ಮಳೆ ಕೊರತೆ ಕಾರಣದಿಂದಾಗಿ ಈಗಾಗಲೇ ಕೆಆರ್‌ಎಸ್‌ ಜಲಾಶಯದಲ್ಲಿ ವಾಡಿಕೆಗಿಂತ ಕಡಿಮೆ ನೀರು ಸಂಗ್ರಹವಾಗಿದೆ. ಅದರ ಬೆನ್ನಲ್ಲೇ ಗಾಯದ ಮೇಲೆ ಬರೆ ಎಳೆದಂತೆ ತಮಿಳುನಾಡಿಗೆ ಕಾವೇರಿ ನೀರು ಹರಿಸುವ ಆದೇಶ ನೀಡಲಾಗಿತ್ತು

ಬೆಂಗಳೂರು : ಮಳೆ ಕೊರತೆ ಕಾರಣದಿಂದಾಗಿ ಈಗಾಗಲೇ ಕೆಆರ್‌ಎಸ್‌ ಜಲಾಶಯದಲ್ಲಿ ವಾಡಿಕೆಗಿಂತ ಕಡಿಮೆ ನೀರು ಸಂಗ್ರಹವಾಗಿದೆ. ಅದರ ಬೆನ್ನಲ್ಲೇ ಗಾಯದ ಮೇಲೆ ಬರೆ ಎಳೆದಂತೆ ತಮಿಳುನಾಡಿಗೆ ಕಾವೇರಿ ನೀರು ಹರಿಸುವ ಆದೇಶ ನೀಡಲಾಗಿದ್ದು, ಜಲಾಶಯದ ನೀರಿನ ಕೊರತೆ ಮತ್ತಷ್ಟು ಹೆಚ್ಚಾಗಿ ಬೆಂಗಳೂರು ಸೇರಿ ಕಾವೇರಿ ಅವಲಂಬಿತ ನಗರ, ಪಟ್ಟಣಗಳಿಗೆ ಬೇಸಿಗೆಗೂ ಮುನ್ನವೇ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಲಕ್ಷಣಗಳು ಗೋಚರಿಸುತ್ತಿದೆ.

ಸೂಪರ್‌ ಎಲ್‌ನಿನೋ ಪರಿಣಾಮ

ಸೂಪರ್‌ ಎಲ್‌ನಿನೋ ಪರಿಣಾಮ ಈ ಬಾರಿ ರಾಜ್ಯದೆಲ್ಲೆಡೆ ತೀವ್ರ ಮಳೆ ಕೊರತೆ ಕಾಣಿಸಿಕೊಂಡಿದೆ. ಅದರ ಪರಿಣಾಮ ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ನೀರಿನ ಅಭಾವ ಉಂಟಾಗಿದೆ. ಪ್ರಮುಖವಾಗಿ ಕೆಆರ್‌ಎಸ್‌ ಜಲಾಶಯ ಈವರೆಗೆ ಶೇ.34ರಷ್ಟು ಮಾತ್ರ ಭರ್ತಿಯಾಗಿದೆ. ಸದ್ಯ ಮಳೆ ಕೊರತೆ ಮತ್ತಷ್ಟು ಹೆಚ್ಚಲಿದ್ದು, ಅದರಿಂದ ನೀರಿನ ಶೇಖರಣೆ ಪ್ರಮಾಣ ಕಡಿಮೆಯಾಗಲಿದೆ. ಅದರ ಜತೆಗೆ ಇದೀಗ ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ 3000 ಕ್ಯುಸೆಕ್ಸ್‌ನಂತೆ ಒಟ್ಟು 4.5 ಟಿಎಂಸಿ ನೀರು ಬಿಡುಗಡೆಗೆ ಕಾವೇರಿ ನೀರು ನಿಯಂತ್ರಣ ಸಮಿತಿ ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಗಳು ಆದೇಶಿಸಿವೆ. ಇದು ರಾಜ್ಯದ ಕುಡಿಯುವ ಉದ್ದೇಶಕ್ಕೆ ನೀರು ಸಂಗ್ರಹಿಸುವುದೂ ಕಷ್ಟ ಎನ್ನುವಂತಾಗುತ್ತಿದೆ.

ನಗರ ಮತ್ತು ಪಟ್ಟಣಗಳಿಗೆ ಕುಡಿಯುವುದಕ್ಕೆ ನೀರು ಪೂರೈಕೆ

ಕಾವೇರಿ ನದಿಯಿಂದ ಬೆಂಗಳೂರು, ಮೈಸೂರು, ಮಂಡ್ಯ ಸೇರಿ ಇನ್ನಿತರ ನಗರ ಮತ್ತು ಪಟ್ಟಣಗಳಿಗೆ ಕುಡಿಯುವುದಕ್ಕೆ ನೀರು ಪೂರೈಕೆ ಮಾಡಲಾಗುತ್ತಿದೆ. ಬೆಂಗಳೂರಿಗೇ ವಾರ್ಷಿಕ 29 ಟಿಎಂಸಿ ಅಡಿಗಳಷ್ಟು ನೀರು ಬೇಕಾಗಲಿದ್ದು, ಉಳಿದಂತೆ ಪ್ರತಿ ತಿಂಗಳು ಅಂದಾಜು 3ರಿಂದ 4 ಟಿಎಂಸಿ ನೀರಿನ ಅವಶ್ಯಕತೆಯಿದೆ. ಒಟ್ಟಾರೆ ವಾರ್ಷಿಕ 40 ಟಿಎಂಸಿ ಅಡಿಗಳಷ್ಟು ನೀರು ಬೇಕಾಗುತ್ತದೆ. ಅದರಂತೆ 2026-27ನೇ ಸಾಲಿನಲ್ಲಿ ಈಗಾಗಲೇ ನಾಲ್ಕು ತಿಂಗಳು ಕಳೆದಿದ್ದು, ಮುಂದಿನ ಮಾರ್ಚ್‌ವರೆಗೆ 33 ಟಿಎಂಸಿ ಅಡಿ ನೀರಿನ ಅವಶ್ಯಕತೆಯಿದೆ.

