ಕನ್ನಡಪ್ರಭ ವಾರ್ತೆ ನಾಪೋಕ್ಲು
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ವತಿಯಿಂದ ಮಕ್ಕಂದೂರು ಗ್ರಾಮದ ಕುಂಭ ಗೌಡನ ಐನ್ ಮನೆಯಲ್ಲಿ ಮೇ 17 ಶನಿವಾರ ಐನ್ ಮನೆ ಜಂಬರ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.ಸಂಸ್ಕೃತಿ ಸರಣಿ ಕಾರ್ಯಕ್ರಮದ ಭಾಗವಾಗಿ ನಡೆಯುತ್ತಿರುವ ಎರಡನೇ ಕಾರ್ಯಕ್ರಮ ಇದಾಗಿದ್ದು ಈ ಹಿಂದೆ ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಕುಡೇಕಲ್ಲಿನ ಐನ್ಮನೆಯಲ್ಲಿ ಪ್ರಥಮ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ಕುಂಭ ಗೌಡರಿಗೆ ಲಿಂಗರಾಜರು ಕೊಡ ಮಾಡಿದ್ದ ನಿರೂಪದ ಅನಾವರಣ ಅಕಾಡೆಮಿ ಪ್ರಕಟಿತ ಪುಸ್ತಕಗಳ ಬಿಡುಗಡೆ ಅರೆಭಾಷೆ ಸುಪ್ರಭಾತದ ಧ್ವನಿ ಸುರುಳಿ ಬಿಡುಗಡೆ ಕುಂಭ ಗೌಡನ ಕುಟುಂಬದ ಲಾಂಛನ ಬಿಡುಗಡೆ ಕುಂಭ ಗೌಡನ ಕುಟುಂಬದ ಸಾಧಕರಿಗೆ ಸನ್ಮಾನ ಹಾಗೂ ಹಾಗೂ ಈ ಸಂಬಂಧ ಏರ್ಪಡಿಸಲಾಗಿದ್ದ ಕ್ರೀಡಾಕೂಟ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿವೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ವಹಿಸಲಿದ್ದಾರೆ . ಕುಂಭ ಗೌಡನ ಕುಟುಂಬದ ಪಟ್ಟದಾರ ಕೆ.ಕೆ .ಓಂಕಾರಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಸಾಧಕರು ಸನ್ಮಾನಿಸಲಿದ್ದಾರೆ. ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಸದಸ್ಯರಾದ ವೀಣಾ ಅಚ್ಚಯ್ಯ ಪುಸ್ತಕಗಳ ಬಿಡುಗಡೆ ಮಾಡಲಿದ್ದಾರೆ.ಸಾಹಿತಿ ಏ.ಕೆ ಹಿಮಕರ ಅರೆಭಾಷೆ ಕುಟುಂಬಗಳ ಐನ್ ಮನೆ ಹಾಗೂ ಕುಂಭ ಗೌಡನ ಅರವಿಂದ್ ಮಾಚಯ್ಯ ಕುಂಭ ಗೌಡನ ಐನ್ ಮನೆ ನಡೆದು ಬಂದ ದಾರಿ ಎಂಬ ವಿಷಯಗಳ ಕುರಿತು ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಕ್ಕಂದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ ಎನ್ ರಮೇಶ್ ಮಕ್ಕಂದೂರು, ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಶಾಂತೆಂಡ ರವಿ ಕುಶಾಲಪ್ಪ , ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಆನಂದ ಕರಂದ್ಲಾಜೆ, ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘದ ನಿರ್ದೇಶಕ ಕೋಳುಮುಡಿಯನ ಅನಂತಕುಮಾರ್ , ಮಕ್ಕಂದೂರು ಗೌಡ ಸಮಾಜದ ಅಧ್ಯಕ್ಷ ಲಕ್ಕಪ್ಪನ ಕೆ, ಹರೀಶ, ಶಿವಮೊಗ್ಗ ಜಿಲ್ಲೆ ಅಬಕಾರಿ ಇಲಾಖೆ ಉಪ ಆಯುಕ್ತರಾದ ಸುಮಿತ ಕುಂಭ ಗೌಡನ, ಕುಶಾಲಪ್ಪ ನಂಗಾರು, ಪ್ರಗತಿಪರ ಕೃಷಿಕರಾದ ಇಂದಿರಾ ದೇವಿ ಪ್ರಸಾದ್ ಸಂಪಾಜೆ ಮತ್ತು ಸಂಚಾಲಕರು, ನಿರ್ದೇಶಕ ಸದಸ್ಯರು ಪಾಲ್ಗೊಳ್ಳಲಿದ್ದಾರೆ.
ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ 9.30. ರಿಂದ ಜಯಪ್ರಕಾಶ್ ಪೆರುಮುಂಡ ಮತ್ತು ತಂಡದವರಿಂದ ಅರೆಭಾಷೆ ಹಾಡುಗಳ ಕಲರವ, ರೇಡಿಯೋ ಸಿಟಿ 91.1 ಎಫ್ಎಂ ಬೆಂಗಳೂರಿನ ರೇಡಿಯೋ ಜಾಕಿ ಆರ್ ಜೆ ತ್ರಿಶೂಲ್ ಕಂಬಳ ಇವರಿಂದ ವಿಶೇಷ ಕಾರ್ಯಕ್ರಮ ಹಾಗೂ ಅಪರಾಹ್ನ ವಿವಿಧ ತಂಡಗಳಿಂದ ಸಾಂಸ್ಕೃತಿಕ ಮನೋರಂಜನ ಕಾರ್ಯಕ್ರಮಗಳು ನಡೆಯಲಿದೆ ಎಂದು ಅಕಾಡೆಮಿಯ ಅಧ್ಯಕ್ಷರಾದ ಸದಾನಂದ ಮಾವಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.