ಆವಿಷ್ಕಾರ ಜ್ಞಾನದಿಂದ ಆಲೋಚನಾ ಶಕ್ತಿ ವೃದ್ಧಿ: ಡಾ.ಮೀರಾ ಶಿವಲಿಂಗಯ್ಯ

KannadaprabhaNewsNetwork |  
Published : Nov 14, 2025, 01:30 AM IST
13ಕೆಎಂಎನ್‌ಡಿ-7ಮಂಡ್ಯದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ನಡೆದ ವಿಜ್ಞಾನ ವಸ್ತುಪ್ರದರ್ಶನವನ್ನು ಜಿಲ್ಲಾ ರೆಡ್‌ಕ್ರಾಸ್‌ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ವೀಕ್ಷಿಸಿದರು. | Kannada Prabha

ಸಾರಾಂಶ

ವಿದ್ಯಾರ್ಥಿಗಳು ಮಾನಸಿಕವಾಗಿ ಸಧೃಡರಾಗಲು ಶಿಕ್ಷಣ ಅಗತ್ಯ. ವಿಜ್ಞಾನದ ಕಡೆ ಹೆಚ್ಚಿನ ಆಸಕ್ತಿ ವಹಿಸಬೇಕು. ಇದರಿಂದ ಸಂಶೋಧನಾಸಕ್ತಿ ಬೆಳವಣಿಗೆ ಕಾಣುತ್ತದೆ. ನಮ್ಮ ಪೂರ್ವಜರ ಕಾಲದಿಂದಲೂ ಭಾರತದಲ್ಲಿ ವಿಜ್ಞಾನ ಅನ್ವೇಷಣೆ ಇತ್ತು, ಬ್ರಿಟಿಷರು ಭಾರತಕ್ಕೆ ಕೇವಲ ಮಸಾಲಾ ಪದಾರ್ಥಗಳಿಗಾಗಿ ಮಾತ್ರ ಬರಲಿಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ಭಾರತೀಯರ ಡಿಎನ್ಎನಲ್ಲಿಯೇ ಅನ್ವೇಷಣಾ ಮನೋಭಾವನೆ ಅಡಕವಾಗಿದ್ದು, ಆವಿಷ್ಕಾರ ಜ್ಞಾನದಿಂದ ಆಲೋಚನಾ ಶಕ್ತಿ ವೃದ್ಧಿಸುತ್ತದೆ ಎಂದು ಜಿಲ್ಲಾ ರೆಡ್ ಕ್ರಾಸ್ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಹೇಳಿದರು.

ಮಹಿಳಾ ಸರ್ಕಾರಿ ಕಾಲೇಜು (ಸ್ವಾಯತ್ತ) ಹಾಗೂ ವಿಜ್ಞಾನ ವೇದಿಕೆ ಮತ್ತು ಆಂತರಿಕ ಗುಣಮಟ್ಟ ಕೋಶದ ವತಿಯಿಂದ ಗುರುವಾರ ಮಂಡ್ಯ ಮಹಿಳಾ ಸರ್ಕಾರಿ ಕಾಲೇಜಿನ (ಸ್ವಾಯತ್ತ) ಆವರಣದಲ್ಲಿ ಆಯೋಜಿಸಲಾಗಿದ್ದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಮಾನಸಿಕವಾಗಿ ಸಧೃಡರಾಗಲು ಶಿಕ್ಷಣ ಅಗತ್ಯ. ವಿಜ್ಞಾನದ ಕಡೆ ಹೆಚ್ಚಿನ ಆಸಕ್ತಿ ವಹಿಸಬೇಕು. ಇದರಿಂದ ಸಂಶೋಧನಾಸಕ್ತಿ ಬೆಳವಣಿಗೆ ಕಾಣುತ್ತದೆ. ನಮ್ಮ ಪೂರ್ವಜರ ಕಾಲದಿಂದಲೂ ಭಾರತದಲ್ಲಿ ವಿಜ್ಞಾನ ಅನ್ವೇಷಣೆ ಇತ್ತು, ಬ್ರಿಟಿಷರು ಭಾರತಕ್ಕೆ ಕೇವಲ ಮಸಾಲಾ ಪದಾರ್ಥಗಳಿಗಾಗಿ ಮಾತ್ರ ಬರಲಿಲ್ಲ. ನಮ್ಮ ಆಯುರ್ವೇದ ಸಂಸ್ಕೃತಿ ತಿಳಿದುಕೊಳ್ಳಲೂ ಸಹ ಬಂದಿದ್ದರು. ವಿಶ್ವಕ್ಕೆ ಯೋಗದ ಮಹತ್ವ ತಿಳಿಸಿದ್ದು ನಮ್ಮ ಹೆಮ್ಮೆಯ ಭಾರತ ಎಂದರು.

ಯುವಜನರು ಕೇವಲ ಮೊಬೈಲ್ ತಂತ್ರಜ್ಞಾನ ಬಳಸುತ್ತಿದ್ದಾರೆ, ಮೊಬೈಲ್‌ನಿಂದ ಆಚೆಗೂ ವಿಜ್ಞಾನ ಚಾದರ ಹಾಸಿಕೊಂಡಿದೆ. ವಿಜ್ಞಾನ ಕ್ಷೇತ್ರದಲ್ಲಿ ಮುಂದೆ ಬಂದು ನಮ್ಮ ಸಮಾಜಕ್ಕೆ ತಮ್ಮದೇ ಆದ ವಿಶಿಷ್ಟ ಕೊಡುಗೆ ನೀಡುವುದಕ್ಕೆ ಯುವಸಮೂಹ ಸಂಕಲ್ಪ ಮಾಡುವಂತೆ ತಿಳಿಸಿದರು.

