವನಾಧಾರಕ್ಕೆ ಕ್ರಮ ವಹಿಸಬೇಕು. ಅವಶ್ಯವಿದ್ದಲ್ಲಿ ಕಾನೂನು ನೆರವು ಒದಗಿಸಲು ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು. ರಾಷ್ಟ್ರೀಯ ಪೋಷಣ ಅಭಿಯಾನವನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಜಾರಿಗೊಳಿಸಬೇಕು. ಮಕ್ಕಳಿಗೆ ಲಾಭ ತಲುಪಿಸುವ ಮೂಲಕ ಯೋಜನೆ ಯಶಸ್ವಿಗೊಳಿಸಬೇಕು. ಮಹಿಳಾ ಮತ್ತು ಮಕ್ಕಳ ಇಲಾಕೆ ಮಹತ್ತರ ಜವಾಬ್ದಾರಿಯಾಗಿದೆ. ಜಿಲ್ಲೆಯಲ್ಲಿ ಅಪೌಷ್ಟಿಕತೆಯಿಂದ ಹಾಗೂ ವಿವಿಧ ಆರೋಗ್ಯ ಸಮಸ್ಯೆಯಿಂದ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಗುರುತಿಸಲು ಮನೆ-ಮನೆಗೆ ಭೇಟಿ ನೀಡಿ. ಪರಿಶೀಲನೆ ನಡೆಸಬೇಕು. ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿದ್ದಲ್ಲಿ, ಅಂತಹ ಮಕ್ಕಳಿಗೆ ಎಲ್ಲ ಅಗತ್ಯ ಸೌಲಭ್ಯ ಒದಗಿಸಬೇಕು. ಜಿಲ್ಲೆಯಲ್ಲಿ ತೀವ್ರ ನಿಗಾ ವಹಿಸುವ ಮೂಲಕ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆಯನ್ನು ಶೂನ್ಯಕ್ಕೆ ತರಲು ಕ್ರಮ ವಹಿಸುವಂತೆ ಸೂಚನೆ ನೀಡಿದರು.ಅನಿಮಿಯಾದಿಂದ ಬಳಲುವ ಗರ್ಭೀಣಿ ಮಹಿಳೆಯಿಂದ ಮಕ್ಕಳಲ್ಲಿ ಆರೋಗ್ಯ ಸಮಸ್ಯೆಗಳು ಎದುರಾಗಲಿದ್ದು, ಈ ಕುರಿತು ಜನರಲ್ಲಿ ಸೂಕ್ತ ತಿಳುವಳಿಕೆ ಮೂಡಿಸಬೇಕು. ಈ ಕುರಿತು ಜನರಲ್ಲಿರುವ ಅನುಮಾನವನ್ನು ದೂರ ಮಾಡಿ ಅಗತ್ಯ ಆರೋಗ್ಯ ಸಲಹೆ ನೀಡುವಂತೆ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಅವರು ಮಾತನಾಡಿ, ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿ ಗುಣಮಟ್ಟದ ಆಹಾರ ಮತ್ತು ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು. ಒಂದು ವೇಳೆ ಅಂಗನವಾಡಿ ಕೇಂದ್ರಗಳು ವಿವಿಧ ಕಾರಣಗಳಿಂದ ಸ್ಥಳಾಂತರಗೊಂಡಿದ್ದಲ್ಲಿ, ಈ ಕುರಿತು ಮಾಹಿತಿಯನ್ನು ಸ್ಥಳೀಯ ಸಾರ್ವಜನಿಕರಿಗೆ ಒದಗಿಸಬೇಕು. ಮಕ್ಕಳ ಸರ್ವಾಗೀಣ ಅಭಿವೃದ್ದಿ ಸರ್ಕಾರ ಹಲವು ಯೋಜನೆ ಸೌಲಭ್ಯಗಳನ್ನು ಒದಗಿಸಿದ್ದು, ಇದರ ಸದುಪಯೋಗ ಮಕ್ಕಳಿಗೆ ದೊರಕಿಸಲು ಅಧಿಕಾರಿಗಳು ಸೇವಾಮನೋಭಾವದಿಂದ ಕಾರ್ಯನಿರ್ವಹಿಸಿ ಸೌಲಭ್ಯ ಒದಗಿಸಲು ಕ್ರಮ ವಹಿಸಬೇಕು ಎಂದು ತಿಳಿಸಿದರು.ಪ್ರಗತಿ ಪರಿಶೀಲನಾ ಸಭೆ: ಜಿಲ್ಲಾಧಿಕಾರಿ ಡಾ.ಆನಂದ.