ಕಾಂಗ್ರೆಸ್ಸೇತರ ಸರ್ಕಾರ ಬಂದ ಮೇಲೆ ಅಭಿವೃದ್ಧಿ ಆರಂಭಗೊಂಡಿದೆ: ಟಿ.ಡಿ.ಮೇಘರಾಜ್

KannadaprabhaNewsNetwork | Published : Jun 30, 2025 12:35 AM

ಅಭಿವೃದ್ಧಿ ಮತ್ತು ವಿಚಾರಧಾರೆಗೆ ಒತ್ತು ನೀಡಿ ಭಾರತವನ್ನು ವಿಶ್ವದ ಅತಿದೊಡ್ಡ ಆರ್ಥಿಕ ಶಕ್ತಿಯಾಗಿಸುವ ಸಂಕಲ್ಪದಿಂದ ಪ್ರಧಾನಿ ನರೇಂದ್ರ ಮೋದಿಯವರು ಹನ್ನೊಂದು ವರ್ಷಗಳಿಂದ ಯಶಸ್ವಿಯಾಗಿ ದೇಶವನ್ನು ಮುನ್ನಡೆಸುತ್ತಿದ್ದಾರೆ ಎಂದು ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಹೇಳಿದರು.

ಕನ್ನಡಪ್ರಭ ವಾರ್ತೆ ಸಾಗರ

ಅಭಿವೃದ್ಧಿ ಮತ್ತು ವಿಚಾರಧಾರೆಗೆ ಒತ್ತು ನೀಡಿ ಭಾರತವನ್ನು ವಿಶ್ವದ ಅತಿದೊಡ್ಡ ಆರ್ಥಿಕ ಶಕ್ತಿಯಾಗಿಸುವ ಸಂಕಲ್ಪದಿಂದ ಪ್ರಧಾನಿ ನರೇಂದ್ರ ಮೋದಿಯವರು ಹನ್ನೊಂದು ವರ್ಷಗಳಿಂದ ಯಶಸ್ವಿಯಾಗಿ ದೇಶವನ್ನು ಮುನ್ನಡೆಸುತ್ತಿದ್ದಾರೆ ಎಂದು ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಹೇಳಿದರು.

ಪಟ್ಟಣದ ಡಿಎಸ್ಎಸ್ ಸಭಾಭವನದಲ್ಲಿ ಬಿಜೆಪಿ ನಗರ ಮಂಡಲ ವತಿಯಿಂದ ಆಯೋಜಿಸಲಾಗಿದ್ದ ವಿಕಸಿತ ಭಾರತ ಸಂಕಲ್ಪ ಅಭಿಯಾನದಲ್ಲಿ ಮಾತನಾಡಿದ ಅವರು, ಅನೇಕ ವರ್ಷಗಳ ಕಾಲ ಕಾಂಗ್ರೆಸ್ ಪಕ್ಷ ಗರೀಭಿ ಹಟಾವೋ ಎಂದು ಹೇಳುತ್ತಾ ದೇಶದ ಆಡಳಿತ ನಡೆಸಿತ್ತು. ಆದರೆ ಬಡತನ ನಿವಾರಣೆಯಾಗಿಲ್ಲ, ಕಾಂಗ್ರೆಸ್ಸೇತರ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಅಭಿವೃದ್ಧಿಪರ್ವ ಆರಂಭಗೊಂಡಿದೆ ಎಂದರು.

