ಕೌಶಲ್ಯ ಬೆಳೆಸಿಕೊಳ್ಳುವುದು ಅತಿ ಮುಖ್ಯ: ಶಿವಾನಂದ

KannadaprabhaNewsNetwork |  
Published : May 13, 2025, 11:54 PM IST
12ಎಚ್‌ಪಿಟಿ7- ಹೊಸಪೇಟೆಯ ಪಿಡಿಐಟಿ ಕಾಲೇಜ್‌ನಲ್ಲಿ ಸೋಮವಾರ ನಡೆದ  “ಎಲೆಕ್ಟ್ರಿಕಲ್ ಸ್ವಿಚ್‌ಗೇರ್‌ನ ಸುರಕ್ಷತೆ, ರಕ್ಷಣೆ ಮತ್ತು ಅನ್ವಯಿಕೆಗಳು” ಎಂಬ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮವನ್ನು ಉದ್ಘಾಟಿಸಿ ತುಮಕೂರಿನ ಡಿಬಿಸನ್ಸ್‌ ಕಂಪನಿಯ ಸಿಇಒ ಡಿ.ವಿ. ಶಿವಾನಂದ ಉದ್ಘಾಟಿಸಿದರು. | Kannada Prabha

ಸಾರಾಂಶ

ವಿದ್ಯಾರ್ಥಿಗಳಲ್ಲಿ ಶಿಕ್ಷಣ ಕ್ಷೇತ್ರ ಮತ್ತು ಕೈಗಾರಿಕೆ ನಡುವಿನ ಅಂತರವನ್ನು ಸರಿದೂಗಿಸಲು ಇಂತಹ ತರಬೇತಿಗಳು ಪಠ್ಯದಲ್ಲಿ ಸೇರ್ಪಡೆಯಾಗಬೇಕು

ಕನ್ನಡಪ್ರಭ ವಾರ್ತೆ ಹೊಸಪೇಟೆ

ಕೇವಲ ಪದವಿಗಳಿಸುವುದೊಂದೇ ಮಹತ್ವವಲ್ಲ, ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಕೌಶಲ್ಯ ಬೆಳೆಸಿಕೊಳ್ಳುವುದು ಅತಿ ಮುಖ್ಯ ಎಂದು ತುಮಕೂರಿನ ಡಿಬಿಸನ್ಸ್‌ ಕಂಪನಿಯ ಸಿಇಒ ಡಿ.ವಿ. ಶಿವಾನಂದ ಹೇಳಿದರು.

ನಗರದ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯ (ಪಿಡಿಐಟಿ)ದ ವಿದ್ಯುತ್ ವಿಭಾಗದ ವತಿಯಿಂದ ಐಕ್ಯೂಎಸಿಯ ಸಹಯೋಗದಲ್ಲಿ ಎಲೆಕ್ಟ್ರಿಕಲ್ ಸ್ವಿಚ್‌ಗೇರ್‌ನ ಸುರಕ್ಷತೆ, ರಕ್ಷಣೆ ಮತ್ತು ಅನ್ವಯಿಕೆಗಳು ಎಂಬ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.

ಸ್ನಾತಕೋತ್ತರ ಪದವಿ ಹಾಗೂ ಎಂಜಿನಿಯರಿಂಗ್ ಡಾಕ್ಟರೇಟ್‌ ಗಳಿಸಿದ್ದರೂ ಇಂದಿನ ಎಲೆಕ್ಟ್ರಿಕಲ್ ಎಂಜಿನಿಯರ್‌ಗಳಿಗೆ ಮನೆಯಲ್ಲಿ ಕೆಟ್ಟು ಹೋದ ಮೋಟಾರ್ ಅನ್ನು ಸರಿಪಡಿಸಲು ಬರುವುದಿಲ್ಲ. ಇಂತಹ ಎಂಜಿನಿಯರ್‌ಗಳು ಕೈಗಾರಿಕಾ ಉದ್ಯಮಗಳಲ್ಲಿ ಕೌಶಲ್ಯದ ಕೊರತೆಯಿಂದ ಉದ್ಯೋಗಗಳಿಂದ ವಂಚಿತರಾಗುತ್ತಾರೆ. ಇದರಿಂದ ವಿದ್ಯಾರ್ಥಿಗಳಲ್ಲಿ ಶಿಕ್ಷಣ ಕ್ಷೇತ್ರ ಮತ್ತು ಕೈಗಾರಿಕೆ ನಡುವಿನ ಅಂತರವನ್ನು ಸರಿದೂಗಿಸಲು ಇಂತಹ ತರಬೇತಿಗಳು ಪಠ್ಯದಲ್ಲಿ ಸೇರ್ಪಡೆಯಾಗಬೇಕು ಎಂದರು.

ಕೈಗಾರಿಕಾ ವಲಯದಲ್ಲಿ ಕಾರ್ಯನಿರ್ವಹಿಸುವ ಸಂಧರ್ಭ ಯಾವುದಾದರೂ ಉಪಕರಣಗಳು ಸುರಕ್ಷತೆ ವಿಫಲವಾಗಿ ಕೆಟ್ಟರೆ ಎಂಜಿನಿಯರ್‌ಗಳು ನೂರಾರು ಪ್ರಶ್ನೆಗಳಿಗೆ ಗುರಿಯಾಗುತ್ತಾರೆ. ಅದನ್ನೆಲ್ಲಾ ಸರಿಪಡಿಸಲು ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಕೌಶಲ್ಯ ಅಭಿವೃದ್ಧಿಯನ್ನು ಹೊಂದಿದ್ದರೆ, ಕೈಗಾರಿಕಾ ಸವಾಲುಗಳನ್ನು ಎದುರಿಸಲು ಇಂತಹ ತರಬೇತಿಗಳು ಸಹಾಯಕವಾಗಲಿವೆ ಎಂದರು.

