ರೋಗಿಗಳ ಸೇವೆಗೆ ಮೊದಲ ಆದ್ಯತೆ ನೀಡಿ

KannadaprabhaNewsNetwork |  
Published : Oct 30, 2026, 02:45 AM IST
ಹುಬ್ಬಳ್ಳಿ ಹೆಗ್ಗೇರಿ ಆಯುರ್ವೇದ ಸೇವಾ ಸಮಿತಿಯ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಬುಧವಾರ ಪದವಿ ಪ್ರದಾನ ಸಮಾರಂಭ ನೆರವೇರಿತು. | Kannada Prabha

ಸಾರಾಂಶ

ಇತ್ತೀಚಿನ ದಿನಗಳಲ್ಲಿ ಕೆಲವು ವೈದ್ಯರು ರೋಗಿಗಳೊಂದಿಗೆ ಸಮರ್ಪಕವಾಗಿ ಸಮಯ ಕಳೆಯುವ ಬದಲು ಮೊಬೈಲ್‌ ಬಳಕೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಿದ್ದಾರೆ. ಇದು ರೋಗಿಗಳ ಅಸಮಾಧಾನಕ್ಕೆ ಕಾರಣವಾಗುತ್ತಿದೆ.

ಹುಬ್ಬಳ್ಳಿ:

ವೈದ್ಯರು ಸಾಧ್ಯವಾದಷ್ಟು ಸಾಮಾಜಿಕ ಜಾಲತಾಣಗಳಿಂದ ದೂರವಿದ್ದು, ಮೊಬೈಲ್‌ ಬಳಕೆಗೆ ಕಡಿವಾಣ ಹಾಕಿ ರೋಗಿಗಳ ಸೇವೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಎಸ್‌ಡಿಎಂ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಧ್ಯಾಪಕ ಡಾ. ವಿಜಯ ಕುಲಕರ್ಣಿ ಸಲಹೆ ನೀಡಿದರು.

ನಗರದ ಹೆಗ್ಗೇರಿ ಆಯುರ್ವೇದ ಸೇವಾ ಸಮಿತಿಯ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಬುಧವಾರ ಆಯೋಜಿಸಿದ್ದ ಪದವಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಕೆಲವು ವೈದ್ಯರು ರೋಗಿಗಳೊಂದಿಗೆ ಸಮರ್ಪಕವಾಗಿ ಸಮಯ ಕಳೆಯುವ ಬದಲು ಮೊಬೈಲ್‌ ಬಳಕೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಿದ್ದಾರೆ. ಇದು ರೋಗಿಗಳ ಅಸಮಾಧಾನಕ್ಕೆ ಕಾರಣವಾಗುತ್ತಿದೆ. ಯುವ ವೈದ್ಯರು ಇಂತಹ ಪ್ರವೃತ್ತಿಗೆ ಅವಕಾಶ ನೀಡದೆ, ರೋಗಿಗಳ ಸಮಸ್ಯೆಗಳನ್ನು ಆಲಿಸಿ, ಅವರ ಆರೋಗ್ಯದ ಕಾಳಜಿಗೆ ಮೊದಲ ಆದ್ಯತೆ ನೀಡಬೇಕು ಎಂದರು.

ನಾಡಿ ಪರೀಕ್ಷೆಗೂ ಮಹತ್ವ ನೀಡಿ:

ರೋಗಿಗಳ ನಾಡಿ ಹಿಡಿದು ಅದರ ಮಿಡಿತವನ್ನು ಅರಿಯುವ ಮೂಲಕ ರೋಗದ ಲಕ್ಷಣಗಳನ್ನು ತಿಳಿದುಕೊಳ್ಳಲು ಸಾಧ್ಯ. ಆದರೆ, ಇತ್ತೀಚಿನ ಕೆಲವು ಯುವ ವೈದ್ಯರು ನಾಡಿ ಪರೀಕ್ಷೆಗೂ ಮುಂದಾಗದೆ, ಆನ್‌ಲೈನ್‌ ಮಾದರಿಯಲ್ಲಿ ಔಷಧಗಳನ್ನು ಶಿಫಾರಸು ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳುತ್ತಿದ್ದಾರೆ. ಇದು ವೈದ್ಯಕೀಯ ಚಿಕಿತ್ಸೆಯ ನೈಜ ಲಕ್ಷಣವಲ್ಲ ಎಂದು ಅಭಿಪ್ರಾಯಪಟ್ಟರು.

ಅವಿಭಕ್ತ ಕುಟುಂಬಗಳ ಸಂಖ್ಯೆ ಕಡಿಮೆಯಾಗಿ, ವಿಭಕ್ತ ಕುಟುಂಬಗಳು ಹೆಚ್ಚುತ್ತಿರುವುದರಿಂದ ಯುವಜನರಲ್ಲಿ ಸಂಬಂಧ ಹಾಗೂ ಸಂಸ್ಕೃತಿಯ ಅರಿವು ಕುಂದುತ್ತಿದೆ. ಯುವಕರು ಸ್ವಾರ್ಥ ಮನೋಭಾವ ಬೆಳೆಸಿಕೊಳ್ಳದಂತೆ ಅವರಲ್ಲಿ ಸಾಮಾಜಿಕ ಜವಾಬ್ದಾರಿ ಮತ್ತು ಮೌಲ್ಯಗಳನ್ನು ಬೆಳೆಸಬೇಕು ಎಂದು ಹೇಳಿದರು.

ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸದಸ್ಯ ಡಾ. ಮೈಲಾರಲಿಂಗೇಶ್ವರ ಜೀವಣ್ಣವರ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಕಾಲೇಜಿನ ಡೀನ್‌ ಡಾ. ಜೆ.ಆರ್. ಜೋಶಿ ಯುವ ವೈದ್ಯರಿಗೆ ಪ್ರಮಾಣವಚನ ಬೋಧಿಸಿದರು. ಕಾರ್ಯಕ್ರಮದಲ್ಲಿ 60ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವೈದ್ಯ ಪದವಿ ಪ್ರಮಾಣಪತ್ರ ವಿತರಿಸಲಾಯಿತು.

ಡಾ. ಲಕ್ಷ್ಮೀ ಪಾಟೀಲ ವಿದ್ಯಾರ್ಥಿಗಳ ಚಟುವಟಿಕೆಗಳನ್ನು ಶ್ಲಾಘಿಸಿದರು. ಆಯುರ್ವೇದ ಸೇವಾ ಸಮಿತಿ ಅಧ್ಯಕ್ಷ ಗೋವಿಂದ ಜೋಶಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಸಂಜೀವ ಜೋಶಿ, ಪ್ರಾಚಾರ್ಯ ಡಾ. ಎ.ಎಸ್. ಪ್ರಶಾಂತ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಶ್ವೇತಾ ನಾಯಕ ಹಾಗೂ ಭರತ ದಿವಟೆ ಪರಿಚಯಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೇಪ್‌ ಮಾಡಿದ್ದಕ್ಕಾಗಿ ಅಪಹರಣ ಮೂಲಕ ಪ್ರತೀಕಾರ
ಉತ್ತರ ಪಾಲಿಕೆಯಲ್ಲಿ 18 ಜಂಕ್ಷನ್‌ ಗುರುತು