ಕಲೆಗಳ ಮೂಲಕ ಬದುಕು ಕಟ್ಟಿಕೊಡುವ ಸಾಮರ್ಥ್ಯ ಬೆಳೆಸಿ

KannadaprabhaNewsNetwork |  
Published : Nov 25, 2026, 01:30 AM IST
24ಕೆಡಿವಿಜಿ10, 11-ದಾವಣಗೆರೆಯ ವಿಶ್ವ ವಿದ್ಯಾಲಯದ ದೃಶ್ಯಕಲಾ ಮಹಾ ವಿದ್ಯಾಲಯದಲ್ಲಿ ಮಂಗಳವಾರ ಶಿಲ್ಪಕಲಾ ಅಧ್ಯಯನ ಕಾರ್ಯಾಗಾರದ ಸಮಾರೋಪದಲ್ಲಿ ದಾವಿವಿ ಕುಲಪತಿ ಪ್ರೊ.ಬಿ.ಇ.ರಂಗಸ್ವಾಮಿ ಇತರರು ಪಾಲ್ಗೊಂಡಿದ್ದರು. ..................24ಕೆಡಿವಿಜಿ12-ದಾವಣಗೆರೆಯ ವಿಶ್ವ ವಿದ್ಯಾಲಯದ ದೃಶ್ಯಕಲಾ ಮಹಾ ವಿದ್ಯಾಲಯದಲ್ಲಿ ಮಂಗಳವಾರ ಶಿಲ್ಪಕಲಾ ಅಧ್ಯಯನ ಕಾರ್ಯಾಗಾರದ ಸಮಾರೋಪದಲ್ಲಿ ದಾವಿವಿ ಕುಲಪತಿ ಪ್ರೊ.ಬಿ.ಇ.ರಂಗಸ್ವಾಮಿ ಇ-ಪುಸ್ತಕ ಬಿಡುಗಡೆ ಮಾಡಿದರು. | Kannada Prabha

ಸಾರಾಂಶ

ವಿಶ್ವವಿದ್ಯಾನಿಲಯಗಳು ಕೇವಲ ಪದವಿ ನೀಡುವ ಸಂಸ್ಥೆಗಳಾಗದೇ ವಿದ್ಯಾರ್ಥಿಗಳಿಗೆ ಕಲೆಯ ಮೂಲಕ ಬದುಕನ್ನು ಕಟ್ಟಿಕೊಡುವ ಸಾಮರ್ಥ್ಯವನ್ನೂ ಬೆಳೆಸಬೇಕು ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಬಿ.ಇ.ರಂಗಸ್ವಾಮಿ ಹೇಳಿದ್ದಾರೆ.

- ದಾವಣಗೆರೆಯಲ್ಲಿ ಕಲೆ, ಸಾಂಸ್ಕೃತಿಕ ಚಟುವಟಿಕೆ ಬಗ್ಗೆ ಅರಿವು: ದಾವಿವಿ ಕುಲಪತಿ ಪ್ರೊ. ಬಿ.ಇ.ರಂಗಸ್ವಾಮಿ ಇಂಗಿತ- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ವಿಶ್ವವಿದ್ಯಾನಿಲಯಗಳು ಕೇವಲ ಪದವಿ ನೀಡುವ ಸಂಸ್ಥೆಗಳಾಗದೇ ವಿದ್ಯಾರ್ಥಿಗಳಿಗೆ ಕಲೆಯ ಮೂಲಕ ಬದುಕನ್ನು ಕಟ್ಟಿಕೊಡುವ ಸಾಮರ್ಥ್ಯವನ್ನೂ ಬೆಳೆಸಬೇಕು ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಬಿ.ಇ.ರಂಗಸ್ವಾಮಿ ಹೇಳಿದರು.

