ಗದಗ: ಬೇಸಿಗೆಯ ಈ ರಜೆಯು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ, ಬೌದ್ಧಿಕ ವಿಕಸನ, ಸೃಜನಶೀಲತೆ ಹಾಗೂ ಕೌಶಲ್ಯವನ್ನು ವೃದ್ಧಿಸುವಂತಾಗಲಿ ಎಂದು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರಡಿ ತಿಳಿಸಿದರು.
ಸರ್ಕಾರೇತರ ಸಂಘ ಸಂಸ್ಥೆಗಳು ಶಾಲಾ ಮಕ್ಕಳಿಗಾಗಿ ಉಚಿತ ಖಗೋಳ ವೀಕ್ಷಣೆ ಅಧ್ಯಯನ, ಪ್ರಾಣಿ ಸಂಗ್ರಹಾಲಯ ವೀಕ್ಷಣೆಯಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವದು ಅಭಿನಂದನಾರ್ಹ. ವಿದ್ಯಾರ್ಥಿಗಳಿಗೆ ಉಚಿತವಾಗಿ ತಾರಾಲಯದಲ್ಲಿ ಖಗೋಳ ವಿಸ್ಮಯ ಹಾಗೂ ಪ್ರಾಣಿ ಸಂಗ್ರಹಾಲಯ ವೀಕ್ಷಣೆಯನ್ನು ಉಚಿತವಾಗಿ ಹಾಗೂ ಪೋಷಕರಿಗೆ ಶೇ. 50ರಷ್ಟು ರಿಯಾಯ್ತಿ ಶುಲ್ಕದಲ್ಲಿ ಖಗೋಳ ವಿಸ್ಮಯ ವೀಕ್ಷಣೆಗೆ ಐಎಂಎ ವ್ಯವಸ್ಥೆ ಮಾಡಿರುವದು ಶ್ಲಾಘನೀಯ ಎಂದರು.
ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆಯನ್ನು ಮೂಡಿಸಿ ಮೂಢನಂಬಿಕೆಗಳನ್ನು ದೂರ ಮಾಡಿ ಅವರಲ್ಲಿ ವೈಜ್ಞಾನಿಕ ಹಾಗೂ ವೈಚಾರಿಕ ಮನೋಭಾವನೆಯನ್ನು ಬೆಳೆಸುವ ಕೆಲಸ ನಡೆಯಬೇಕು ಎಂದರು.ಐಎಂಎ ಅಧ್ಯಕ್ಷ ಡಾ. ಶ್ರೀಧರ ಕುರಡಗಿ ಅವರು, ಗದಗ ಐಎಂಎ ಶತಮಾನೋತ್ಸವದ ಸಂಭ್ರಮವನ್ನು ಸಮಾಜಮುಖಿ, ಜನಮುಖಿ ಕಾರ್ಯಕ್ರಮಗಳನ್ನು ವರ್ಷದಾದ್ಯಂತ ಹಮ್ಮಿಕೊಂಡಿದೆ. ಸಾಮಾಜಿಕ ಕಳಕಳಿಯೊಂದಿಗೆ ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ತಪಾಸಣೆ, ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಕೈಜೋಡಿಸುವಿಕೆ ಹೀಗೆ ಮುಂತಾದ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಹೈಟೆಟ್ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಐಎಂಎ ಈ ಶಿಬಿರ ರೂಪಿಸಿದೆ ಎಂದರು.ಖಗೋಳದ ವಿಸ್ಮಯವನ್ನು ಮಕ್ಕಳು ಅರಿಯಬೇಕು. ತಾರಾಲಯವು ಮಕ್ಕಳ ಕಲಿಕೆಗೆ, ಜ್ಞಾನ ವಿಕಸನಕ್ಕೆ ವೇದಿಕೆಯಾಗಲಿ. ಮಕ್ಕಳಿಗೆ ಕುತೂಹಲ ಹಾಗೂ ರೋಮಾಂಚನ ಉಂಟು ಮಾಡಲಿ. ಇದರೊಂದಿಗೆ ಪ್ರಾಣಿ ಸಂಗ್ರಹಾಲಯದ ವೀಕ್ಷಣೆಯ ಅವಕಾಶವನ್ನೂ ಒದಗಿಸಿದ್ದು, ವಿಜ್ಞಾನ ವಿಸ್ಮಯದೊಂದಿಗೆ ಸಸ್ಯ ಹಾಗೂ ಪ್ರಾಣಿ ಜಗತ್ತನ್ನು ತಿಳಿಯುವಲ್ಲಿ ಮಕ್ಕಳು ಮುಂದಾಗಬೇಕು ಎಂದರು.ಈ ವೇಳೆ ಐಎಂಎ ಶತಮಾನೋತ್ಸವ ಸಮಿತಿ ಅಧ್ಯಕ್ಷ ಡಾ. ಎಸ್.ಆರ್. ನಾಗನೂರ, ಲಯನ್ಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಆನಂದ ಪೊತ್ನೀಸ್, ರಾಜು ವೇರ್ಣೆಕರ, ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯದ ಉಸ್ತುವಾರಿ ಅಧಿಕಾರಿ ರಾಮಪ್ಪ ಪೂಜಾರ, ಎಂ.ಎಚ್. ಕಂಬಳಿ, ಶಿವಕುಮಾರ ಕುರಿ, ಡಾ. ಶಶಿಧರ ರೇಶ್ಮೆ, ಡಾ. ಪ್ಯಾರಅಲಿ ನೂರಾನಿ, ಡಾ. ಸುನೀತಾ ಕುರಡಗಿ, ಡಾ. ಪ್ರಭಾ ದೇಸಾಯಿ, ರೇಣುಕಪ್ರಸಾದ ಹಿರೇಮಠ, ರಮೇಶ ಶಿಗ್ಲಿ, ನೇಹಾ ಖಟವಟೆ ಸೇರಿದಂತೆ ವಿವಿಧ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.