ಶೃಂಗೇರಿ ಪಪಂನಲ್ಲಿ ಭರ್ತಿಗಿಂತ ಖಾಲಿ ಹುದ್ದೆಗಳೇ ಹೆಚ್ಚು । ಒಟ್ಟು 13 ಕಾಯಂ ಹುದ್ದೆಗಳು ಖಾಲಿ
ನೆಮ್ಮಾರ್ ಅಬೂಬಕರ್ಕನ್ನಡಪ್ರಭ ವಾರ್ತೆ, ಶೃಂಗೇರಿ
ಸುಸಜ್ಜಿತ ಕಟ್ಟಡ, ಮೂಲಸೌಕರ್ಯಗಳಿವೆ. ಆದರೆ ಕಚೇರಿ ಕಾರ್ಯನಿರ್ವಹಿಸಲು ಅಗತ್ಯ ಅಧಿಕಾರಿ, ಸಿಬ್ಬಂದಿ ಕೊರತೆ ಎದ್ದು ಕಾಣುತ್ತಿದೆ. ಇದು ಪಟ್ಟಣದ ಹೃದಯಭಾಗದಲ್ಲಿರುವ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿನ ಕಥೆ-ವ್ಯಥೆ.ಸುಮಾರು 11 ವಾಡ್ ಗಳನ್ನು ಹೊಂದಿರುವ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಒಟ್ಟು 13 ಖಾಯಂ ಹುದ್ದೆಗಳು ಖಾಲಿ ಇದ್ದು ಪ್ರಥಮ ದರ್ಜೆ ಸಹಾಯಕ ಹುದ್ದೆ 1, ದ್ವಿತೀಯ ದರ್ಜೆ ಸಹಾಯಕ ಹುದ್ದೆ 3, ಕಿರಿಯ ಅಭಿಯಂತರರು, ಕಂದಾಯ ನಿರೀಕ್ಷಕರು, ಕಿರಿಯ ಆರೋಗ್ಯ ನಿರೀಕ್ಷಕರು, ಸಮುದಾಯ ಸಂಘಟನಾ ಅಧಿಕಾರಿ, ಸಮುದಾಯ ಸಂಘಟಕರು,ಬಿಲ್ ಕಲೆಕ್ಟರ್ ತಲಾ ಒಂದೊಂದು ಹುದ್ದೆ, ಪೌರಕಾರ್ಮಿಕರ 3 ಹುದ್ದೆಗಳನ್ನೊಳಗೊಂಡಿದೆ.
ಖಾಲಿಯಿರುವ ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ಜಿಲ್ಲಾಧಿಕಾರಿ ಆದೇಶಿಸಿದ್ದರೂ ಕೆಲಸಕ್ಕೆ ಅಧಿಕಾರಿ ಇನ್ನೂ ನಿಯುಕ್ತಿಯಾಗಿಲ್ಲ. ಕಂದಾಯ ನಿರೀಕ್ಷಕರು ಕೊಪ್ಪ ತಾಲೂಕಿಂದ ವಾರಕ್ಕೆ ಎರಡು ದಿನ ಬಂದು ಕಾರ್ಯನಿರ್ವಹಿಸಲು ಆದೇಶವಿದ್ದರೂ ಸೂಕ್ತ ಕಾಲಕ್ಕೆ ಲಭ್ಯವಾಗುತ್ತಿಲ್ಲ. ಹುದ್ದೆಗಳು ಖಾಲಿ ಇರುವುದರಿಂದ ಕಚೇರಿ ಖಾಲಿಯಾಗಿ ಭಣಗುಟ್ಚುತ್ತಿದೆ. ಅಗತ್ಯ ಕೆಲಸಗಳು ನಡೆಯುತ್ತಿಲ್ಲ. ಕಚೇರಿಗೆ ಬರುವ ಜನ ಪರದಾಡಬೇಕಿದೆ. ಕಡತ, ಪತ್ರಗಳಿಗೆ ಸಹಿ ಹಾಕುವವರು ಇಲ್ಲದೆ, ಅಧಿಕಾರಿಗಳ ಕೊರತೆ ಇರುವುದರಿಂದ ಕೆಲಸದ ಹೊರೆಯಲ್ಲ ಬೆರಳಣಿಕೆಯಷ್ಟು ಸಿಬ್ಬಂದಿ ಮೇಲೆ ಬೀಳುತ್ತಿದೆ.