ಯಾದಗಿರಿಯಲ್ಲಿ ಈಗೇನೂ ಆಗೋಲ್ಲ, ಮುಂದೆ ಬದುಕೋದಿಲ್ಲ!

KannadaprabhaNewsNetwork |  
Published : Jun 25, 2025, 01:18 AM IST
ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದ ನೋಟ. | Kannada Prabha

ಸಾರಾಂಶ

ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿನ ಕೆಮಿಕಲ್‌- ತ್ಯಾಜ್ಯ ಕಂಪನಿಗಳಿಂದ ಜನಜೀವನದ ಆರೋಗ್ಯದ ಮೇಲುಂಟಾಗುತ್ತಿರುವ ವ್ಯತಿರಿಕ್ತ ಪರಿಣಾಮಗಳ ಕುರಿತು ಆರೋಗ್ಯ ಇಲಾಖೆ ವೈದ್ಯಾಧಿಕಾರಿಗಳು ಜಿಲ್ಲಾಡಳಿತಕ್ಕೆ ವಾಸ್ತವ ವರದಿ ನೀಡುವಲ್ಲಿ ಹಿಂದೇಟು ಹಾಕಿದರೇ? ಜನರು ರೋಗದಿಂದ ಅನುಭವಿಸುತ್ತಿರುವ ನರಕಸದೃಷ ವಾತಾವರಣದ ಚಿತ್ರಣ ಮರೆಮಾಚಿ, ‘ಎಲ್ಲೆಡೆ ಚೆನ್ನಾಗಿದೆ,

ಕಂಪನಿ ವಿಷಗಾಳಿಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ । ಕೆಮಿಕಲ್‌ ಕಂಪನಿಗಳಿಗೆ ಪೂರಕವಾದ ವೈದ್ಯರ ವರದಿ? ಕನ್ನಡಪ್ರಭ ವಾರ್ತೆ ಯಾದಗಿರಿ

ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿನ ಕೆಮಿಕಲ್‌- ತ್ಯಾಜ್ಯ ಕಂಪನಿಗಳಿಂದ ಜನಜೀವನದ ಆರೋಗ್ಯದ ಮೇಲುಂಟಾಗುತ್ತಿರುವ ವ್ಯತಿರಿಕ್ತ ಪರಿಣಾಮಗಳ ಕುರಿತು ಆರೋಗ್ಯ ಇಲಾಖೆ ವೈದ್ಯಾಧಿಕಾರಿಗಳು ಜಿಲ್ಲಾಡಳಿತಕ್ಕೆ ವಾಸ್ತವ ವರದಿ ನೀಡುವಲ್ಲಿ ಹಿಂದೇಟು ಹಾಕಿದರೇ? ಜನರು ರೋಗದಿಂದ ಅನುಭವಿಸುತ್ತಿರುವ ನರಕಸದೃಷ ವಾತಾವರಣದ ಚಿತ್ರಣ ಮರೆಮಾಚಿ, ‘ಎಲ್ಲೆಡೆ ಚೆನ್ನಾಗಿದೆ, ಇದೆಲ್ಲವೂ ಸಹಜ’ ಎಂಬ ವರದಿ ನೀಡಿ, ಜಿಲ್ಲಾಧಿಕಾರಿಗಳಿಗೇ ತಪ್ಪು ಮಾಹಿತಿ ನೀಡಿದರೇ ಎಂಬ ಪ್ರಶ್ನೆಗಳು ಈ ಭಾಗದ ಸಂತ್ರಸ್ತರನ್ನು ಕಾಡುತ್ತಿವೆ.

