ಧಾರವಾಡ: ದೇಶದ ಅರ್ಥಿಕತೆ ಹೆಚ್ಚಾಗಲು ಶಿಕ್ಷಣ ಕ್ಷೇತ್ರದ ಅಭಿವೃದ್ಧಿ ಮತ್ತು ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕು. ಆಗ ವಿಕಸಿತ ಭಾರತದ ಕಂಡ ಕನಸು ಯಶಸ್ವಿಯಾಗಲು ಸಾಧ್ಯ ಎಂದು ಕಲಬುರಗಿ ಕೇಂದ್ರೀಯ ವಿವಿ ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ ಹೇಳಿದರು.
ಭಾರತದಲ್ಲಿ ಬಡತನ ನಿವಾರಿಸಲು ಸರ್ಕಾರ ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 1947ರ ನಂತರ ಗರಿಬಿ ಹಠಾವೋ ಕಾರ್ಯಕ್ರಮ ಜಾರಿಗೊಳಿಸಿ, ಆ ಮೂಲಕ ಗ್ರಾಮೀಣಾಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಯಿತು. ದೇಶದಲ್ಲಿ ಬಡವರ ಮತ್ತು ಶ್ರೀಮಂತರ ಅಂತರ ಮುಂದುವರೆದಿದ್ದು, ನ್ಯಾಷನಲ್ ಸ್ಯಾಂಪಲಿಂಗ್ ಸರ್ವೇಯ ಅಧ್ಯಯನ ಪ್ರಕಾರ ಭಾರತದಲ್ಲಿ ಶೇ.54 ಕಡು ಬಡವರಿದ್ದಾರೆ. ಹೀಗೆ ಬಡವ ಮತ್ತು ಶ್ರೀಮಂತ ಎಂಬ ವ್ಯತ್ಯಾಸ ಭಾರತದಲ್ಲಿ ಹೆಚ್ಚಾಗುತ್ತಿರುವುದು ಕಳವಳಕಾರಿ ಎಂದರು.
ಆತ್ಮ ನಿರ್ಭರ ಯೋಜನೆ ಅಡಿಯಲ್ಲಿ ಭಾರತೀಯ ಸ್ಥಳೀಯ ಸಂಪನ್ಮೂಲಗಳನ್ನು ಬಳಸಿ ಆರ್ಥಿಕ ಬೆಳವಣಿಗೆ ಹೆಚ್ಚಿಸಲು ಸಾಧ್ಯ. ವಿಶ್ವದಲ್ಲೇ ಭಾರತವು ಅರ್ಥಿಕತೆಯಲ್ಲಿ 4ನೇ ಸ್ಥಾನ ಪಡೆದಿದೆ. 2047ಕ್ಕೆ ಭಾರತದ ಆರ್ಥಿಕತೆ 30 ಟ್ರಿಲಿಯನ್ ಡಾಲರ್ ಆರ್ಥಿಕತೆ ಹೊಂದಿದ ದೇಶವಾಗಲಿದೆ. ಜಗತ್ತಿನ ಬೇರೆ ದೇಶಗಳಿಗೆ ಹೋಲಿಸಿದರೆ ಭಾರತವು ಆರ್ಥಿಕತೆ, ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ಹೊಂದುತ್ತಲಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಕವಿವಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಬಿ.ಎಚ್.ನಾಗೂರ್, ಭಾರತವು ವಿಕಸಿತ ಭಾರತ ಕನಸನ್ನು ಕಂಡಿದೆ. ಇಲ್ಲಿಯ ಅಭಿವೃದ್ಧಿಯು ಯುವ ಜನತೆಯ ಆಧುನಿಕ ಕೌಶಲ್ಯಗಳ ಮೂಲಕ ಸಾಧಿಸಬಹುದು. ಅದಕ್ಕಾಗಿ ಯುವ ಸಮೂಹಕ್ಕೆ ಉದ್ಯೋಗ ಅವಕಾಶ ಒದಗಿಸಬೇಕು ಎಂದರು.
ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಮನೋಜ ಡೊಳ್ಳಿ, ಡಾ. ಎನ್.ಎಸ್. ಮುಗದೂರ, ಡಾ. ಎ.ಆರ್. ಕುಲಕರ್ಣಿ, ಡಾ. ನಯನತಾರಾ, ಡಾ. ಬ್ರಹ್ಮಾನಂದ ಇದ್ದರು.