ಕಮಲ ಪಾಳಯಕ್ಕೆ ಮುಖ್ಯಮಂತ್ರಿ ತಿರುಗೇಟು । ಎರಡು ವರ್ಷಗಳಲ್ಲಿ ಎತ್ತಿನಹೊಳೆ ಯೋಜನೆ । ಕನಕ ಭವನ ಉದ್ಘಾಟನೆ
ರಾಜ್ಯಕ್ಕೆ ವಂಚಿಸಿರುವ ಬಿಜೆಪಿ, ರಾಜ್ಯಕ್ಕೆ ಆದ ಅನ್ಯಾಯವನ್ನು ಸಮರ್ಥಿಸಿ ಕೇಂದ್ರದ ಪರವಾಗಿ ಮಾತನಾಡುತ್ತಿದೆ. ಬಿಜೆಪಿಯವರು ರಾಜ್ಯದ ಜನರ ಪರವಾಗಿ ನಿಲ್ಲುವ ಬಗ್ಗೆ ನೀವು ತೀರ್ಮಾನಿಸಬೇಕು. ರಾಜ್ಯದ ಅಭಿವೃದ್ಧಿಯ ಮೂಲಕ ಬಿಜೆಪಿಗೆ ತಕ್ಕ ಉತ್ತರ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಅರಸೀಕೆರೆ ತಾಲೂಕಿನ 152 ಕೋಟಿ ರುಪಾಯಿ ಮೌಲ್ಯದ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ, ನಾನಾ ಕಾರ್ಯಕ್ರಮಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ‘ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುತ್ತೇನೆ ಎಂದು ಘೋಷಿಸಿದ್ದ ದೇವೇಗೌಡರು ಈಗ ಬಿಜೆಪಿ ಜತೆ ಕೂಡಿಕೆ ಮಾಡಿಕೊಂಡಿದ್ದಾರೆ. ಬಿಜೆಪಿ-ಜೆಡಿಎಸ್ ಒಟ್ಟಾಗಿ ವಿಧಾನ ಪರಿಷತ್‌ಗೆ ಒಂದೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದರು. ನಮ್ಮ ಜನ ಬಿಜೆಪಿ-ಜೆಡಿಎಸ್ ದೋಸ್ತಿಯನ್ನು ಸೋಲಿಸಿ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಅವರನ್ನು ಭರ್ಜರಿಯಾಗಿ ಗೆಲ್ಲಿಸಿದರು. ಬರಲಿರುವ ಲೋಕಸಭಾ ಚುನಾವಣೆಯಲ್ಲೂ ಅವರ ದೋಸ್ತಿಗೆ ಇದೇ ಗತಿ ಆಗಲಿದೆ’ ಎಂದು ಅಣಕವಾಡಿದರು.‘ನಾವು ಅಧಿಕಾರಕ್ಕೆ ಬಂದ ದಿನದಿಂದಲೇ ಚುನಾವಣೆಯಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸುವ ಕಾರ್ಯ ಶುರು ಮಾಡಿದ್ದೇವೆ. ಎಂಟು ತಿಂಗಳಲ್ಲೇ ಐತಿಹಾಸಿಕವಾದ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಪ್ರತೀ ವರ್ಷ 60000 ಕೋಟಿ ರುಪಾಯಿಗಳನ್ನು ತಿಂಗಳ ಕಂತುಗಳಲ್ಲಿ ಜನರ ಜೇಬಿಗೆ ಹಾಕುತ್ತಿದ್ದೇವೆ’ ಎಂದು ಹೇಳಿದರು.
‘ಎತ್ತಿನಹೊಳೆ ಯೋಜನೆ ಪರವಾಗಿ ಶಿವಲಿಂಗೇಗೌಡ ನಿರಂತರವಾಗಿ ಹೋರಾಡುತ್ತಿದ್ದಾರೆ. ನಾವು ಮಾತ್ರ ಮಣ್ಣಿನ ಮಕ್ಕಳು ಎನ್ನುವವರು ಎತ್ತಿನಹೊಳೆ ಯೋಜನೆಯನ್ನು ವಿರೋಧಿಸಿದ್ದರು. ಯಾರೇ ವಿರೋಧ ಮಾಡಿದರೂ ಎರಡು ವರ್ಷಗಳಲ್ಲಿ ಎತ್ತಿನಹೊಳೆ ಯೋಜನೆಯಿಂದ ಕ್ಷೇತ್ರಕ್ಕೆ ನೀರು ಕೊಡುವುದು ಗ್ಯಾರಂಟಿ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ಒಂದು ಕಡೆ ನಮ್ಮ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳನ್ನು ಬಿಜೆಪಿಯವರು ನಿರಂತರವಾಗಿ ಅವಮಾನಿಸುತ್ತಿದ್ದಾರೆ. ಮತ್ತೊಂದು ಕಡೆ ನಮ್ಮ ಗ್ಯಾರಂಟಿಗಳನ್ನು ಕದ್ದು ಅದಕ್ಕೆ ಮೋದಿ ಗ್ಯಾರಂಟಿ ಎಂದು ಹೆಸರು ಬದಲಾಯಿಸಿದ್ದಾರೆ’ ಎಂದು ಟೀಕಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ, ಇಂಧನ ಸಚಿವ ಕೆ.ಜೆ.ಜಾರ್ಜ್, ಕಡೂರು ಶಾಸಕ ಆನಂದ್ ಸೇರಿ, ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಗೋಪಾಲಸ್ವಾಮಿ, ಅರಕಲಗೂಡು ಪ್ರಸನ್ನ, ಸ್ಥಳೀಯ ಮುಖಂಡರು ಇದ್ದರು.