ನಗರದ ವಿಶ್ವವಿದ್ಯಾನಿಲಯ ದೃಶ್ಯಕಲಾ ಮಹಾವಿದ್ಯಾಲಯದ ಕಲಾ ಗ್ಯಾಲರಿ ಮುಂಭಾಗದಲ್ಲಿ ಮಂಗಳವಾರ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಹಾಗೂ ದೃಶ್ಯಕಲಾ ಮಹಾವಿದ್ಯಾಲಯದಿಂದ ಹಮ್ಮಿಕೊಂಡಿದ್ದ ವಸತಿಯುತ ಶಿಲ್ಪಕಲಾ ಅಧ್ಯಯನ ಕಾರ್ಯಾಗಾರ ಸಮಾರೋಪ ಉದ್ಘಾಟಿಸಿ ಅವರು ಮಾತನಾಡಿದರು. ಬಾಲ್ಯದಲ್ಲಿ ಗಣೇಶ ಹಬ್ಬಕ್ಕೆ ಕೆರೆಯಿಂದ ಜೇಡಿ ಮಣ್ಣನ್ನುತಂದು, ಗಣೇಶ ಮೂರ್ತಿ ತಯಾರಿಸುತ್ತಿದ್ದ ಬಾಲ್ಯದ ದಿನಗಳು ಇಂದಿಗೂ ನಮ್ಮ ಮನದಲ್ಲಿ ಹಸಿರಾಗಿವೆ ಎಂದರು.

ಕಲೆ, ಸಾಂಸ್ಕೃತಿಕ ಚಟುವಟಿಕೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ 3-4 ವರ್ಷಗಳಲ್ಲಿ ವಿದ್ಯಾನಗರ, ಎಂಸಿಸಿ ಬಿ ಬ್ಲಾಕ್ ಸೇರಿದಂತೆ ನಗರದ ವಿವಿಧ ಪ್ರದೇಶಗಳಲ್ಲಿ ಮಕ್ಕಳೊಂದಿಗೆ ಬೆಳಗಿನ ವೇಳೆ ಕಲಾ ಜಾಥಾ ಆಯೋಜಿಸುವ ಚಿಂತನೆ ಇದೆ. ಯೋಗ-ವಾಕಿಂಗ್ ಆರೋಗ್ಯಕ್ಕೆ ಪೂರಕವಾಗಿರುವಂತೆ ಕಲೆಯನ್ನು ಪ್ರೋತ್ಸಾಹಿಸುವುದೂ ಮಾನಸಿಕ ಆರೋಗ್ಯಕ್ಕೆ ಸಹಕಾರಿ. ಕಲೆಯ ಮಹತ್ವ ಜನರಿಗೆ ತಲುಪಿಸಲು ನಿರಂತರ ಕಾರ್ಯಕ್ರಮ ನಡೆಯಲಿ. ಕಾಲೇಜಿನಲ್ಲಿ ವರ್ಷಪೂರ್ತಿ ಕಲಾ ಚಟುವಟಿಕೆ ಜೀವಂತವಾಗಿರಲಿ ಎಂದು ಅವರು ಹೇಳಿದರು.

ದ್ವಿತೀಯ ಹಂತದ ನಗರ ದಾವಣಗೆರೆಯಲ್ಲಿ ದೃಶ್ಯಕಲಾ ಮಹಾವಿದ್ಯಾಲಯವು 6 ದಶಕಕ್ಕೂ ಹೆಚ್ಚು ಕಾಲ ತನ್ನ ಜೀವಂತಿಕೆ, ಪ್ರೌಢಿಮೆ, ಕಲಾ ಪರಂಪರೆ ಉಳಿಸಿಕೊಂಡು ಬಂದಿರುವುದು ಶ್ಲಾಘನೀಯ. ಹಿಂದಿನ ಪ್ರಾಚಾರ್ಯರು, ಪ್ರಾಧ್ಯಾಪಕರು, ಹಿರಿಯ ಕಲಾವಿದರು, ಕಲಾಪ್ರೇಮಿಗಳು, ಹಳೆಯ ವಿದ್ಯಾರ್ಥಿಗಳ ನಿರಂತರ ಪರಿಶ್ರಮದಿಂದ ಕಾಲೇಜು ಈ ಮಟ್ಟಕ್ಕೆ ಬೆಳೆದು ಬಂದಿದೆ. ಸಾಮಾನ್ಯವಾಗಿ ನಿವೃತ್ತಿ ನಂತರ ಬಹುತೇಕರು ಕಾಲೇಜಿನ ಚಟುವಟಿಕೆಗಳಿಂದ ದೂರವಾಗುತ್ತಾರೆ. ಆದರೆ, ಇಲ್ಲಿನ ಹಿರಿಯ ಪ್ರಾಧ್ಯಾಪಕರು, ಕಲಾವಿದರು ನಿವೃತ್ತಿ ನಂತರವೂ ಇಲ್ಲಿನ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿರುವುದು ಕಲಾಪ್ರೇಮಕ್ಕೆ ಸಾಕ್ಷಿ ಎಂದು ಶ್ಲಾಘಿಸಿದರು.