ಜು.30ರವರೆಗೆ ಕೆಆರ್‌ಎಸ್‌ನಲ್ಲಿ 17.25 ಟಿಎಂಸಿ ಅಡಿಗಳಷ್ಟು ನೀರು ಶೇಖರಣೆಯಾಗಿದ್ದು, ಅದರಲ್ಲಿ ಡೆಡ್‌ ಸ್ಟೋರೇಜ್‌ ಹೊರತುಪಡಿಸಿದರೆ 8.87 ಟಿಎಂಸಿ ಅಡಿಗಳಷ್ಟು ನೀರು ಬಳಕೆ ಮಾಡಬಹುದಾಗಿದೆ. ಉಳಿದಂತೆ ಹೇಮಾವತಿಯಲ್ಲಿ 24.59 ಟಿಎಂಸಿ ಅಡಿ ನೀರು ಶೇಖರಣೆಯಿದ್ದು, 20.22 ಟಿಎಂಟಿ ಅಡಿ ಬಳಕೆ ಮಾಡಬಹುದು. ಹಾರಂಗಿಯಲ್ಲಿ 8.09 ಟಿಎಂಸಿ ಅಡಿ ನೀರು ಶೇಖರಣೆಯಿದ್ದು, 7.34 ಟಿಎಂಸಿ ಅಡಿ ಬಳಕೆ ಹಾಗೂ ಕಬಿನಿಯಲ್ಲಿ 15.39 ಟಿಎಂಸಿ ಅಡಿ ನೀರಿದ್ದು, 5.58 ಟಿಎಂಸಿ ಅಡಿ ನೀರು ಬಳಸಬಹುದಾಗಿದೆ. ಒಟ್ಟಾರೆ ನಾಲ್ಕೂ ಜಲಾಶಯಗಳಲ್ಲಿ 65.32 ಟಿಎಂಸಿ ಅಡಿ ನೀರು ಶೇಖರಣೆಯಾಗಿದ್ದು, 42.01 ಟಿಎಂಸಿ ಅಡಿಗಳಷ್ಟನ್ನು ಬಳಕೆ ಮಾಡಬಹುದು.

ಸದ್ಯದ ಅಂಕಿ-ಅಂಶಗಳನ್ನು ನೋಡಿದರೆ ನೀರಿನ ಸಮಸ್ಯೆ ಎದುರಾಗುವುದಿಲ್ಲ. ಆದರೆ, ಪ್ರತಿವರ್ಷ ಜಲಾಶಯಗಳಿಂದ ಬಿಸಿಲಿಗೆ ಆವಿಯಾಗುವುದು, ಸೋರಿಕೆಯಿಂದ ಅಂದಾಜು 10 ಟಿಎಂಸಿ ಅಡಿಗಳಷ್ಟು ನೀರು ಕಡಿಮೆಯಾಗುತ್ತದೆ. ಹೀಗಾಗಿ 42.01 ಟಿಎಂಸಿ ಅಡಿಗಳಷ್ಟು ನೀರಿದ್ದರೂ ಮಳೆ ಕೊರತೆಯಾಗಿ ನೀರಿನ ಪ್ರಮಾಣ ಹೆಚ್ಚಾಗದಿದ್ದರೆ ಸುಮಾರು 30 ಟಿಎಂಸಿ ಅಡಿಗಳಷ್ಟು ಮಾತ್ರ ಬಳಕೆ ಮಾಡಬಹುದು. ಅಷ್ಟೂ ನೀರನ್ನು ಕುಡಿಯುವ ಉದ್ದೇಶಕ್ಕಾಗಿಯೇ ಬಳಕೆ ಮಾಡಬೇಕಿದ್ದು, ಕೃಷಿ ಸೇರಿ ಬೇರೆ ಉದ್ದೇಶಕ್ಕೆ ಬಳಕೆ ಮಾಡಲು ಸಾಧ್ಯವಾಗುವುದಿಲ್ಲ.

ಇನ್ನು, ಕಾವೇರಿ ನೀರು ನಿಯಂತ್ರಣ ಸಮಿತಿ ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಗಳ ಆದೇಶದಂತೆ ತಮಿಳುನಾಡಿಗೆ ನೀರು ಹರಿಸಿದರೆ ನೀರಿನ ಪ್ರಮಾಣ 30 ಟಿಎಂಸಿ ಅಡಿಗಳಿಗಿಂತ ಕಡಿಮೆ ಉಳಿಯಲಿದೆ. ಇದು ಬೆಂಗಳೂರು ಸೇರಿ ಇತರ ನಗರಗಳಿಗೆ ಅವಶ್ಯಕತೆಯಿರುವ ನೀರಿನ ಪ್ರಮಾಣಕ್ಕಿಂತ ಕಡಿಮೆಯಾಗಲಿದ್ದು, ಬೇಸಿಗೆ ಅವಧಿಯಲ್ಲಿ ನೀರಿನ ಸಮಸ್ಯೆ ಉಲ್ಬಣವಾಗುವ ಸಾಧ್ಯತೆಯಿದೆ.