ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಿ

KannadaprabhaNewsNetwork | Published : Jan 13, 2025 12:49 AM

ಸಾರಾಂಶ

ಮುಂದಿನ ದಿನಗಳಲ್ಲಿ ಇದೇ ಮಾದರಿಯಲ್ಲಿ ತಾಲೂಕಿನ ಎಲ್ಲ ಗ್ರಾಪಂಗಳಲ್ಲಿ ಕಾರ್ಯಕ್ರಮ ಯಶಸ್ವಿಗೊಳಿಸಲು ಪ್ರಯತ್ನಿಸಲಾಗುವುದು.

ನರೇಗಲ್ಲ: ಗ್ರಾಮಸ್ಥರು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳುವ ಮೂಲಕ ಜ್ಞಾನವೃದ್ಧಿಸಿಕೊಳ್ಳಬೇಕು, ಶಾಲಾ ಮಕ್ಕಳು ಪುಸ್ತಕ ಗೂಡನ್ನು ಸದುಪಯೋಗ ಪಡೆದುಕೊಳ್ಳಬೇಕೆಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.

ಸಮೀಪದ ಜಕ್ಕಲಿ ಗ್ರಾಪಂ ಕೇಂದ್ರದ ಆವರಣದ ಮುಂದೆ ಇರುವ ಬಸ್ ನಿಲ್ದಾಣದಲ್ಲಿ ತಾಪಂ ಸಹಯೋಗದೊಂದಿಗೆ ಗ್ರಾಪಂ ವತಿಯಿಂದ ಪುಸ್ತಕ ಗೂಡು ಎಂಬ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಮುಂದಿನ ದಿನಗಳಲ್ಲಿ ಇದೇ ಮಾದರಿಯಲ್ಲಿ ತಾಲೂಕಿನ ಎಲ್ಲ ಗ್ರಾಪಂಗಳಲ್ಲಿ ಕಾರ್ಯಕ್ರಮ ಯಶಸ್ವಿಗೊಳಿಸಲು ಪ್ರಯತ್ನಿಸಲಾಗುವುದು. ಓದುಗರಿಗೆ ತನ್ನ ವಾಸಸ್ಥಾನದಲ್ಲಿಯೇ ಒಂದು ವೇದಿಕೆ ಕಲ್ಪಿಸುವುದಕ್ಕಾಗಿ ಈ ಕಾರ್ಯಕ್ರಮ ಮಾಡಲಾಗಿದೆ, ಮುಂದಿನ ದಿನಗಳಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಿ ಮುನ್ನಡೆ ಸಾಧಿಸುತ್ತದೆ ಎಂದರು.

ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ.ಕಂದಕೂರ ಮಾತನಾಡಿ, ಬಸ್ ನಿಲ್ದಾಣ, ಉದ್ಯಾನವನ ಸೇರಿದಂತೆ ಸಾರ್ವಜನಿಕ ಕಚೇರಿಗಳಲ್ಲಿ ಜನರ ಬಿಡುವಿನ ಸಮಯದಲ್ಲಿ ಪುಸ್ತಕ ಓದುವ ಹವ್ಯಾಸ ಮೂಡಲಿ ಎಂಬ ಧೈಯದೊಂದಿಗೆ ಈ ಪುಸ್ತಕ ಗೂಡು ನಿರ್ಮಿಸಲಾಗಿದೆ. ಇಲ್ಲಿ ಕಥೆ, ಕಾದಂಬರಿ, ನಿಯತಕಾಲಿಕೆಗಳಿದ್ದು, ಲಭ್ಯವಿರುವ ಪುಸ್ತಕ ಓದುವ ಇಲ್ಲವೇ ಮನೆಗೆ ತೆಗೆದುಕೊಂಡು ಓದಿ ಮರಳಿ ಗೂಡಿಗೆ ತಂದಿಡಲು ಅವಕಾಶವಿದೆ. ಇದು ಜನರಿಗೆ ಓದುವ ಹವ್ಯಾಸ ಮೂಡಿಸುವ ಉತ್ತಮ ಪರಿಕಲ್ಪನೆಯಾಗಿದೆ. ಜತೆಗೆ ಎಲ್ಲ ವಯೋಮಾನದ ಓದುಗರಿಗೆ ಆಸಕ್ತಿದಾಯಕವಾಗುವಂತೆ ಪುಸ್ತಕದ ಗೂಡು ವೇದಿಕೆ ಏರ್ಪಡಿಸುವ ಉದ್ದೇಶ ಒಳಗೊಂಡಿದೆ. ಅತಿ ಕಡಿಮೆ ವೆಚ್ಚದಲ್ಲಿ ಬೆಲೆ ಕಟ್ಟಲಾಗದ ಜ್ಞಾನ ಹಂಚುವ ಕಾರ್ಯ ಕೈಗೆತ್ತಿಕೊಂಡಿದ್ದು, ಮುಂದಿನ ದಿನಗಳಲ್ಲಿ ತಾಲೂಕು ವ್ಯಾಪ್ತಿಯ 22 ಗ್ರಾಪಂಗಳಲ್ಲಿ ಈ ಕಾರ್ಯಕ್ರಮ ಅನುಷ್ಠಾನ ಮಾಡಲಾಗುವುದು ಎಂದು ತಿಳಿಸಿದರು.

ಗ್ರಾಪಂ ಪಿಡಿಒ ಶಿವಯೋಗಿ ರಿತ್ತಿ, ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರು, ಗ್ರಾಪಂ ಸಿಬ್ಬಂದಿಗಳು ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.

Share this article