ಬೆಂಗಳೂರಿನ ಹಿರಿಯ ಕಲಾವಿದೆ ಶಾಂತಾಮಣಿ ಮಾತನಾಡಿ, ಮೊಬೈಲ್ ಮತ್ತು ಇಂಟರ್ನೆಟ್ ಪ್ರಭಾವದ ಮಧ್ಯೆಯೂ ಮಕ್ಕಳು ಏಕಾಗ್ರತೆಯಿಂದ ಮಣ್ಣಿನ ಕಲಾಕೃತಿ ರೂಪಿಸುತ್ತಿರುವುದು ವಿಶೇಷ. ಮಣ್ಣಿನ ಗುಣ, ತಾಪಮಾನ ಹಾಗೂ ಅದನ್ನು ಹದಗೊಳಿಸುವ ತಂತ್ರ ಅರಿಯಲು ದೀರ್ಘಕಾಲದ ಅನುಭವ ಅಗತ್ಯ. ಕುಂಬಾರರ ಸಹಕಾರದಿಂದ ಇಲ್ಲಿ ನಿರ್ಮಿಸಿರುವ ವಿಶಿಷ್ಟ ಕಿಲನ್ (ಆವಿಗೆ) ಗಮನ ಸೆಳೆಯುತ್ತದೆ. ಯುವ ಕಲಾವಿದರು ಇಂತಹ ತಾಂತ್ರಿಕ ಜ್ಞಾನವನ್ನು ಮಕ್ಕಳಿಗೆ ಪರಿಣಾಮಕಾರಿಯಾಗಿ ಪರಿಚಯಿಸಿರುವುದು ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು.

ದಾವಿವಿ ಸಿಂಡಿಕೇಟ್ ಸದಸ್ಯ ಡಾ. ಎನ್.ಸಿ.ಪ್ರಶಾಂತ, ಬೆಂಗಳೂರಿನ ಕಲಾ ಪೋಷಕಿ ಭಾಗ್ಯ ಅಜಯಕುಮಾರ, ದೃಶ್ಯಕಲಾ ಕಾಲೇಜು ಪ್ರಾಚಾರ್ಯ ಡಾ.ಸತೀಶಕುಮಾರ ಪಿ. ವಲ್ಲೇಪುರೆ ಮಾತನಾಡಿದರು. ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ಎಂ.ಸಿ.ರಮೇಶ್ ಅಧ್ಯಕ್ಷತೆ ವಹಿಸಿದ್ದರು. ಅನ್ವಯಿಕ ಕಲಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಜೈರಾಜ್ ಎಂ.ಚಿಕ್ಕಪಾಟೀಲ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಸಂಚಾಲಕ ವೈ.ಕುಮಾರ, ಪ್ರಾಧ್ಯಾಪಕ ದತ್ತಾತ್ರೇಯ ಭಟ್‌, ಪ್ರಾಧ್ಯಾಪಕರು, ಕಲಾವಿದರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಇದೇ ವೇಳೆ ಕುಲಪತಿ ಪ್ರೊ.ಬಿ.ಇ.ರಂಗಸ್ವಾಮಿ ಇ-ಪುಸ್ತಕ ಬಿಡುಗಡೆ ಮಾಡಿದರು.

- - -

-24ಕೆಡಿವಿಜಿ12: ಶಿಲ್ಪಕಲಾ ಅಧ್ಯಯನ ಕಾರ್ಯಾಗಾರದ ಸಮಾರೋಪದಲ್ಲಿ ದಾವಿವಿ ಕುಲಪತಿ ಪ್ರೊ. ಬಿ.ಇ.ರಂಗಸ್ವಾಮಿ ಇ-ಪುಸ್ತಕ ಬಿಡುಗಡೆ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಂಗ್ರೆಸ್, ಬಿಜೆಪಿ ಎರಡು ಪಕ್ಷಗಳೂ ಸಂವಿಧಾನ ವಿರೋಧಿ: ಎಂ.ಕೃಷ್ಣಮೂರ್ತಿ
ಇಂದು ರೈತರ ಟ್ರ್ಯಾಕ್ಟರ್ ರ್‍ಯಾಲಿಗೆ ಮಹಿಳಾ ಒಕ್ಕೂಟ ಬೆಂಬಲ