ಹಾನಗಲ್ಲ: ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ಶಾಸಕರು- ಸಂಸದರು ಒಟ್ಟಾಗಿ ಕೆಲಸ ಮಾಡಿದಾಗ ಮಾತ್ರ ಅಭಿವೃದ್ಧಿಯಲ್ಲಿ ನಿರೀಕ್ಷಿತ ಯಶಸ್ಸು ಸಾಧಿಸಲು ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ರಾಜ್ಯದಲ್ಲಿ ಬರ ಘೋಷಣೆ ಹಾಗೂ ಪರಿಹಾರ ವಿತರಣೆ ವಿಷಯದಲ್ಲಿ ಸರ್ಕಾರವು ವಿಳಂಬ ನೀತಿ ಅನುಸರಿಸುತ್ತಿದೆ. ಕೃಷಿ ಹಾಗೂ ಬೆಳೆ ನಷ್ಟದಂಥ ತುರ್ತು ಸಂದರ್ಭಗಳಲ್ಲಿ ರೈತರಿಗೆ ಕೂಡಲೇ ಸ್ಪಂದಿಸಿ, ರಾಜಕೀಯವನ್ನು ಬದಿಗಿಟ್ಟು ತ್ವರಿತವಾಗಿ ಪರಿಹಾರ ಅನುದಾನ ಒದಗಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.
ನೂತನವಾಗಿ ಉದ್ಘಾಟನೆಗೊಂಡಿರುವ ಆಯುಷ್ಮಾನ್ ಆರೋಗ್ಯ ಕೇಂದ್ರವು ಸ್ಥಳೀಯ ಜನರಿಗೆ ಉತ್ತಮ ಗುಣಮಟ್ಟದ ವೈದ್ಯಕೀಯ ಸೇವೆಯನ್ನು ಒದಗಿಸಲಿ ಎಂದು ಹಾರೈಸಿದರು.ಮನುಷ್ಯನಿಗೆ ಆರೋಗ್ಯ ಅತ್ಯಂತ ಅಗ್ರಗಣ್ಯವಾದದ್ದು. ಬದುಕಿನಲ್ಲಿ ಎಷ್ಟೇ ಭಾಗ್ಯಗಳಿದ್ದರೂ ಆರೋಗ್ಯವಿಲ್ಲದಿದ್ದರೆ ಜೀವನ ಬಹಳ ಕಷ್ಟವಾಗುತ್ತದೆ. ಗ್ರಾಮೀಣ ಭಾಗದ ಜನರಿಗೆ ಸ್ಥಳೀಯ ಮಟ್ಟದಲ್ಲೇ ಉತ್ತಮ ಪ್ರಾಥಮಿಕ ಚಿಕಿತ್ಸೆ ಲಭ್ಯವಾಗಬೇಕು ಎಂಬ ಉದ್ದೇಶದಿಂದ ಈ ಆರೋಗ್ಯ ಕೇಂದ್ರವನ್ನು ಆರಂಭಿಸಲಾಗಿದೆ. ಗ್ರಾಮಸ್ಥರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಶಾಸಕ, ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಶ್ರೀನಿವಾಸ ಮಾನೆ ಮಾತನಾಡಿ, ಕೊಪ್ಪರಸಿಕೊಪ್ಪ, ಯಳವಟ್ಟಿ, ನಿಟಗಿನಕೊಪ್ಪ, ಕರಗುದರಿ, ಅಕ್ಕಿಆಲೂರು, ನೀರಲಗಿ ಮ ಆಡೂರು ಗ್ರಾಮಗಳಲ್ಲಿ ಆಯುಷ್ಮಾನ್ ಆರೋಗ್ಯ ಕೇಂದ್ರದ ಕಟ್ಟಡ ನಿರ್ಮಿಸಲಾಗುತ್ತಿದೆ. ತಾಲೂಕಿನ ಗ್ರಾಮೀಣ ಭಾಗದ ಜನತೆಗೆ ತ್ವರಿತಗತಿಯಲ್ಲಿ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ಸ್ಥಳೀಯವಾಗಿ ಪ್ರಾಥಮಿಕ ಚಿಕಿತ್ಸೆ ದೊರಕಿಸುವ ಪ್ರಯತ್ನ ಮಾಡಲಾಗುತ್ತಿದೆ. ಹರವಿ ಗ್ರಾಮದಲ್ಲಿ ಆರೋಗ್ಯ ಮಂದಿರ ನಿರ್ಮಾಣವಾಗಿರುವುದರಿಂದ ಸುತ್ತಲಿನ ಗ್ರಾಮಸ್ಥರಿಗೆ ಅನುಕೂಲವಾಗಲಿದೆ. ಮಂದಿರಕ್ಕೆ ಅಗತ್ಯ ರಸ್ತೆ ನಿರ್ಮಾಣಕ್ಕೆ ₹೨೫ ಲಕ್ಷ ಅನುದಾನ ಸಹ ಬಿಡುಗಡೆ ಮಾಡಲಾಗಿದೆ ಎಂದರು.