ತಿಂಗಳ ಹಿಂದೆ, ಜಿಲ್ಲಾಧಿಕಾರಿ ಡಾ.ಸುಶೀಲಾ ಅವರ ನಿರ್ದೇಶನದಂತೆ ರಚಿತಗೊಂಡ, ಸಹಾಯಕ ಆಯುಕ್ತರ ನೇತೃತ್ವದ ಸಮಿತಿಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ ಶೆಟ್ಟಿಹಳ್ಳಿಯಲ್ಲಿ ಜನರ ತಪಾಸಣೆ ಶಾಸ್ತ್ರ ನಡೆಸಿತ್ತು. ಇನ್ನುಳಿದ ಕಡೆಗಳಲ್ಲಿ ಸ್ಥಳೀಯ ಸಿಬ್ಬಂದಿ ಮೂಲಕ ಮಾಹಿತಿ ಪಡೆದಿದ್ದರೆನ್ನಲಾದ ವೈದ್ಯರ ತಂಡ, ನಾಮಕಾವಸ್ತೆಗೆ ವರದಿ ನೀಡಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಕ್ಯಾನ್ಸರ್‌, ಶ್ವಾಸಕೋಶ, ಉಸಿರಾಟದ ಸಮಸ್ಯೆ, ಕಿಡ್ನಿ ಕಾಯಿಲೆ, ಗರ್ಭಿಣಿ ಹಾಗೂ ನವಜಾತ ಶಿಶುಗಳ ಗಂಭೀರತೆ, ಚರ್ಮ ಸಂಬಂಧೀ ಕಾಯಿಲೆಗಳು ಸೇರಿದಂತೆ ಅನೇಕಗಳಿಗೆ ಹೊರಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ, ಅಂತಹ ಗಂಭೀರತೆ ಇಲ್ಲಿ ಕಂಡುಬರುತ್ತಿಲ್ಲ ಎಂಬ ವೈದ್ಯರ ಹೇಳಿಕೆಗಳು ಅಚ್ಚರಿ ಮೂಡಿಸುತ್ತಿವೆ. ಹೊರಗಿನ, ಮೂರನೇ ತಂಡದಿಂದ ಈ ಭಾಗದ ಜನರ ಆರೋಗ್ಯದ ಮೇಲಾಗುತ್ತಿರುವ ಪರಿಣಾಮಗಳ ಕುರಿತು ಆಳವಾದ ತಪಾಸಣೆ ಅಧ್ಯಯನ ನಡೆದರೆ ಮುಂದಿನ ಪೀಳಿಗೆಗೆ ಅನುಕೂಲವಾಗಲಿದೆ ಎಂಬುದು ಇಲ್ಲಿನವರ ಅಂಬೋಣ.

ಇಲ್ಲಿ ಸ್ಥಾಪಿತವಾದ ಬಹುತೇಕ ರಾಸಾಯನಿಕ ಕಂಪನಿಗಳು ಯಥೇಚ್ಛವಾಗಿ ಹೊರ ಹಾಕುತಿರುವ ವಿಷ ತ್ಯಾಜ್ಯಗಳಿಂದ ಮಕ್ಕಳಲ್ಲಿ ಚರ್ಮ ತುರಿಕೆ, ಕಣ್ಣಿನ ತೊಂದರೆ, ವೃದ್ಧರಿಗೆ ಉಸಿರಾಟದ ತೊಂದರೆ ಹಾಗೂ ಮಹಿಳೆಯರ ಮೇಲೆ ಅನೇಕ ತೊಂದರೆಗಳು ಆಗುತ್ತಿವೆ. ಈ ಬಗ್ಗೆ ಮಾಧ್ಯಮಗಳ ಮೂಲಕ ಜನರು ಧ್ವನಿ ಹೆಚ್ಚಾದಾಗ ವೈದ್ಯರ ತಂಡ ಕಾಟಾಚಾರಕ್ಕೆ ಕೇವಲ ಶೆಟ್ಟಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಇಲ್ಲಿ ಅತಂಹ ಯಾವುದೇ ದೊಡ್ಡ ಸಮಸ್ಯೆ ಕಂಡು ಬಂದಿಲ್ಲ, ಮುಂದೆ ಬರಬಹುದು ಎಂದು ಕೆಲ ವೈದ್ಯರು ತಿಳಿಸಿದ್ದಾರೆ. ದಯವಿಟ್ಟು ನಮ್ಮ ಜಿಲ್ಲಾಧಿಕಾರಿಗಳು ಇವುಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತಾರೆ ಎಂದು ನಂಬಿದೆವೆ.

ಓಂಕಾರ ತಿವಾರಿ, ಸೈದಾಪುರ.