ವಿಜ್ಞಾನ ಬೆಳೆದಂತೆ ಮನುಷ್ಯ ಆಧುನಿಕ ಉಪಕರಣಗಳ ಹಿಡಿತದಲ್ಲಿ ಸಿಲುಕಿದ್ದಾನೆ, ವಿಜ್ಞಾನ ಮತ್ತು ತಂತ್ರಜ್ಞಾನದ ಹಿಡಿತ ಮನುಷ್ಯನ ನಿಯಂತ್ರಣದಲ್ಲಿ ಇರಬೇಕು. ಎಐ ತಂತ್ರಜ್ಞಾನ ಬಂದ ಮೇಲೆ ಮನುಷ್ಯ ತನ್ನ ಕಲ್ಪನಾ ಶಕ್ತಿ, ಯೋಚನಾ ಶಕ್ತಿಯನ್ನು ಕಳೆದುಕೊಳ್ಳುತ್ತಿದ್ದಾನೆ. ವಿಜ್ಞಾನದ ಆವಿಷ್ಕಾರ ನಿಮ್ಮಲ್ಲಿ ಜ್ಞಾನ ಜೊತೆಗೆ ಆಲೋಚನಾ ಶಕ್ತಿಯನ್ನು ವೃದ್ಧಿಸುತ್ತದೆ. ವಿದ್ಯಾರ್ಥಿಗಳು ವಿದ್ಯಾರ್ಥಿ ದೆಸೆಯಲ್ಲಿಯೇ ವಿಜ್ಞಾನ ಮಹತ್ವ ಅರಿಯಬೇಕು ಆವಿಷ್ಕಾರದ ಚಿಂತನೆಯನ್ನು ಮುಂದುವರಿಸಬೇಕು ಎಂದರು.

ಕಾಲೇಜಿನ ಪ್ರಾಂಶುಪಾಲ ಗುರುರಾಜ್ ಪ್ರಭು ಮಾತನಾಡಿ, ವಿಜ್ಞಾನ ವಸ್ತುಪ್ರದರ್ಶನದಲ್ಲಿ ಕಂಪ್ಯೂಟರ್ ಸೈನ್ಸ್, ಕೆಮಿಸ್ಟ್ರಿ, ಬಯೋ ಕೆಮಿಸ್ಟ್ರಿ, ಬಾಟ್ನಿ, ಫಾರೆನ್ಸಿಕ್ ಸೈನ್ಸ್ ಸೇರಿದಂತೆ 10 ವಿಭಾಗದ ವಿಭಾಗಗಳು 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆ ಎಂದರು.

ಸಮಾಜ ನಾವು ನೀಡುವ ಕೊಡುಗೆಯಿಂದ ಬೆಳೆಯುತ್ತದೆ. ದೊಡ್ಡ ದೊಡ್ಡ ಅನ್ವೇಷಣೆಗಳು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ, ಅನ್ವೇಷಣೆಗಳು ದೊಡ್ಡದೇ ಆಗಿರಬೇಕು ಎಂದೇನೂ ಇಲ್ಲ. ಅನ್ವೇಷಣಾ ಮನೋಭಾವನೆ ನಮ್ಮಲ್ಲಿ ಇರಬೇಕು. ಬ್ಲೂಟೂತ್, ವೈಫೈ ಮಾನವ ಜೀವನದ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ ಇದೆಲ್ಲವೂ ಅನ್ವೇಷಣೆಯಿಂದ ಸಾಧ್ಯವಾಯಿತು ಎಂದರು.

ನಂತರ ಜಿಲ್ಲಾ ರೆಡ್ ಕ್ರಾಸ್ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ, ಮಹಿಳಾ ಸರ್ಕಾರಿ ಕಾಲೇಜಿನ (ಸ್ವಾಯತ್ತ) ಪ್ರಾಂಶುಪಾಲರಾದ ಗುರುರಾಜ್ ಪ್ರಭು ಅವರು ವಿದ್ಯಾರ್ಥಿಗಳು ವಿಜ್ಞಾನ ವಸ್ತುಪ್ರದರ್ಶನ ಇರಿಸಲಾಗಿದ್ದ ವಿವಿಧ ಬಗೆಯ ವಸ್ತು ಪ್ರದರ್ಶನವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ವಿಜ್ಞಾನ ವಸ್ತುಪ್ರದರ್ಶನದಲ್ಲಿ ಭಾಗವಹಿಸಿದ್ದ ಎಲ್ಲಾ ವಿಭಾಗದವರಿಗೂ ಪ್ರಮಾಣ ಪತ್ರ ನೀಡಿದರು.

ಇದೇ ಸಂದರ್ಭದಲ್ಲಿ ಪ್ರೊ.ಜಯಲಕ್ಷ್ಮಿ, ಮಹಿಳಾ ಸರ್ಕಾರಿ ಕಾಲೇಜಿನ ಜೋತಿ, ಪ್ರದೀಪ್ ಕುಮಾರ್, ರವಿ ಕಿರಣ್, ಹೇಮಾವತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