ಇನ್ನು ಪೌರಕಾರ್ಮಿಕ ಹದ್ದೆಗಳಿಗೆ ಇರುವ ಒಟ್ಟು 5 ಖಾಯಂ ಹುದ್ದೆಯಲ್ಲಿ 3 ಮಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದು ಇನ್ನುಳಿದ 2 ಹುದ್ದೆಗಳು ಖಾಲಿ ಇವೆ. ಸುಮಾರು 12 ಪೌರಕಾರ್ಮಿಕರು ಹೊರಗುತ್ತಿಗೆ ನೌಕರರಾಗಿ ಸುಮಾರು 13 ವರ್ಷ ಗಳಿಂದ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಯಾವುದೇ ಭದ್ರತೆಯಿಲ್ಲ. ಕೆಲಸವೂ ಖಾಯಂ ಆಗಿಲ್ಲ. ಸೇವಾ ಖಾಯಮಾತಿಗೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿ ವರ್ಷ ಅನಿರ್ದಿಷ್ಟಾವಧಿ ಮುಷ್ಕರ, ಪ್ರತಿಭಟನೆ ನಡೆಸುತ್ತಲೇ ಬಂದಿದ್ದಾರೆ. ಆದರೂ ಈ ಹೊರಗುತ್ತಿಗೆ ಪೌರಕಾರ್ಮಿಕರಿಗೆ ಇನ್ನೂ ಸೇವೆಯಲ್ಲಿ ಖಾಯಂಗೊಳಿಸಿಲ್ಲ. ವಿಶೇಷ ಪ್ರಕರಣವೆಂದು ಸೇವೆಯಲ್ಲಿ ಕಾಯಂಗೊಳಿಸುವ ಭರವಸೆ ನೀಡಿದ್ದರೂ, ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಹೊರಗುತ್ತಿಗೆ ನೌಕರರಾಗಿಯೇ ದುಡಿಯುತ್ತಿದ್ದಾರೆ.
ಶೃಂಗೇರಿ ಪ್ರಮುಖ ಪ್ರವಾಸಿ ಸ್ಥಳವಾಗಿದ್ದು ಇಲ್ಲಿಗೆ ಪ್ರತೀ ವರ್ಷ 50 ಲಕ್ಷ ಪ್ರವಾಸಿಗರು ಬರುತ್ತಾರೆ. ಪಟ್ಟಣದ ಮನೆ ಮನೆಯ ಕಸ, ಪ್ರವಾಸಿಗರು ಎಸೆಯುವ ತ್ಯಾಜ್ಯ, ಕಸ ಸಂಗ್ರಹಣೆ ಮಾಡಿ ವಿಲೆವಾರಿ ಮಾಡುವುದು ಇವರ ದಿನನಿತ್ಯದ ಕಾಯಕ. ದಿನನಿತ್ಯದ ಒತ್ತಡದ ನಡುವೆ ಇವರು ಕೆಲಸ ಮಾಡುತ್ತಿದ್ದಾರೆ. ಇನ್ನಾದರೂ ಸರ್ಕಾರ ಖಾಲಿಯಿರುವ ಹುದ್ದೆಗಳಿಗೆ ಅಧಿಕಾರಿ ಸಿಬ್ಬಂದಿಯನ್ನು ನೇಮಕ ಮಾಡಿ ಪಟ್ಟಣ ಪಂಚಾಯಿತಿ ಕೆಲಸ ಕಾರ್ಯಗಳಿಗೆ ಚುರುಕು ಮುಟ್ಟಿಸಿ ಜನರಿಗಾಗುವ ತೊಂದರೆ ತಪ್ಪಿಸಲು ಗಮನ ಹರಿಸಬೇಕಿದೆ.ಪಪಂ ಆಡಳಿತ ಯಂತ್ರ ಕುಸಿಯುತ್ತಿದೆ:
