ಕಂಪ್ಲಿ: ಪಟ್ಟಣದ ಶಿವಶರಣ ಹೇರೂರು ವಿರುಪಣ್ಣತಾತನ ಮಠಕ್ಕೆ ಸಂಪರ್ಕ ಕಲ್ಪಿಸುವ ಸುಮಾರು 600 ಮೀಟರ್ ಉದ್ದದ ಮಣ್ಣಿನ ರಸ್ತೆ ಡಾಂಬರೀಕರಣಗೊಳಿಸಿ ಅಭಿವೃದ್ಧಿಪಡಿಸುವಂತೆ ಆಗ್ರಹಿಸಿ ಭಕ್ತರು ಸೋಮವಾರ ಶಾಸಕ ಜೆ.ಎನ್. ಗಣೇಶ್ ಗೆ ಮನವಿ ಸಲ್ಲಿಸಿದರು.
ಮಠಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯಿಂದ ಸುಮಾರು 600 ಮೀಟರ್ ಉದ್ದದವರೆಗೆ ಮಣ್ಣಿನ ರಸ್ತೆಯಿದ್ದು, ವಾಹನಗಳ ಸಂಚಾರಕ್ಕೆ ಸೂಕ್ತವಾಗಿಲ್ಲ. ಮಳೆ ಬಂದಾಗ ರಸ್ತೆ ಕೆಸರುಗದ್ದೆಯಂತಾಗಿ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಇದರಿಂದ ಮಠಕ್ಕೆ ಆಗಮಿಸುವ ಭಕ್ತರು ಹಾಗೂ ಸ್ಥಳೀಯರು ಸಮಸ್ಯೆ ಎದುರಿಸುವಂತಾಗಿದೆ. ಆದ್ದರಿಂದ ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.
ಮಠದ ಸುತ್ತಮುತ್ತ ಪ್ರಶಾಂತ ವಾತಾವರಣವಿದ್ದು, ಓದು ಹಾಗೂ ಪರೀಕ್ಷಾ ಸಿದ್ಧತೆಗೆ ಅನುಕೂಲಕರವಾಗಿದೆ. ಹೀಗಾಗಿ ಪಟ್ಟಣದ ವಿವಿಧ ವಾರ್ಡ್‌ಗಳ ವಿದ್ಯಾರ್ಥಿಗಳು ಪ್ರತಿನಿತ್ಯ ಮಠಕ್ಕೆ ಆಗಮಿಸಿ ಅಧ್ಯಯನ ಮಾಡುತ್ತಾರೆ. ಆದರೆ ಮಠಕ್ಕೆ ತೆರಳುವ ರಸ್ತೆ ಹದಗೆಟ್ಟಿರುವುದರಿಂದ ವಿದ್ಯಾರ್ಥಿಗಳು ಹಾಗೂ ಭಕ್ತರು ತೊಂದರೆ ಅನುಭವಿಸುತ್ತಿದ್ದಾರೆ. ವಿದ್ಯಾರ್ಥಿಗಳ ಶೈಕ್ಷಣಿಕ ಹಿತಾಸಕ್ತಿ ಮತ್ತು ಭಕ್ತರ ಅನುಕೂಲ ಗಮನದಲ್ಲಿಟ್ಟುಕೊಂಡು ರಸ್ತೆ ಡಾಂಬರೀಕರಣಗೊಳಿಸಬೇಕು ಎಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಪಟ್ಟಣದ 2, 3 ಹಾಗೂ 10ನೇ ವಾರ್ಡ್‌ಗಳ ನಿವಾಸಿಗಳಾದ ಮಂಜುನಾಥ, ಬಂಡಿ ರಮೇಶ್, ತಿಮ್ಮಣ್ಣ, ಪರಸಪ್ಪ, ಗಾಳೆಪ್ಪ, ಮಣಿಕಂಠ, ರವಿ, ರುದ್ರಪ್ಪ, ಶಿವಾಜಿ, ಪ್ರಶಾಂತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.