ಕೊಲ್ಲೂರು, ಕುಕ್ಕೆ ಕ್ಷೇತ್ರಗಳಿಗೂ ಅಭಿವೃದ್ಧಿ ಪ್ರಾಧಿಕಾರ ರಚನೆ: ರಾಮಲಿಂಗ ರೆಡ್ಡಿ

KannadaprabhaNewsNetwork |  
Published : Jun 25, 2025, 01:18 AM IST
24ರೆಡ್ಡಿ | Kannada Prabha

ಸಾರಾಂಶ

ಈಗಾಗಲೇ ಮಲೆಮಹದೇಶ್ವರ ಬೆಟ್ಟ, ಮೈಸೂರಿನ ಚಾಮುಂಡಿ ಬೆಟ್ಟ, ರೇಣುಕಾ ಎಲ್ಲಮ್ಮ, ಹುಲಿಯಮ್ಮ ದೇವಸ್ಥಾನ, ಘಾಟಿ ಸುಬ್ರಮಣ್ಯ ಕ್ಷೇತ್ರಗಳ ಅಭಿವೃದ್ಧಿಗಾಗಿ ಪ್ರಾಧಿಕಾರ ರಚನೆ ಮಾಡಲಾಗಿದೆ. ಅದೇ ರೀತಿ ಕೊಲ್ಲೂರು ಹಾಗೂ ಕುಕ್ಕೆ ಕ್ಷೇತ್ರಗಳ ಸಮಗ್ರ ಅಭಿವೃದ್ಧಿಗಾಗಿ ಪ್ರಾಧಿಕಾರ ರಚನೆ ಮಾಡುವ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದು ರಾಜ್ಯದ ಮುಜರಾಯಿ ಹಾಗೂ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ತಿಳಿಸಿದ್ದಾರೆ.

ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ

ಕನ್ನಡಪ್ರಭ ವಾರ್ತೆ ಕುಂದಾಪುರ

ಮುಜರಾಯಿ ಇಲಾಖೆಯ ಪ್ರಮುಖ ಧಾರ್ಮಿಕ ಕ್ಷೇತ್ರಗಳಾಗಿರುವ ಕೊಲ್ಲೂರು ಹಾಗೂ ಕುಕ್ಕೆ ಸುಬ್ರಮಣ್ಯ ಕ್ಷೇತ್ರಗಳಲ್ಲಿಯೂ ಅಭಿವೃದ್ಧಿ ಪ್ರಾಧಿಕಾರ ರಚನೆಯ ಪ್ರಸ್ತಾಪ ಇಲಾಖೆಯ ಮುಂದಿದೆ ಎಂದು ರಾಜ್ಯದ ಮುಜರಾಯಿ ಹಾಗೂ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ತಿಳಿಸಿದ್ದಾರೆ.ಮಂಗಳವಾರ ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿ ದರ್ಶನ ಪಡೆದ ಸಚಿವರು ನಂತರ ದೇವಳದ ಪ್ರಮುಖರ ಸಭೆಯಲ್ಲಿ ಮಾತನಾಡಿದರು.ಈಗಾಗಲೇ ಮಲೆಮಹದೇಶ್ವರ ಬೆಟ್ಟ, ಮೈಸೂರಿನ ಚಾಮುಂಡಿ ಬೆಟ್ಟ, ರೇಣುಕಾ ಎಲ್ಲಮ್ಮ, ಹುಲಿಯಮ್ಮ ದೇವಸ್ಥಾನ, ಘಾಟಿ ಸುಬ್ರಮಣ್ಯ ಕ್ಷೇತ್ರಗಳ ಅಭಿವೃದ್ಧಿಗಾಗಿ ಪ್ರಾಧಿಕಾರ ರಚನೆ ಮಾಡಲಾಗಿದೆ. ಅದೇ ರೀತಿ ಕೊಲ್ಲೂರು ಹಾಗೂ ಕುಕ್ಕೆ ಕ್ಷೇತ್ರಗಳ ಸಮಗ್ರ ಅಭಿವೃದ್ಧಿಗಾಗಿ ಪ್ರಾಧಿಕಾರ ರಚನೆ ಮಾಡುವ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದರು.ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಕೆಲವು ಸಮಸ್ಯೆಗಳಿದ್ದು, ಈ ಬಗ್ಗೆ ಜುಲೈನಲ್ಲಿ ವ್ಯವಸ್ಥಾಪನಾ ಸಮಿತಿ, ಶಾಸಕರು, ಮಾಜಿ ಶಾಸಕರು, ಅಧಿಕಾರಿಗಳನ್ನು ಬೆಂಗಳೂರಿಗೆ ಕರೆದು ಸಭೆ ನಡೆಸುತ್ತೇನೆ. ದೇಗುಲದ ಜಮೀನು ಪರಭಾರೆ, ಒತ್ತುವರಿಯಾಗಿದೆ, ಇದನ್ನು ತೆರವುಗೊಳಿಸುವ ಕುರಿತು ಸರ್ಕಾರ ಕಾನೂನು ಕ್ರಮಗಳನ್ನು ಕೈಗೊಳ್ಳುತ್ತಿದೆ. ಇಲ್ಲಿನ ಪಾರ್ಕಿಂಗ್ ಅವ್ಯವಸ್ಥೆ, ಒಳಚರಂಡಿ ಅವ್ಯವಸ್ಥೆಗಳ ಬಗ್ಗೆಯೂ ಬೆಂಗಳೂರಿನಲ್ಲಿ ಚರ್ಚಿಸಲಾಗುತ್ತದೆ. ದೇಗುಲದ ಅಭಿವೃದ್ಧಿಗೆ ಬೇಕಾದಷ್ಟು ಭೂಮಿಯ ಬಗ್ಗೆ ಕಂದಾಯ ಇಲಾಖೆಯ ಸಚಿವರೊಂದಿಗೆ ಮಾತನಾಡುತ್ತೇನೆ. ಇತರ ಕಾನೂನು ಕಾನೂನು ಹೋರಾಟಗಳಿಗೆ ಸರ್ಕಾರದ ಹೆಚ್ಚುವರಿ ಅಡ್ವಕೇಟ್ ಜನರಲ್ ಅವರ ಸಲಹೆ ಪಡೆಯಲಾಗುವುದು ಎಂದರು.ಶಾಸಕ ಗುರುರಾಜ್ ಗಂಟಿಹೊಳೆ ಮಾತನಾಡಿ, ಇಲ್ಲಿನ ಪಾರ್ಕಿಂಗ್ ಅವ್ಯವಸ್ಥೆ ಸೇರಿದಂತೆ ಹಲವು ಜ್ವಲಂತ ಸಮಸ್ಯೆಗಳಿದ್ದು ಅವುಗಳ ಪರಿಹಾರಕ್ಕೆ ಶಾಶ್ವತ ಕ್ರಮಗಳಾಗಬೇಕು. ನೃತ್ಯ ಸಂಗೀತ ಇತ್ಯಾದಿಗಳನ್ನು ಇಲ್ಲಿ ದೇವಿಗೆ ಸೇವೆಯ ರೂಪದಲ್ಲಿ ಇಲ್ಲಿ ಪ್ರದರ್ಶನ ನೀಡುವ ಸಂಪ್ರದಾಯವಿದ್ದು, ಇದಕ್ಕಾಗಿ ಸುಸಜ್ಜಿತ ಸಾಂಸ್ಕೃತಿಕ ಭವನ ನಿರ್ಮಾಣವಾಗಬೇಕು ಎಂದು ಮನವಿ ಮಾಡಿದರು.

ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಮಾತನಾಡಿ, ಬಡ ಮಕ್ಕಳಿಗೆ ವೈದ್ಯಕೀಯ ಶಿಕ್ಷಣ ದೊರಕಲು ಅನುಕೂಲವಾಗುವಂತೆ ದೇವಸ್ಥಾನದ ವತಿಯಿಂದ ವೈದ್ಯಕೀಯ ಕಾಲೇಜು ಆರಂಭಿಸಬೇಕು ಎಂದು ಸಲಹೆ ಮಾಡಿದರು.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ ತಗ್ಗರ್ಸೆ ಮಾತನಾಡಿ, ದೇಗುಲದಿಂದ ನಡೆಸಲ್ಪಡುವ ಐದು ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ಅವಕಾಶ ನೀಡಬೇಕು. ಸ್ವಚ್ಛತೆ ಹಾಗೂ ಇತರ ಮೂಲಭೂತ ಕಾರ್ಯಗಳ ಅನುಕೂಲಕ್ಕಾಗಿ ಹೊರ ಗುತ್ತಿಗೆ ನೌಕರರ ನೇಮಕಾತಿಗೆ ಅನುಮತಿ ನೀಡಬೇಕು. ಆನೆ ಬಾಗಿಲಿನಲ್ಲಿ ಶಿಲಾಮಯ ಸ್ವಾಗತ ಕಮಾನು ನಿರ್ಮಾಣ ಯೋಜನೆ ಇದೆ ಎಂದರು.ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಘುರಾಮ ದೇವಾಡಿಗ ಆಲೂರು, ಮಹಾಲಿಂಗ ನಾಯ್ಕ್, ಕೆ.ಸುಧಾ ಬೈಂದೂರು, ಮಾಜಿ ಸಚಿವ ಅಭಯಚಂದ್ರ ಜೈನ್, ರಾಜ್ಯ ಧಾರ್ಮಿಕ ಪರಿಷತ್ ಮಲ್ಲಿಕಾ ಪಕ್ಕಳಾ ಬಂಟ್ವಾಳ, ಉದ್ಯಮಿ ಶಂಕರ ಶೆಟ್ಟಿ ಬೆಂಗಳೂರು, ಪ್ರಮುಖರಾದ ದಿನೇಶ್ ಹೆಗ್ಡೆ ಮೊಳಹಳ್ಳಿ, ಉದಯ್‌ಕುಮಾರ ಶೆಟ್ಟಿ ಮುನಿಯಾಲ್, ರಾಜು ಎಸ್ ಪೂಜಾರಿ, ಎಸ್.ಪ್ರಕಾಶ್ಚಂದ್ರ ಶೆಟ್ಟಿ ಕಂಬದಕೋಣೆ, ಪ್ರದೀಪ್‌ಕುಮಾರ ಶೆಟ್ಟಿ ಗುಡಿಬೆಟ್ಟು, ಅರವಿಂದ್ ಪೂಜಾರಿ ಪಡುಕೋಣೆ, ಕಿರಣ್ ಹೆಗ್ಡೆ ಅಂಪಾರು. ಮೋಹನ್ ಪೂಜಾರಿ ಉಪ್ಪುಂದ, ಅಣ್ಣಪ್ಪ ಶೆಟ್ಟಿ ಕಾಲ್ತೋಡು, ಜಗದೀಶ್ ದೇವಾಡಿಗ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೋಳಿ ಸಂಭ್ರಮದಲ್ಲಿ ಮಿಂದೆದ್ದ ಬೆಂಗಳೂರಿನ ಯುವ ಸಮೂಹ
ಕನ್ನಡಪ್ರಭ- ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಪ್ರತಿಷ್ಠಿತ ಯುಗಾದಿ ಪುರಸ್ಕಾರ ಪ್ರಕಟ