ಧಾರವಾಡ:
ಸ್ವಾತಂತ್ರ್ಯ ಬಂದ 1947ರಿಂದ 2014ರ ವರೆಗೆ ₹55 ಲಕ್ಷ ಕೋಟಿ ಸಾಲ ಮಾಡಲಾಗಿದ್ದು, ಕಳೆದ ಹತ್ತು ವರ್ಷಗಳಲ್ಲಿ ಸುಮಾರು ₹200 ಲಕ್ಷ ಕೋಟಿಯಷ್ಟು ಸಾಲ ಏರಿಕೆಯಾಗಿದೆ. 70 ವರ್ಷಗಳಲ್ಲಿ ಆಗಿರುವ ಅಭಿವೃದ್ಧಿಗಿಂತ ಹತ್ತು ವರ್ಷಗಳಲ್ಲಿ ಆಗಿದೆಯೇ ಎಂಬ ಕಾರ್ಮಿಕ ಸಚಿವ ಸಂತೋಷ ಲಾಡ್ ಪ್ರಶ್ನಿಸಿದರು.ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈಲು, ರಸ್ತೆ, ತಂತ್ರಜ್ಞಾನ, ಮೂಲಭೂತ ಸೌಕರ್ಯ ಸೇರಿದಂತೆ ದೇಶದ ಒಟ್ಟಾರೆ ಅಭಿವೃದ್ಧಿ ವಿಷಯದಲ್ಲಿ ಕೇಂದ್ರ ಸರ್ಕಾರ ಹಾಗೂ ಬಿಜೆಪಿ ಮುಖಂಡರು ಬರೀ ಸುಳ್ಳು ಹೇಳುತ್ತಿದ್ದಾರೆ. ದೇಶದ ಅಭಿವೃದ್ಧಿ ಕುರಿತು, ಮೂಲಭೂತ ಸಮಸ್ಯೆಗಳ ಚರ್ಚೆ ಮಾಡದ ಬಿಜೆಪಿ ಮುಖಂಡರು ಬರೀ ಕಾಂಗ್ರೆಸ್ ಬಗ್ಗೆ ಸುಳ್ಳು ಹೇಳಿಕೆ ನೀಡುವುದರಲ್ಲಿಯೇ ಹತ್ತು ವರ್ಷಗಳ ಅಧಿಕಾರಿ ಮುಗಿಸಿದರು. ರಾಜ್ಯದಲ್ಲಿ ಭೀಕರ ಬರಗಾಲವಿದೆ. ಬರ ಪರಿಹಾರ ಕೇಳಿದರೆ, ರಾಜ್ಯ ಸರ್ಕಾರ ತಡವಾಗಿ ಪ್ರಸಾವನೆ ನೀಡಿದೆ ಎಂದು ಆರೋಪಿಸುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾಖಲೆ ಸಮೇತ ಅಮಿತ ಶಾ ಅವರಿಗೆ ಮನವರಿಕೆ ಮಾಡಿದ್ದಾರೆ. ಕೇಂದ್ರದ ಅಧಿಕಾರಿಗಳ ಸಮಿತಿ ಕರ್ನಾಟಕ ಬಂದು ಸ್ವತಃ ಬರದ ಪರಿಶೀಲನೆ ಮಾಡಿದ್ದಾರೆ. ಇನ್ನು, ದೇಶದ ಜನತೆಗೆ ತೊಂದರೆ ಬಂದಾಗ ಮೋದಿ ಅವರು ಸ್ಪಂದಿಸುತ್ತಾರೆ ಎಂದೆಲ್ಲ ಹೇಳಲಾಗುತ್ತಿದೆ. ಆದರೆ, ಕರ್ನಾಟಕಕ್ಕೆ ಬರ ಬಂದಾಗ ಏತಕ್ಕೆ ಸ್ಪಂದಿಸಲಿಲ್ಲ? ನಮ್ಮ ತೆರಿಗೆ ದುಡ್ಡು ಕೊಡಲು ರಾಜ್ಯ ಕಾಂಗ್ರೆಸ್ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಹೋಗಬೇಕಾ ಎಂದು ಲಾಡ್ ಪ್ರಶ್ನಿಸಿದರು.
