ಜೀನ್ಸ್ ಉದ್ಯಮಕ್ಕೆ ನಿಪುಣ ಕಾರ್ಮಿಕರ ಕೊರತೆ; ಉದ್ಯಮಿಗಳು ತತ್ತರ !

KannadaprabhaNewsNetwork |  
Published : Oct 30, 2026, 03:00 AM IST
ಈ ವರದಿಗೆ ಪೂರಕ ಫೋಟೋ ಕಳಿಸಲಾಗಿದೆ.  | Kannada Prabha

ಸಾರಾಂಶ

ಉದ್ಯೋಗವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ ಉತ್ತರ ಪ್ರದೇಶ ಹಾಗೂ ಬಿಹಾರ ಮೂಲದ ಸಾವಿರಾರು ಕಾರ್ಮಿಕರು ತಮ್ಮ ಊರುಗಳಿಗೆ ಮರಳಿದ್ದರು

ಮಂಜುನಾಥ ಕೆ.ಎಂ. ಬಳ್ಳಾರಿ

ದೇಶದ ಜೀನ್ಸ್ ಉತ್ಪಾದನಾ ಕೇಂದ್ರಗಳಲ್ಲಿ ಒಂದಾಗಿ ಗುರುತಿಸಿಕೊಂಡಿರುವ ಬಳ್ಳಾರಿಯ ಜೀನ್ಸ್ ಉದ್ಯಮಕ್ಕೆ ನುರಿತ ಕಾರ್ಮಿಕರ ಕೊರತೆ ದೊಡ್ಡ ಸವಾಲಾಗಿ ಪರಿಣಮಿಸಿದ್ದು, ಕಳೆದ ಮೂರ್ನಾಲ್ಕು ವರ್ಷಗಳಿಂದ ಕುಶಲ ಕಾರ್ಮಿಕರ ಸಮಸ್ಯೆ ಮುಂದುವರಿದಿದೆ.

ಇದು ಜೀನ್ಸ್ ಉದ್ಯಮಿಗಳಿಗೆ ನುಂಗದ ತುತ್ತಾಗಿ ಪರಿಣಮಿಸಿದೆ. ಕೋವಿಡ್ ಸಂದರ್ಭದಲ್ಲಿ ತವರಿಗೆ ಮರಳಿದ ಉತ್ತರ ಪ್ರದೇಶ ಹಾಗೂ ಬಿಹಾರ ಮೂಲದ ಕಾರ್ಮಿಕರು ಮತ್ತೆ ಬಳ್ಳಾರಿಗೆ ಮರಳದಿರುವುದು ಇಲ್ಲಿನ ಗಾರ್ಮೆಂಟ್ಸ್ ಉದ್ಯಮದ ಉತ್ಪಾದನಾ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿದೆ. ಒಂದು ಕಾಲದಲ್ಲಿ ಸಾವಿರಾರು ಕಾರ್ಮಿಕರಿಗೆ ಉದ್ಯೋಗ ಕಲ್ಪಿಸಿದ್ದ ಬಳ್ಳಾರಿಯ ಜೀನ್ಸ್ ಉದ್ಯಮವು ಕೋವಿಡ್ ನಂತರ ಚೇತರಿಕೆಯ ಹಾದಿಯಲ್ಲಿದ್ದರೂ ಅಗತ್ಯಕ್ಕೆ ತಕ್ಕಷ್ಟು ನುರಿತ ಕಾರ್ಮಿಕರು ದೊರೆಯದಿರುವುದು ಉದ್ಯಮಿಗಳ ಆತಂಕಕ್ಕೆ ಕಾರಣವಾಗಿದೆ. ವಿಶೇಷವಾಗಿ ಜೀನ್ಸ್ ಬಟ್ಟೆಗಳ ಕಟಿಂಗ್, ಹೊಲಿಗೆ, ವಾಷಿಂಗ್, ಫಿನಿಶಿಂಗ್ ಸೇರಿದಂತೆ ವಿವಿಧ ಹಂತಗಳಲ್ಲಿ ಪರಿಣತಿ ಹೊಂದಿರುವ ಕಾರ್ಮಿಕರ ಕೊರತೆ ಎದುರಾಗಿದೆ.

