ಕನ್ನಡಪ್ರಭ ವಾರ್ತೆ ಸಕಲೇಶಪುರ
ತುರ್ತು ಪರಿಸ್ಥಿತಿಯಂತಹ ಕರಾಳ ದಿನಗಳು ಮತ್ತೊಮ್ಮೆ ದೇಶಕ್ಕೆ ಬರದಿರಲು ಜನರು ಜಾಗೃತರಾಗಿರಬೇಕು ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.ಶನಿವಾರ ಪಟ್ಟಣದ ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ಸಿಟಿಜನ್ ಫಾರ್ ಸೋಷಿಯಲ್ ಜಸ್ಟಿಸ್ ಸಂಸ್ಥೆ ಆಯೋಜಿಸಿದ್ದ ತುರ್ತು ಪರಿಸ್ಥಿತಿ ಕರಾಳ ದಿನಗಳ 50 ವರ್ಷ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತುರ್ತು ಪರಿಸ್ಥಿತಿ ಕೊನೆಗೊಳ್ಳುವ ಮೂಲಕ 1977ರಲ್ಲಿ ದೇಶಕ್ಕೆ ಎರಡನೇ ಬಾರಿ ಸ್ವಾತಂತ್ರ್ಯ ಲಭಿಸಿದೆ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರಿಗೆ ಭಾರೀ ಪ್ರಮಾಣದ ಚಿತ್ರಹಿಂಸೆ ನೀಡಲಾಗಿದ್ದರೆ, ವೈಯಕ್ತಿಕ ಸ್ವಾತಂತ್ರ್ಯ ಸೇರಿದಂತೆ ಎಲ್ಲ ಸ್ವಾತಂತ್ರ್ಯಗಳನ್ನು ಹರಣ ಮಾಡಿದ ತುರ್ತು ಪರಿಸ್ಥಿತಿಯಂತಹ ಕೆಟ್ಟ ಪರಿಸ್ಥಿತಿ ಎಂದಿಗೂ ಮತ್ತೊಮ್ಮೆ ಬಾರದಿರಲಿ ಎಂದು ಹೇಳಿದರು.
ಆಡಳಿತಗಾರರು ಸರ್ವಾಧಿಕಾರಿಗಳಾದಾಗ ತುರ್ತು ಪರಿಸ್ಥಿತಿಯಂತಹ ಕೆಟ್ಟ ಅನುಭವವನ್ನು ದೇಶ ಅನುಭವಿಸಬೇಕಾಗುತ್ತದೆ. ಅತ್ಯಂತ ಗಟ್ಟಿ ಸಂವಿಧಾನ ಹೊಂದಿರುವ ದೇಶವನ್ನೇ ತುರ್ತು ಪರಿಸ್ಥಿತಿಯೆಡೆಗೆ ಕೊಂಡೊಯ್ಯಲು ಮುಖ್ಯ ಕಾರಣ. ಆಳುವವರ ಅಧಿಕಾರದ ಹಪಾಹಪಿ. ನ್ಯಾಯಾಂಗಕ್ಕೂ ಬೆಲೆ ನೀಡದ ಅಂದಿನ ಆಡಳಿತಗಾರರು ಅಕ್ಷರಶಃ ವಿರೋಧಿಗಳನ್ನು ಹತ್ತಿಕ್ಕಿದ್ದರು. ಅಂದು ತುರ್ತು ಪರಿಸ್ಥಿತಿ ವಿರೋಧಿಸುತ್ತಿದ್ದ ನಾಯಕರೆಲ್ಲ ಜೈಲಿನಲ್ಲಿದ್ದರೆ ಸಾಮಾನ್ಯ ಜನರೇ ಹೋರಾಟ ಕೈಗೆತ್ತಿಕೊಂಡ ಪರಿಣಾಮ ಎರಡು ವರ್ಷಕ್ಕೆ ತುರ್ತು ಪರಿಸ್ಥಿತಿ ಅಂತ್ಯಗೊಂಡಿತ್ತು. ಆದ್ದರಿಂದ, ದೇಶದ ವ್ಯವಸ್ಥೆ ತಿದ್ದಲು ನಾಯಕರೇ ಆಗಬೇಕಿಲ್ಲ. ಸಾಮಾನ್ಯ ಜನರು ಮನಸ್ಸು ಮಾಡಿದರೆ ಯಾವುದೇ ಬದಲಾವಣೆ ಮಾಡಬಹುದಾಗಿದೆ. ಅಧಿಕಾರದಲ್ಲೇ ಮುಂದುವರಿಯುವ ಉದ್ದೇಶದಿಂದ ಸಂವಿಧಾನವನ್ನು ಹಲವು ಬಾರಿ ಬದಲಾವಣೆ ಮಾಡಿದ ಕೀರ್ತಿ ಅಂದಿನ ಕಾಂಗ್ರೆಸ್ ನಾಯಕರಿಗೆ ಸಲ್ಲುತ್ತದೆ. ಆದ್ದರಿಂದ ಅಂದು ಅಧಿಕಾರಕ್ಕಾಗಿ ಅಂದಿನ ನಾಯಕರು ಮಾಡಿದ ತಪ್ಪನ್ನು ಇಂದಿನ ಜನಾಂಗಕ್ಕೆ ತಿಳಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳು ಅಗತ್ಯವಿದೆ ಎಂದರು.ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಮಾತನಾಡಿ, ದೇಶದ ಪ್ರಜಾಪ್ರಭುತ್ವ ಉಳಿವಿಗಾಗಿ ದೇಶಾದ್ಯಂತ ಹೋರಾಟಗಳು ನಡೆದಿವೆ. ಇತಿಹಾಸದಿಂದ ಪಾಠ ಕಲಿತು ವರ್ತಮಾನದಲ್ಲಿ ಬದುಕು ರೂಪಿಸಿಕೊಳ್ಳಬೇಕು. ಆದ್ದರಿಂದ, ಮುಂದೆ ತುರ್ತುಪರಿಸ್ಥಿತಿಯಂತ ಕೆಟ್ಟ ಪರಿಸ್ಥಿತಿ ಮತ್ತೊಮ್ಮೆ ದೇಶಕ್ಕೆ ಬಾರದಿರಲೆಂದು ಇಂತಹ ಘಟನೆಯನ್ನು ನೆನೆಯಬೇಕಿದೆ ಎಂದರು.
ಸಂವಿಧಾನವನ್ನು ಅಂದಿನ ಪ್ರಧಾನಿ ಇಂದಿರಾ ಗಾಂಧಿಯುವರು ಕೊಲೆ ಮಾಡಿದ್ದರು. ದೇಶದ ಸಂವಿಧಾನ ರಚನೆಯ ವೇಳೆ ದೇಶದ ಭವಿಷ್ಯ ಹೇಗಿರಬೇಕು ಎಂದು ದೀರ್ಘಕಾಲ ಚರ್ಚೆ ನಡೆಸಿ ರೂಪಿಸಿರುವಂಥ ಸಂವಿಧಾನ ಭಾರತದ್ದು. ಸಂವಿಧಾನ ಎಷ್ಟೇ ಉತ್ತಮವಾಗಿದ್ದರೂ ಆಳುವವರ ಮೇಲೆ ಸಂವಿಧಾನದ ಆಶಯ ನಿಂತಿರುತ್ತದೆ. ವೈಯಕ್ತಿಕ ಹಿತಕ್ಕೆ ಬಳಸಿಕೊಂಡರೆ ಸಂವಿಧಾನ ಹಾಳಾಗಲಿದೆ, ಅಧಿಕಾರ ಎಂಬುದು ಅಹಂ ಆಗಿ ರೂಪಗೊಂಡಾಗ ತುರ್ತು ಪರಿಸ್ಥಿತಿಯಂತಹ ಸಂದರ್ಭಗಳು ಬರುತ್ತವೆ. ಲೆಕ್ಕಕ್ಕಿಂತ ಹೆಚ್ಚಿನ ಅಧಿಕಾರ ನೀಡಿದಾಗ ಆಳುವವರು ಸರ್ವಾಧಿಕಾರಿಗಳಾಗಲಿದ್ದಾರೆ. ದೇಶವನ್ನೇ ಜೈಲಾಗಿಸಿದ ಮಾಧ್ಯಮಗಳ ವಿರುದ್ಧ ದಿಗ್ಬಂಧನ ವಿಧಿಸಿದ ತುರ್ತು ಪರಿಸ್ಥಿತಿಯಂತಹ ಕರಾಳ ದಿನಗಳು ಮತ್ತೆ ಬಾರದಿರಲು ಜನರು ಜಾಗೃತರಾಗಿರಬೇಕು ಎಂದು ಸಲಹೆ ನೀಡಿದರು.ಈ ವೇಳೆ ತುರ್ತು ಪರಿಸ್ಥಿತಿಯಲ್ಲಿ ಜೈಲುವಾಸ ಅನುಭವಿಸಿದ ಜಿಲ್ಲೆಯ ಹಲವರನ್ನು ಸನ್ಮಾನಿಸಲಾಯಿತು.
ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ. ಬಿಜೆಪಿ ತಾಲೂಕು ಅಧ್ಯಕ್ಷ ವಳಲಹಳ್ಳಿ ಅಶ್ವತ್ಥ್ , ಮುಖಂಡರಾದ ಸತ್ಯ ನಾರಾಯಣ ಗುಪ್ತ, ರೇಣುಕಾರಾಧ್ಯ, ಅಮಿತ್ ಶೆಟ್ಟಿ, ಗಿರೀಶ್, ಕ್ಯಾಮನಹಳ್ಳಿ ರಾಜ್‌ಕುಮಾರ್ ಮುಂತಾದವರಿದ್ದರು.