ಕೆ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಜಿಲ್ಲಾ ಮಕ್ಕಳ ಕಲ್ಯಾಣ ಹಾಗೂ ರಕ್ಷಣಾ ಸಮಿತಿ ಮತ್ತು ಮಕ್ಕಳ ಕಲ್ಯಾಣ ಸಮಿತಿ ಪ್ರಗತಿ ಪರಿಶೀಲನಾ ಸಭೆ ಜರುಗಿತು.ಸಭೆಯಲ್ಲಿ ಬಾಲ ನ್ಯಾಯ ಕಾಯ್ದೆಯಡಿ ನೋಂದಣಿಯಾದ 11 ಕೇಂದ್ರಗಳು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈ ಕೇಂದ್ರಗಳಲ್ಲಿ ಎಲ್ಲ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿರುವ ಕುರಿತು ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು. ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳನ್ನು ನಿಯೋಜಿಸಿ ಮೂಲಭೂತ ಸೌಕರ್ಯಗಳು ಕಲ್ಪಿಸಿರುವ ಬಗ್ಗೆ ಪರಿಶೀಲನೆ ನಡೆಸಿ ವರದಿ ಸಲ್ಲಿಸಬೇಕು. ಕೇಂದ್ರಗಳಲ್ಲಿ ಸುರಕ್ಷತೆ ಕುರಿತು ಸಿಸಿಟಿವಿ ಅಳವಡಿಸಿಕೊಂಡಿರುವ ಕುರಿತು ಪರಿಶೀಲನೆ ನಡೆಸಬೇಕು. ದುರಸ್ತಿಗೊಳಗಾದಲ್ಲಿ ಅಂತಹ ಸಿಸಿಟಿ ಟಿವಿಗಳನ್ನು ದುರಸ್ತಿಗೊಳಿಸಲು ಕ್ರಮ ವಹಿಸಬೇಕು. ಬಾಲಮಂದಿರ ಮತ್ತು ಅಂಗನವಾಡಿ ಕೇಂದ್ರಗಳಿಗೆ ಅಗತ್ಯ ಔಷಧ ಪೂರೈಸಬೇಕು. ನಿರಂತರವಾಗಿ ಮಕ್ಕಳ ಆರೋಗ್ಯ ತಪಾಸಣೆ ನಡೆಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಯಿತು.ಮಕ್ಕಳ ಸಹಾಯವಾಣಿ ಸಂಖ್ಯೆ 1098/112 ಗೆ ಏಪ್ರಿಲ್‌ದಿಂದ ಅಕ್ಟೋಬರ್ ವರೆಗೆ ಸ್ವೀಕರಿಸಲಾದ ಕರೆಗಳ ಮಾಹಿತಿಯನ್ನು ಸಭೆಗೆ ನೀಡಲಾಯಿತು. ಸಭೆಯಲ್ಲಿ ಹಿರಿಯ ಸಿವ್ಹಿಲ್ ನ್ಯಾಯಾಧೀಶರಾದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅರವಿಂದ ಹಾಗರಗಿ, ಡಿವೈಎಸ್ಪಿ ಬಸವರಾಜ ಯಲಿಗಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ.ಕೆ.ಚವ್ಹಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ದೀಪಾ ಕಾಳೆ, ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ದೀಪಾಕ್ಷಿ ಜಾನಕಿ, ಪಾಲಿಕೆ ಉಪ ಆಯುಕ್ತ ಮಹಾವೀರ ಬೋರಣ್ಣವರ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಅಧಿಕಾರಿ ಪ್ರಶಾಂತ ಪೂಜಾರ, ಕಾರ್ಮಿಕ ಇಲಾಖೆ ಅಧಿಕಾರಿ ಉಮಾಶ್ರೀ ಕೋಳಿ ಸೇರಿದಂತೆ ಜಿಲ್ಲೆಯ ವಿವಿಧ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.