ತವರಿಗೆ ಹೋದವರು ಮರಳಲಿಲ್ಲ: ಕೋವಿಡ್ ಮೊದಲ ಅಲೆಯ ಸಂದರ್ಭದಲ್ಲಿ ದೇಶಾದ್ಯಂತ ಜಾರಿಯಾದ ಲಾಕ್‌ಡೌನ್‌ನಿಂದ ಬಳ್ಳಾರಿಯ ಜೀನ್ಸ್ ಉತ್ಪಾದನಾ ಘಟಕ ಸ್ಥಗಿತಗೊಂಡಿದ್ದವು. ಉದ್ಯೋಗವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ ಉತ್ತರ ಪ್ರದೇಶ ಹಾಗೂ ಬಿಹಾರ ಮೂಲದ ಸಾವಿರಾರು ಕಾರ್ಮಿಕರು ತಮ್ಮ ಊರುಗಳಿಗೆ ಮರಳಿದ್ದರು. ಲಾಕ್‌ಡೌನ್ ತೆರವಾದ ಬಳಿಕ ಜೀನ್ಸ್ ಉದ್ಯಮ ಮತ್ತೆ ಕಾರ್ಯಾರಂಭ ಮಾಡಿದರೂ ಹೊರರಾಜ್ಯಗಳ ಕಾರ್ಮಿಕರು ನಿರೀಕ್ಷಿತ ಪ್ರಮಾಣದಲ್ಲಿ ಮರಳಲಿಲ್ಲ. ಕೆಲವರು ತಮ್ಮ ರಾಜ್ಯಗಳಲ್ಲಿಯೇ ಉದ್ಯೋಗ ಕಂಡುಕೊಂಡರೆ ಮತ್ತಷ್ಟು ಮಂದಿ ಬೇರೆ ನಗರಗಳ ಗಾರ್ಮೆಂಟ್ಸ್ ಘಟಕಗಳಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಾರೆ. ಇದರ ಪರಿಣಾಮ ಬಳ್ಳಾರಿಯ ಉದ್ಯಮಿಗಳು ನುರಿತ ಕಾರ್ಮಿಕರನ್ನು ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಥಳೀಯ ಕಾರ್ಮಿಕರು ಜೀನ್ಸ್‌ ಉದ್ಯಮದಲ್ಲಿ ಕಾರ್ಯ ನಿರ್ವಹಿಸಲು ಹಿಂದೇಟು ಹಾಕುತ್ತಿರುವುದು ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಬೇರೆಡೆಗೆ ವಲಸೆ ಹೋಗುತ್ತಿರುವುದು ಜೀನ್ಸ್‌ ಉದ್ಯಮ ತತ್ತರಿಸುವಂತೆ ಮಾಡಿದೆ.

ಬೇಡಿಕೆಯಂತೆ ಪೂರೈಕೆ ಇಲ್ಲ: ಮಾರುಕಟ್ಟೆಯಿಂದ ಬೇಡಿಕೆ ಬಂದರೂ ನಿಗದಿತ ಅವಧಿಯಲ್ಲಿ ಸರಕು ಪೂರೈಸುವುದು ಉದ್ಯಮಿಗಳಿಗೆ ಸವಾಲಾಗಿದೆ. ದೀಪಾವಳಿ ಹಬ್ಬಕ್ಕೆ ದೇಶದ ವಿವಿಧ ರಾಜ್ಯಗಳಿಂದ ಜೀನ್ಸ್ ಪ್ಯಾಂಟ್ ಹಾಗೂ ಶರ್ಟ್‌ಗಳಿಗೆ ದೊಡ್ಡ ಬೇಡಿಕೆ ಬಂದಿದೆ. ಆದರೆ ಕುಶಲ ಕಾರ್ಮಿಕರ ಸಮಸ್ಯೆಯಿಂದ ಪೂರೈಕೆ ಸಾಧ್ಯವಾಗದೆ ಕೈ ಚೆಲ್ಲಿ ಕುಳಿತಿದ್ದೇವೆ ಎಂದು ಜೀನ್ಸ್ ಉದ್ಯಮಿಗಳು ಬೇಸರ ವ್ಯಕ್ತಪಡಿಸುತ್ತಾರೆ. ಕಾರ್ಮಿಕರ ಕೊರತೆ ನೀಗಿಸಲು ಸ್ಥಳೀಯ ಯುವಕರನ್ನು ಕೆಲಸಕ್ಕೆ ನೇಮಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಆದರೆ, ಜೀನ್ಸ್ ಉತ್ಪಾದನೆಯ ವಿವಿಧ ಹಂತಗಳಲ್ಲಿ ಪರಿಣತಿ ಪಡೆಯಲು ತರಬೇತಿ ಮತ್ತು ಅನುಭವ ಅಗತ್ಯವಿರುವುದರಿಂದ ತಕ್ಷಣವೇ ನುರಿತ ಕಾರ್ಮಿಕರನ್ನು ಸಿದ್ಧಪಡಿಸುವುದು ಸುಲಭವಲ್ಲ ಎನ್ನುತ್ತಾರೆ.