ಪಪಂ 2 ನೇ ಆಡಳಿತಾವಧಿಯ ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ 1 ವರ್ಷ ಕಳೆದರೂ ಪ್ರಕಟವಾಗಿಲ್ಲ. ಚುನಾವಣೆ ನೀತಿ ಸಂಹಿತೆಯೂ ಮುಗಿದಿದೆ. ಪಪಂ ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ. ಯಾರು ಹೇಳುವವರು ಕೇಳವವರೆ ಇಲ್ಲವಾಗಿದೆ. ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು ಅಗತ್ಯ ಕ್ರಮ ಕೈಗೊಳ್ಳಬೇಕಿದೆ.-ಎಂ.ಎಲ್.ಪ್ರಕಾಶ್.ಪಪಂ ಮಾಜಿ ಉಪಾಧ್ಯಕ್ಷ.ಇರುವ ಅಧಿಕಾರಿ, ಸಿಬ್ಬಂದಿಯಿಂದಲೇ ಕೆಲಸ
ಸದ್ಯಕ್ಕೆ ಹಾಲಿ ಇರುವ ಅಧಿಕಾರಿ ಸಿಬ್ಬಂದಿಗೆ ಕೆಲಸ ಕಾರ್ಯ ಮಾಡಲಾಗುತ್ತಿದೆ. ಹುದ್ದೆಗಳ ಖಾಲಿಯಿಂದ ಜನರಿಗೆ ತೊಂದರೆಯಾಗುತ್ತಿದೆ. ಸರ್ಕಾರ ಅಧಿಕಾರಿ, ಸಿಬ್ಬಂದಿಯನ್ನು ನೇಮಕ ಮಾಡಿದರೆ ಕಚೇರಿ ಕೆಲಸ ಕಾರ್ಯಗಳಿಗೆ, ಜನರಿಗೆ ಒಳ್ಳೆಯದಾಗುತ್ತದೆ.-ಶ್ರೀಪಾದ್ ಕಾವ್
ಮುಖ್ಯಾಧಿಕಾರಿ., ಪಟ್ಟಣ ಪಂಚಾಯಿತಿ-
ಪೌರಕಾರ್ಮಿಕರ ಬೇಡಿಕೆ ನಿರ್ಲಕ್ಷ್ಯ:ಕಳೆದ 13 ವರ್ಷಗಳಿಂದ ಹೊರಗುತ್ತಿಗೆ ಪೌರಕಾರ್ಮಿಕರು ನಿರಂತರ ಹೋರಾಟ, ಪ್ರತಿಭಟನೆ, ಮುಷ್ಕರ ನಡೆಸುತ್ತಲೇ ಬಂದಿದ್ದಾರೆ. ಕೇವಲ ಭರವಸೆಗಳನ್ನು ಮಾತ್ರ ನೀಡುತ್ತಾ ಬಂದಿದ್ದಾರೆ. ಬೇಡಿಕೆಗಳಿಗೆ ಸ್ಪಂದಿಸಿಲ್ಲ. ಇನ್ನಾದರೂ ಶೃಂಗೇರಿ ಪೌರಕಾರ್ಮಿಕರ ಸಮಸ್ಯೆ ವಿಶೇಷ ಪ್ರಕರಣ ಎಂದು ಪರಿಗಣಿಸಿ ಸೇವೆ ಖಾಯಂಗೊಳಿಸಬೇಕು. ಪೌರಕಾರ್ಮಿಕರ ಬೇಡಿಕೆ ಗಳನ್ನು ಈಡೇರಿಸಬೇಕು.
-ಸುಖೇಶ್ಅಧ್ಯಕ್ಷ, ತಾಲೂಕು ಪೌರಕಾರ್ಮಿತರ ಸಂಘ
21 ಶ್ರೀ ಚಿತ್ರ 1-ಶೃಂಗೇರಿ ಪಟ್ಟಣದಲ್ಲಿರುವ ಪಟ್ಟಣ ಪಂಚಾಯಿತಿ ಕಚೇರಿ ಕಟ್ಟಡ