ಕಡೇಚೂರು-ಬಾಡಿಯಾಳ ಕೈಗಾರಿಕೆ ಪ್ರದೇಶದಲ್ಲಿ ಸ್ಥಾಪಿತವಾಗಿರುವ ರಾಸಾಯನಿಕ ಕಂಪನಿಗಳು ಮತ್ತು ಘನ ತ್ಯಾಜ್ಯ ವಿಲೇವಾರಿ ಘಟಕಗಳು ರಾತ್ರಿ ಮತ್ತು ಮಳೆ ಬಂದ ವೇಳೆಯಲ್ಲಿ ನಿಯಮಬಾಹಿರವಾಗಿ ವಿಷಗಾಳಿಯನ್ನು ಪರಿಸರಕ್ಕೆ ಮತ್ತು ದ್ರವ ರೂಪದ ತ್ಯಾಜ್ಯವನ್ನು ಹಳ್ಳ-ಕೊಳ್ಳಗಳಿಗೆ ಬಿಡುತ್ತಿವೆ. ಜನರಿಗೆ, ಪ್ರಾಣಿ-ಪಕ್ಷಿಗಳಿಗೆ ಮಾರಕವಾಗಿರುವ ಕಂಪನಿಗಳನ್ನು ಇಲ್ಲಿಂದ ತೆಗೆಸಲು ಇಲ್ಲಿರುವ ಎಲ್ಲ ಗ್ರಾಮಗಳ ರೈತರು, ಯುವಕರು ಮತ್ತು ಮಹಿಳೆಯರು ಒಗ್ಗಟ್ಟಾಗಿ ಹೋರಾಟ ನಡೆಸಬೇಕಿದೆ.

ರಾಘವೇಂದ್ರ ಕಲಾಲ್, ಸೈದಾಪುರ.

ನಮ್ಮ ಭಾಗದ ರೈತರು ಮಳೆಯಧಾರಿತ ಕೃಷಿ ಮಾಡುತ್ತಾರೆ, ಮಳೆ ಬಾರದಿದ್ದರೆ ದೂರದ ಬೆಂಗಳೂರು, ಪುಣೆ ಮತ್ತು ಮುಂಬೈ ಮಹಾನಗರಗಳಿಗೆ ಗುಳೆ ಹೋಗುತ್ತಾರೆ, ಇದನ್ನು ತಪ್ಪಿಸಲು ಉದ್ಯೋಗ ಆಧಾರಿತ ಕೈಗಾರಿಗೆಳನ್ನು ಸ್ಥಾಪನೆ ಮಾಡುತ್ತೆವೆ ಎಂದು ಇಲ್ಲಿನ ಜನರಿಗೆ ನಂಬಿಸಿದ ಸರ್ಕಾರ, ತೆಲಾಂಗಣ ರಾಜ್ಯದ ಜನರಿಗೆ ವಿಷ ಉಣಿಸಿದ ಕಂಪನಿಗಳಿಗೆ ಕೆಂಪು ಹಾಸು ಹಾಕಿ, ಸ್ವಾಗತಿಸಿ ನಾವು ಈ ಭಾಗದ ಅಭಿವೃದ್ಧಿಗೆ ಕೈಗಾರಿಕೆಗಳನ್ನು ಸ್ಥಾಪಿಸಿದ್ದೇವೆ ಎಂದು ಬೆನ್ನುತಟ್ಟಿಕೊಳ್ಳುವ ನಾಯಕರು ಜನರಿಗೆ ವಿಷವನ್ನು ನೀಡುತ್ತಿದ್ದಾರೆ. ಕಲ್ಯಾಣ ಕರ್ನಾಟಕದ ಪ್ರತಿಯೊಬ್ಬರೂ ವಿಚಾರ ಕ್ರಾಂತಿ ಮಾಡಬೇಕಾದ ಅನಿವಾರ್ಯ ಈಗ ಇದೆ.

ಮಲ್ಲಿಕಾರ್ಜುನ ಬಳೆ, ಸೈದಾಪುರ

PREV

Recommended Stories

ಸೆಂಚುರಿ ಕ್ಲಬ್‌ ಸೇರಿಯೇ ಬಿಟ್ಟಿತು ಸು ಫ್ರಂ ಸೋ
ಶ್ರೀಕೃಷ್ಣನೆಂಬ ನಿತ್ಯ ಸತ್ಯನಿಗೆ ಜನ್ಮಾಷ್ಟಮೀ