ಬಳ್ಳಾರಿಯ ಜೀನ್ಸ್ ಉದ್ಯಮವು ಸಾವಿರಾರು ಕುಟುಂಬಗಳ ಜೀವನೋಪಾಯಕ್ಕೆ ಆಧಾರವಾಗಿದೆ. ಕಾರ್ಮಿಕರ ಕೊರತೆ ಮುಂದುವರಿದರೆ ಉದ್ಯಮದ ವಿಸ್ತರಣೆ ಹಾಗೂ ಉತ್ಪಾದನಾ ಸಾಮರ್ಥ್ಯದ ಮೇಲೆಯೂ ಪರಿಣಾಮ ಬೀರುವ ಆತಂಕವಿದೆ. ಹೀಗಾಗಿ ಸರ್ಕಾರವು ಕೌಶಲಾಭಿವೃದ್ಧಿ ತರಬೇತಿ ಕೇಂದ್ರಗಳನ್ನು ಬಲಪಡಿಸುವುದು, ಸ್ಥಳೀಯ ಯುವಕರಿಗೆ ಜೀನ್ಸ್ ಉತ್ಪಾದನೆಯಲ್ಲಿ ವಿಶೇಷ ತರಬೇತಿ ನೀಡುವುದು ಹಾಗೂ ಉದ್ಯಮಕ್ಕೆ ಅಗತ್ಯ ಮೂಲಸೌಕರ್ಯ ಒದಗಿಸುವತ್ತ ಗಮನಹರಿಸಬೇಕಿದೆ. ಹೊರರಾಜ್ಯಗಳ ಕಾರ್ಮಿಕರನ್ನೇ ಅವಲಂಬಿಸುವ ಬದಲು ಸ್ಥಳೀಯ ಮಾನವ ಸಂಪನ್ಮೂಲ ಸಜ್ಜುಗೊಳಿಸುವುದು ದೀರ್ಘಕಾಲೀನ ಪರಿಹಾರವಾಗಬಹುದು. ಇದರಿಂದ ಉದ್ಯಮದ ಸ್ಥಿರತೆ ಹೆಚ್ಚುವುದರ ಜತೆಗೆ ಜಿಲ್ಲೆಯ ನಿರುದ್ಯೋಗ ಸಮಸ್ಯೆ ನಿವಾರಣೆಗೂ ನೆರವಾಗಲಿದೆ. ಸದ್ಯ ಬಳ್ಳಾರಿಯಲ್ಲಿ 50ಕ್ಕೂ ಅಧಿಕ ಜೀನ್ಸ್ ಯೂನಿಟ್‌ ಕಾರ್ಯ ನಿರ್ವಹಿಸುತ್ತಿವೆ.

ಬಳ್ಳಾರಿ ಜೀನ್ಸ್‌ ಉದ್ಯಮ ಕುಶಲ ಕಾರ್ಮಿಕರ ಸಮಸ್ಯೆ ಎದುರಿಸುತ್ತಿದ್ದು ಕೋವಿಡ್ ಬಳಿಕ ಈ ಸಮಸ್ಯೆ ನಿರಂತರವಾಗಿದೆ. ಕಳೆದ ಆರೇಳು ತಿಂಗಳಿನಿಂದ ಉದ್ಯಮ ಚೇತರಿಕೆ ಕಂಡಿದೆ. ಆದರೆ ಕಾರ್ಮಿಕರ ಕೊರತೆ ನಮ್ಮನ್ನು ಹೆಚ್ಚು ಬಾಧಿಸಿದೆ ಎಂದು , ಬಳ್ಳಾರಿಯ ಜೀನ್ಸ್ ಉದ್ಯಮಿ ಪೋಲಾಕ್ಸ್‌ ಜೀನ್ಸ್ ಮಲ್ಲಿಕಾರ್ಜುನ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೇಪ್‌ ಮಾಡಿದ್ದಕ್ಕಾಗಿ ಅಪಹರಣ ಮೂಲಕ ಪ್ರತೀಕಾರ
ಉತ್ತರ ಪಾಲಿಕೆಯಲ್ಲಿ 18 ಜಂಕ್ಷನ್‌ ಗುರುತು