ಕಂಪನಿಯ ಕಾರ್ಯನಿರ್ವಾಹಕ ಅಧಿಕಾರಿ ಬಸವೇಶ ಶೆಟ್ಟಿ ಎಸ್. ವಿದ್ಯಾರ್ಥಿಗಳಿಗೆ ವಿದ್ಯುತ್ ಉಪಕರಣಗಳ ಬಳಕೆ, ಸುರಕ್ಷತೆ, ರಕ್ಷಣೆ ಹಾಗೂ ಕೈಗಾರಿಕಾ ವಲಯದಲ್ಲಿ ಅದರ ಅನ್ವಯಿಕೆಗಳ ಕುರಿತು ಪ್ರಾಯೋಗಿಕ ತರಬೇತಿಯನ್ನು ನೀಡಿದರು.

ಕಾರ್ಯಕ್ರಮದ ಸಂಚಾಲಕ ಪ್ರೊ.ಮಧ್ವರಾಜ್.ಕೆ ಮಾತನಾಡಿ, ವಿದ್ಯುತ್ ಉತ್ಪಾದನೆ ಎಂಬುದು ಆಹಾರ ತಯಾರಿಕೆ ಇದ್ದಂತೆ, ಆಹಾರವನ್ನು ಅಗತ್ಯಕ್ಕಿಂತ ಹೆಚ್ಚಿಗೆ ತಯಾರಿಸಿದರೆ ಅದು ವ್ಯರ್ಥವಾಗುತ್ತದೆ. ಕಡಿಮೆ ತಯಾರಿಸಿದರೆ ಸಾಕಾಗುವುದಿಲ್ಲ, ಅಧಿಕವಾಗಿ ತಯಾರಿಸಿದ ಆಹಾರವನ್ನು ದೀರ್ಘಕಾಲ ಶೇಖರಿಸಲು ಸಾಧ್ಯವಿಲ್ಲ. ಅದೇ ರೀತಿ ವಿದ್ಯುತ್ ಅನ್ನು ಬೇಡಿಕೆಗೆ ಎಷ್ಟು ಅಗತ್ಯವಿದೆಯೋ ಅಷ್ಟೇ ತಯಾರಿಸಬೇಕಾಗುತ್ತದೆ. ಅಗತ್ಯಕ್ಕಿಂತ ಹೆಚ್ಚಿಗೆ ಉತ್ಪಾದಿಸಿದರೆ ಅದನ್ನು ದೀರ್ಘಕಾಲ ಸಂಗ್ರಹಿಸಲು ಆಗುವುದಿಲ್ಲ, ಕಡಿಮೆ ಉತ್ಪಾದಿಸಿದರೆ ಬೇಡಿಕೆಯನ್ನು ಪೂರೈಸಲು ಸಾಧ್ಯವಿಲ್ಲ ಎಂದರು.

ಪಿ.ಡಿ.ಐ.ಟಿ ಕಾಲೇಜಿನ ಪ್ರಾಂಶುಪಾಲ ಡಾ. ಯು.ಎಂ. ರೋಹಿತ್ ಮಾತನಾಡಿ, ಕೈಗಾರಿಕಾ ಕ್ಷೇತ್ರಕ್ಕೆ ತಕ್ಕಂತೆ ವಿದ್ಯಾರ್ಥಿಗಳನ್ನು ತಯಾರಿಸಲು ಇಂತಹ ಕಾರ್ಯಾಗಾರಗಳು ಸಹಕಾರಿಯಾಗಲಿವೆ ಎಂದರು.

ವಿದ್ಯುತ್ ವಿಭಾಗದ ಮುಖ್ಯಸ್ಥ ಡಾ.ಎಸ್. ಪ್ರಕಾಶ್ ಮಾತನಾಡಿದರು.

ಪಿ.ಡಿ.ಐ.ಟಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಕಲ್ಗುಡಿ ಮಂಜುನಾಥ್, ಉಪಪ್ರಾಂಶುಪಾಲ ಡಾ. ಪಾರ್ವತಿ ಕಡ್ಲಿ, ಸಂಚಾಲಕರಾದ ಪ್ರೊ. ಸುಮಾ ಜಿ.ಸಿ., ಡೀನ್ ಡಾ. ಮಂಜುಳಾ ಎಸ್.ಡಿ. ಮತ್ತಿತರರಿದ್ದರು.

ಪ್ರೊ. ಫಿರದೋಶ್, ಪ್ರೊ. ಸ್ವಪ್ನ ನಿರ್ವಹಿಸಿದರು.---

12ಎಚ್‌ಪಿಟಿ7- ಹೊಸಪೇಟೆಯ ಪಿಡಿಐಟಿ ಕಾಲೇಜಿನಲ್ಲಿ ಸೋಮವಾರ ನಡೆದ ಎಲೆಕ್ಟ್ರಿಕಲ್ ಸ್ವಿಚ್‌ಗೇರ್‌ನ ಸುರಕ್ಷತೆ, ರಕ್ಷಣೆ ಮತ್ತು ಅನ್ವಯಿಕೆಗಳು ಎಂಬ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