ಕಳೆದ ೧೧ ವರ್ಷದಲ್ಲಿ ದೇಶದಲ್ಲಿ ಹಣದುಬ್ಬರ ಕಡಿಮೆಯಾಗಿದೆ. ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯಾಗಿದೆ. ಒಂದು ಕಾಲದಲ್ಲಿ ಬಂದೂಕಿನ ನಳಿಗೆ ಕೆಳಗೆ ಮತದಾನ ನಡೆಯುತ್ತಿತ್ತು. ಈಗ ಪರಿಸ್ಥಿತಿ ಬದಲಾಗಿದ್ದು ಪಾರದರ್ಶಕ ಚುನಾವಣೆ ನಡೆಯುತ್ತಿದೆ. ದೇಶದಲ್ಲಿ ಪ್ರಜಾಪ್ರಭುತ್ವದ ಬೇರು ಗಟ್ಟಿಯಾಗಿದೆ. ೨೦೪೭ಕ್ಕೆ ವಿಕಸಿತ ಭಾರತ ವಿಶ್ವಕ್ಕೆ ನೇತೃತ್ವ ವಹಿಸಲಿದೆ. ಪ್ರಧಾನಿ ನರೇಂದ್ರ ಮೋದಿಯವರ ಸಮರ್ಥ ಆಡಳಿತ ದೇಶವನ್ನು ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದೆ. ಪಕ್ಷದ ಕಾರ್ಯಕರ್ತರು ಕೇಂದ್ರ ಸರ್ಕಾರದ ಸಾಧನೆಯನ್ನು ಮನೆಮನೆಗೆ ತಲುಪಿಸುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್ ಮಾತನಾಡಿ, ಕಳೆದ ೧೧ ವರ್ಷದಲ್ಲಿ ಭಾರತದ ಭವಿಷ್ಯ ಉಜ್ವಲವಾಗಿದೆ. ಹಿಂದೆ ಕಾಂಗ್ರೆಸ್ ಸರ್ಕಾರದ ಆಳ್ವಿಕೆ ಸಂದರ್ಭದಲ್ಲಿ ಭಾರತ ವಿಶ್ವದ ಎದುರು ಗುರುತಿಸಿಕೊಳ್ಳುವುದು ಕಷ್ಟವಾಗಿತ್ತು. ಇದೀಗ ಇಡೀ ವಿಶ್ವ ಭಾರತವನ್ನು ವಿಶೇಷವಾಗಿ ಗುರುತಿಸುತ್ತಿದ್ದು, ಇದಕ್ಕೆ ನರೇಂದ್ರ ಮೋದಿಯವರ ಸಮರ್ಥ ಆಡಳಿತವೇ ಕಾರಣವಾಗಿದೆ ಎಂದರು.

ಬಿಜೆಪಿ ನಗರ ಮಂಡಲ ಅಧ್ಯಕ್ಷ ಕೆ.ಆರ್.ಗಣೇಶ್ ಪ್ರಸಾದ್ ಮಾತನಾಡಿ, ಗುಜರಾತ್ ಮುಖ್ಯಮಂತ್ರಿಯಾಗಿ ೧೫ ವರ್ಷ, ದೇಶದ ಪ್ರಧಾನಿಯಾಗಿ ೧೧ ವರ್ಷಗಳ ಕಾಲ ನರೇಂದ್ರ ಮೋದಿಯವರು ಒಂದು ಕಪ್ಪುಚುಕ್ಕೆ ಇಲ್ಲದಂತೆ ಆಡಳಿತ ನಡೆಸಿದ್ದಾರೆ. ಬಿಜೆಪಿಗೆ ಪಕ್ಷಕ್ಕಿಂತ ದೇಶ ಮುಖ್ಯ. ಆದರೆ ಕಾಂಗ್ರೆಸ್ ಪಕ್ಷಕ್ಕೆ ಮೊದಲು ಕುಟುಂಬ, ನಂತರ ಪಕ್ಷ, ಕೊನೆಗೆ ದೇಶ. ಬಿಜೆಪಿ ಅನೇಕ ಜನಪರ ಕಾರ್ಯಕ್ರಮ ಮಾಡಿಕೊಂಡು ಬರುತ್ತದೆ. ಆದರೆ ಕಾಂಗ್ರೆಸ್ ಪಕ್ಷಕ್ಕೆ ಮತವೇ ಮುಖ್ಯವಾಗಿದೆ. ಅಭಿವೃದ್ಧಿ ಮೂಲಕ ದೇಶವನ್ನು ಮುನ್ನಡೆಸಿದ ಕೀರ್ತಿ ನರೇಂದ್ರ ಮೋದಿಯವರದ್ದು ಎಂದು ಹೇಳಿದರು.

ನಗರಸಭೆ ಉಪಾಧ್ಯಕ್ಷೆ ಸವಿತಾ ವಾಸು, ಸದಸ್ಯರಾದ ಆರ್.ಶ್ರೀನಿವಾಸ್, ಮಧುರಾ ಶಿವಾನಂದ್, ಪ್ರದೀಪ್ ಆಚಾರಿ, ಪ್ರೇಮ ಕಿರಣ್ ಸಿಂಗ್, ಸತೀಶ್ ಬಾಬು, ಪರಶುರಾಮ್, ಸತೀಶ್ ಕೆ., ಸಂತೋಷ್ ರಾಯಲ್ ಇನ್ನಿತರರು ಹಾಜರಿದ್ದರು.