ಪ್ರಹ್ಲಾದ ಜೋಶಿ ಅವರು ಕೇಂದ್ರ ಸಚಿವರಾಗಿದ್ದು ಸಂಸತ್ತಿನಲ್ಲಿ ಕಳಸಾ -ಬಂಡೂರಿ ಸೇರಿದಂತೆ ಎಷ್ಟು ವಿಷಯಗಳ ಬಗ್ಗೆ ಗಂಭೀರವಾಗಿ ಚರ್ಚೆ ಮಾಡಿ ಅದಕ್ಕೆ ಪರಿಹಾರ ಕೊಡಿಸಿದ್ದಾರೆ? ಎಂದ ಅವರು, ಪ್ರಧಾನಿ ಮೋದಿ ಅವರು ಪ್ರಹ್ಲಾದ ಜೋಶಿ ಅವರಿಗೆ ಪ್ರಶಂಸನಾ ಪತ್ರ ನೀಡಿರುವುದಕ್ಕೆ, ಒಬ್ಬ ಸುಳ್ಳು ಗುರು ಇನ್ನೊಬ್ಬ ಸುಳ್ಳು ಗುರುವಿಗೆ ಪ್ರಶಂಸೆ ನೀಡಿದರೆ ಏನರ್ಥ? ಎಂದರು.ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸುವಷ್ಟು ಮೋದಿ ಪ್ರಭಾವಿ ಮೋದಿ ಇರುವಾಗ ಕಳಸಾ ಬಂಡೂರಿ ಯೋಜನೆ ಜಾರಿ ಮಾಡಲು ಏತಕ್ಕಾಗುತ್ತಿಲ್ಲ ಎಂದು ಪ್ರಶ್ನಿಸಿದರು.
ಪ್ರಹ್ಲಾದ ಜೋಶಿ ಅವರು ಹುಬ್ಬಳ್ಳಿ-ಧಾರವಾಡ ಅವಳಿ ನಗರವನ್ನು ಬೆಂಗಳೂರು ಮಾಡುತ್ತೇನೆ ಎಂದಿದ್ದಾರೆ. ಯಾವ ರೀತಿ ಬೆಂಗಳೂರು ಮಾಡುತ್ತೀರಿ ಹೇಳಿ? ಹುಬ್ಬಳ್ಳಿ-ಧಾರವಾಡ ಮಾತ್ರವಲ್ಲದೇ ಯಾವುದೇ ನಗರ ರಾಜಧಾನಿ ಆಗಲು ಸಾಧ್ಯವಿಲ್ಲ. 20 ವರ್ಷಗಳಿಂದ ತುಮಕೂರು ಇನ್ನೂ ಹಾಗೆಯೇ ಇದೆ. ಇನ್ನು ಅವಳಿ ನಗರ ಹೇಗೆ ಬೆಂಗಳೂರು ಆಗಲಿದೆ? ಎಂದರು.ದೇಶದ ಆಗು-ಹೋಗುಗಳ ಬಗ್ಗೆ ಬಗ್ಗೆ ಚರ್ಚಿಸಲು ನಾವು ರಾಹುಲ್ ಗಾಂಧಿ ಅವರನ್ನು ಕರೆಸಲು ಸಿದ್ಧ. ಅದೇ ರೀತಿ ಪ್ರಹ್ಲಾದ ಜೋಶಿ ಅವರು ಮೋದಿ ಅವರನ್ನು ಸಂವಾದ, ಚರ್ಚೆಗೆ ಕರೆಯಿಸಲು ಸಿದ್ಧರಿದ್ದಾರೆಯೇ? ನಮ್ಮ ಪ್ರಶ್ನೆಗಳಿಗೆ ಬರೀ ಹಾರಿಕೆ ಉತ್ತರ ಹೇಳಿ ಹೋಗುವುದಲ್ಲ. ದೇಶದ ಜನರಿಗೆ ತಾವು ಏನು ಮಾಡಿದ್ದೀರಿ ಎಂಬುದನ್ನು ಸ್ಪಷ್ಟವಾಗಿ ಹೇಳಬೇಕು. ಅಂದಾಗ ತಮ್ಮನ್ನು ಒಪ್ಪುತ್ತೇವೆ ಎಂದು ಸಂತೋಷ ಲಾಡ್ ಹೇಳಿದರು.